ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮಿಯಿಂದ ₹ 1.5 ಕೋಟಿ ಸುಲಿಗೆ: ಜಿಎಸ್‌ಟಿಯ ನಾಲ್ವರು ಅಧಿಕಾರಿಗಳ ಸೆರೆ

ನಾಲ್ವರು ಆರೋಪಿಗಳು ಹತ್ತು ದಿನ ಕಸ್ಟಡಿಗೆ
Published : 11 ಸೆಪ್ಟೆಂಬರ್ 2024, 21:19 IST
Last Updated : 11 ಸೆಪ್ಟೆಂಬರ್ 2024, 21:19 IST
ಫಾಲೋ ಮಾಡಿ
Comments

ಬೆಂಗಳೂರು: ಶೋಧದ ನೆಪದಲ್ಲಿ ಉದ್ಯಮಿಯೊಬ್ಬರ ಕಂಪನಿ ಮೇಲೆ ದಾಳಿ ನಡೆಸಿ, ₹1.5 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇಲಾಖೆಯ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಮತ್ತು ಪೂರ್ವ ವಿಭಾಗದ ಪೊಲೀಸ್‌ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಜೀವನ್ ಬಿಮಾನಗರದ ಜಿ.ಎಂ. ಪಾಳ್ಯದಲ್ಲಿ ನೆಲಸಿರುವ ಉದ್ಯಮಿ ಕೇಶವ್ ತಕ್ ನೀಡಿದ ದೂರಿನ ಮೇರೆಗೆ ಜಿಎಸ್‌ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ದಕ್ಷಿಣ ವಲಯದ ಅಧೀಕ್ಷಕ ಅಭಿಷೇಕ್, ಹಿರಿಯ ಗುಪ್ತಚರ ಅಧಿಕಾರಿಗಳಾದ ಮನೋಜ್‌ ಸೈನಿ, ನಾಗೇಶ್ ಬಾಬು ಹಾಗೂ ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್‌ ಅವರನ್ನು ಮಂಗಳವಾರ ಬಂಧಿಸಲಾಗಿದೆ.

‘ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 32 ಮೊಬೈಲ್ ಫೋನ್‌, ಎರಡು ಲ್ಯಾಪ್‌ಟಾಪ್ ಹಾಗೂ 50 ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ಸುಲಿಗೆ ಮಾಡಿರುವ ಹಣದ ಪತ್ತೆ ಕಾರ್ಯ ಹಾಗೂ ಉದ್ಯಮಿ ಕೇಶವ್ ತಕ್ ಮನೆ ಮೇಲೆಯೇ ದಾಳಿ ನಡೆಸಲು ಕಾರಣವೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿಗಳು ಉದ್ದೇಶಪೂರ್ವಕವಾಗಿ ಉದ್ಯಮಿಯನ್ನು ಸುಲಿಗೆ ಮಾಡಲು ಬಂದಿದ್ದರು ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣ ದಾಖಲಿಸಿದ್ದ ಬೈಯಪ್ಪನಹಳ್ಳಿ ಪೊಲೀಸರು ಮೊದಲು ಆರೋಪಿ ಅಭಿಷೇಕ್ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಜಿಎಸ್‌ಟಿ ಅಧಿಕಾರಿ ಎಂಬುದು ಖಚಿತವಾಯಿತು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಯಿತು. ಅಭಿಷೇಕ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡವು ಉಳಿದ ಮೂವರನ್ನು ಜಿಎಸ್‌ಟಿ ಕಚೇರಿಯಲ್ಲಿಯೇ ವಶಕ್ಕೆ ಪಡೆದು ಬಂಧಿಸಿತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇ.ಡಿ ಹೆಸರು ಬಳಕೆ: ‘ಬಂಧಿತ ನಾಲ್ವರು ಜಿಎಸ್‌ಟಿ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಎಂದು ಹೇಳಿಕೊಂಡು ಆಗಸ್ಟ್ 30ರಂದು ನಮ್ಮ ಮನೆಗೆ ಬಂದಿದ್ದರು. ಮನೆಯಿಂದ ನನ್ನನ್ನು ಹಾಗೂ ಪವನ್ ತಕ್, ಮುಕೇಶ್‌ ಜೈನ್, ರಾಕೇಶ್ ಮನಕ್ ಚಂದನಿ ಎಂಬವರನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ನಮ್ಮ ಕಂಪನಿ ಕಚೇರಿಗೆ ತೆರಳಿದ್ದರು. ಅಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿ ಪ್ರತ್ಯೇಕ ಕೊಠಡಿಯಲ್ಲಿ ಕೂಡಿಹಾಕಿದ್ದರು. ನಂತರ ಕಚೇರಿಯಿಂದ ಎಲ್ಲರನ್ನೂ ಇಂದಿರಾನಗರಕ್ಕೆ ಕಾರಿನಲ್ಲಿ ಕರೆದೊಯ್ದರು. ನಮ್ಮೆಲ್ಲರ ಮೊಬೈಲ್ ಫೋನ್‌ಗಳನ್ನು ಫ್ಲೈಟ್ ಮೋಡ್‌ಗೆ ಹಾಕಿಸಿದ್ದರು.

₹3 ಕೋಟಿ ಕೊಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಅವರ ಸೂಚನೆಯಂತೆ ರೋಷನ್ ಜೈನ್ ಎಂಬವರಿಗೆ ನಾನು ವಾಟ್ಸ್‌ಆ್ಯಪ್ ಕರೆ ಮಾಡಿ ₹3 ಕೋಟಿ ತರಲು ಹೇಳಿದ್ದೆ. ಹಣ ತರುವುದು ತಡವಾದ ಕಾರಣ ನನ್ನ ಮೇಲೆ ಪುನಃ ಹಲ್ಲೆ ನಡೆಸಿದ್ದರು. ಸೆಪ್ಟೆಂಬರ್‌ 1ರ ತಡರಾತ್ರಿ 2.30ರ ಸಮಯದಲ್ಲಿ ಮುಕೇಶ್ ಜೈನ್ ಎಂಬವರು ₹1.50 ಕೋಟಿ ತಂದು ಕೊಟ್ಟ ಬಳಿಕ ನಮ್ಮನ್ನು ಬಿಟ್ಟು ಕಳುಹಿಸಿದರು’ ಎಂದು ಕೇಶವ್‌ ತಕ್‌ ಅವರು ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಗೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದರು.

‘ಉದ್ಯಮಿ ಮನೆ ಮೇಲೆ ದಾಳಿ ನಡೆಸಿರುವುದಕ್ಕೆ ನೋಟಿಸ್ ನೀಡಿರಲಿಲ್ಲ. ದೂರವಾಣಿ ಸಂಖ್ಯೆಯನ್ನೂ ನೀಡಿರಲಿಲ್ಲ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ದಾಳಿ ನಡೆಸಲಾಗಿದೆ. ಹಣ ಸುಲಿಗೆ ಮಾಡುವ ಉದ್ದೇಶದಿಂದಲೇ ಈ ರೀತಿ ಕೃತ್ಯ ಎಸೆಗಲಾಗಿದೆ. ಉದ್ಯಮಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ದೂರಿನಲ್ಲೇನಿದೆ?: ‘ಜೀವನ್ ಬಿಮಾನಗರದಲ್ಲಿ ಮೆಕ್ಸೊ ಸಲ್ಯೂಷನ್​ ಎಂಬ ಖಾಸಗಿ ಕಂಪನಿಯನ್ನು ನಾನು ನಡೆಸುತ್ತಿದ್ದು, ನನ್ನ ಮನೆಗೆ ಆ. 31ರಂದು ಇ.ಡಿ ಹಾಗೂ ಜಿಎಸ್​ಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಆರೋಪಿಗಳು ಬಂದಿದ್ದರು. ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡರು’ ಎಂದು ಕೇಶವ್ ತಕ್ ದೂರಿನಲ್ಲಿ ತಿಳಿಸಿದ್ದಾರೆ.

‘ಶೋಧನೆಗೆ ಅನುಮತಿಯೇ ಇರಲಿಲ್ಲ’
ಅಭಿಷೇಕ್‌ ಬಂಧನದ ಬಳಿಕ ಉಳಿದ ಮೂವರನ್ನು ವಶಕ್ಕೆ ಪಡೆಯಲು ಜಿಎಸ್‌ಟಿ ವಲಯ ಕಚೇರಿಗೆ ತೆರಳಿದ್ದ ಸಿಸಿಬಿಯ ಪೊಲೀಸ್‌ ಅಧಿಕಾರಿಗಳು, ಅಲ್ಲಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚಿಸಿದ್ದರು. ಕೇಶವ್‌ ತಕ್‌ ಕಂಪನಿ ಕಚೇರಿ ಅಥವಾ ಮನೆಯಲ್ಲಿ ಶೋಧಕ್ಕೆ ಅನುಮತಿ ನೀಡಿರಲಿಲ್ಲ ಎಂದು ಖಚಿತಪಡಿಸಿದ್ದ ಜಿಎಸ್‌ಟಿ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ಕರೆದೊಯ್ಯುವಂತೆ ಹೇಳಿದ್ದರು ಎಂದೂ ಮೂಲಗಳು ತಿಳಿಸಿವೆ.

ಪೊಲೀಸರ ಕಣ್ತ‍ಪ್ಪಿಸಲು ಖಾಸಗಿ ಕಾರು

‘ಆರೋಪಿಗಳು ಕೃತ್ಯಕ್ಕೆ ಖಾಸಗಿ ಕಾರನ್ನು ಬಳಸಿದ್ದರು. ಆರಂಭದಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. 15 ಕಿ.ಮೀ. ವರೆಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮನೆಯಿಂದ ಎರಡು ರಸ್ತೆ ಬಿಟ್ಟು ಕಾರು ನಿಲ್ಲಿಸಿ, ನಡೆದುಕೊಂಡೇ ಕೇಶವ್ ತಕ್‌ ಅವರ ಮನೆಗೆ ಆರೋಪಿಗಳು ಬಂದಿರುವುದು ಗೊತ್ತಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯಲ್ಲಿ ಕಾರಿನ ನೋಂದಣಿ ಸಂಖ್ಯೆ ಪತ್ತೆಹಚ್ಚಿ, ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಜಿಎಸ್‌ಟಿ ಅಧಿಕಾರಿ ಅಭಿಷೇಕ್‌ ಕಾರನ್ನು ಕೊಂಡೊಯ್ದಿದ್ದ ಮಾಹಿತಿ ವಾಹನ ಮಾಲೀಕನಿಂದ ಲಭಿಸಿತು. ಅದೇ ಸುಳಿವು ಆಧರಿಸಿ ಪ್ರಮುಖ ಆರೋಪಿಯನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

‘ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ತಂತ್ರ ರೂಪಿಸಿದ್ದ ಆರೋಪಿಗಳು, ಕೃತ್ಯದ ಸಂದರ್ಭದಲ್ಲಿ ಮೊಬೈಲ್‌ಗಳನ್ನು ಫ್ಲೈಟ್‌ ಮೋಡ್‌ನಲ್ಲಿ ಇರಿಸಿಕೊಂಡಿದ್ದರು. ಆ ಸಮಯದಲ್ಲಿ ನಾಲ್ವರ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಇದ್ದವು ಎಂಬುದು ಕರೆ ವಿವರಗಳ (ಸಿಡಿಆರ್‌) ಮಾಹಿತಿ ಸಂಗ್ರಹಿಸಿದಾಗ ಖಚಿತವಾಯಿತು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT