ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ಕಬ್ಬನ್ನು ತಾವೇ ಬೆಲ್ಲ ಮಾಡುವ ಮಹೇಶ ಬೆಲನ್ನವರ

ನೈಸರ್ಗಿಕ ಕೃಷಿಯಿಂದ ಖುಷಿ...
Last Updated 18 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗುವುದಿಲ್ಲ. ಅಲ್ಲದೇ, ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಭೂಮಿಯ ಫಲವತ್ತತೆ ಕಾಪಾಡಿಕೊಂಡು ಹೋಗುವ ಜೊತೆಗೆ ಆರೋಗ್ಯಕರ ಆಹಾರ ಧಾನ್ಯಗಳನ್ನೂ ಪಡೆಯಬಹುದು’.

– ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಮುಗಳಿ ಗ್ರಾಮದ ಯುವ ಕೃಷಿಕ ಮಹೇಶ ಬೆಲನ್ನವರ ಅವರ ಅನುಭವದ ಮಾತುಗಳಿವು.

15 ವರ್ಷಗಳಿಂದ ಅವರು ಬೆಳೆಯುತ್ತಿರುವ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಪೂರೈಸಿಲ್ಲ. ತಮ್ಮದೇ ಆದ ಗಾಣದಲ್ಲಿ ಸಾವಯವ ಪದ್ಧತಿಯಲ್ಲಿ ಬೆಲ್ಲ ತಯಾರಿಸಿ, ನೇರವಾಗಿ ಗ್ರಾಹಕರು ಹಾಗೂ ವರ್ತಕರಿಗೆ ಮಾರುತ್ತಾರೆ. ಎಕರೆಯಲ್ಲಿ ಸರಾಸರಿ 80ರಿಂದ 100 ಟನ್ ಕಬ್ಬು ಬೆಳೆಯುವ ಅವರು, ಅದರಿಂದ 10 ಟನ್‌ನಷ್ಟು ಬೆಲ್ಲ ತಯಾರಿಸುತ್ತಾರೆ. ತಲಾ ಒಂದು ಕೆ.ಜಿ. ತೂಕದ ಗಟ್ಟಿ ಬೆಲ್ಲ, ಪುಡಿ ಬೆಲ್ಲ ಮತ್ತು ಅರ್ಧ ಮತ್ತು ಒಂದು ಲೀಟರ್ ತೂಕದ ಕಾಕಂಬಿ ಬಾಟಲಿಗಳನ್ನು ಪ್ಯಾಕ್ ಮಾಡುತ್ತಾರೆ.

ಬೆಲ್ಲ ತಯಾರಿಕೆ:

‘ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ. ಬೆಲ್ಲಕ್ಕೆ ಸರಾಸರಿ 50ರಿಂದ 70 ಮಾರಾಟವಾಗುತ್ತಿದೆ. ಎಕರೆಯೊಂದರಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ ಮಾರಿದರೆ ಕನಿಷ್ಠ ₹ 5 ಲಕ್ಷ ಆದಾಯ ಗಳಿಸಬಹುದು. ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕೊಟ್ಟರೆ ಟನ್ ಕಬ್ಬಿಗೆ ₹ 3ಸಾವಿರದಂತೆ ಲೆಕ್ಕ ಹಾಕಿದರೂ ₹ 3 ಲಕ್ಷ ಆದಾಯವಷ್ಟೇ ಬರುತ್ತದೆ. ಸ್ಥಳೀಯ ಮಾರುಕಟ್ಟೆ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ವಿವಿಧೆಡೆ ಬೇಡಿಕೆಗೆ ಅನುಗುಣವಾಗಿ ಬೆಲ್ಲ ಪೂರೈಸುತ್ತೇನೆ. ವರ್ಷವಿಡೀ ಬೆಲ್ಲ ತಯಾರಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ’ ಎಂದು ತಿಳಿಸುತ್ತಾರೆ ಅವರು.

ಸದ್ಯ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 8 ಅಡಿಗಳ ಅಂತರದಲ್ಲಿ ಕಬ್ಬು ಬೆಳೆದಿದ್ದಾರೆ. ಅದರ ಮಧ್ಯೆ 2 ಸಾಲು ಅರಿಸಿನ ಹಾಕಿದ್ದಾರೆ. ಕಬ್ಬು ಕಟಾವು ಚಾಲ್ತಿಯಲ್ಲಿದ್ದು, ಫೆಬ್ರುವರಿವರೆಗೆ ಅರಿಸಿನ ಬೆಳೆ ಕೈ ಸೇರುತ್ತದೆ. ಎಕರೆಗೆ 6ರಿಂದ 7 ಕ್ವಿಂಟಲ್‌ ಅರಿಸಿನ ಇಳುವರಿ ಬರುತ್ತದೆ ಎಂದು ತಿಳಿಸಿದರು.

ಪುಡಿ ಮಾಡಿ ಮಾರಾಟಕ್ಕೆ: ಅರಿಸಿನವನ್ನೂ ಅವರು ನೇರವಾಗಿ ಮಾರುಕಟ್ಟೆಗೆ ಕೊಡುವುದಿಲ್ಲ. ಯಂತ್ರದಲ್ಲಿ ಪುಡಿ ಮಾಡಿ ಸ್ಯಾಚೆಗಳಲ್ಲಿ ಪ್ಯಾಕ್ ಮಾಡಿ ಬೆಂಗಳೂರು, ತುಮಕೂರು ಮೊದಲಾದ ಕಡೆಗಳಿಗೆ ಪೂರೈಸುತ್ತಾರೆ. ಸಾಮಾನ್ಯವಾಗಿ ಅರಿಸಿನದ ಬೇರುಗಳನ್ನು ಬೇಯಿಸಿ ಪುಡಿ ಮಾಡಲಾಗುತ್ತದೆ. ಆದರೆ, ಮಹೇಶ ಅವರು ಬೇಯಿಸದೇ ಅರಿಸಿನ ಪುಡಿ ತಯಾರಿಸುತ್ತಾರೆ. ಕೆ.ಜಿ. ಪುಡಿಗೆ ಮಾರುಕಟ್ಟೆಯಲ್ಲಿ ₹ 200 ದರ ಸಿಗುತ್ತಿದೆ.

‘ಮುಂಬೈನ ವೈದ್ಯರೊಬ್ಬರು, ಬೀಸುವ ಕಲ್ಲಿನಲ್ಲಿ ಪುಡಿ ಮಾಡಿದ ಅರಿಸಿನ ಪುಡಿ ಪೂರೈಸುವಂತೆ ತಿಳಿಸಿದ್ದಾರೆ. ಅದರಿಂದ ಕೆ.ಜಿ.ಗೆ ₹ 300 ದರ ಸಿಗಲಿದೆ. ಪುಡಿಯನ್ನು ಆಯುರ್ವೇದ ಔಷಧಿಗಾಗಿ ಬಳಸಬಹುದಾಗಿದೆ’ ಎಂದು ತಿಳಿಸಿದರು.

4 ಸಾಲು ಕಡಲೆ, ಒಂದು ಸಾಲು ಜೋಳ ಮತ್ತು 4 ಸಾಲು ಕುಸುಬಿ ಮತ್ತು ಒಂದು ಸಾಲು ಜೋಳ ಹೀಗೆ ಏಕದಳ ಮತ್ತು ದ್ವಿದಳ ಮಿಶ್ರ ಬೆಳೆಯನ್ನೂ ಬೆಳೆಯುತ್ತಿದ್ದಾರೆ. ಶೇಂಗಾ, ಹುರುಳಿ ಹಾಗೂ ಸಿರಿಧಾನ್ಯಗಳನ್ನೂ ಅವರು ನೈಸರ್ಗಿಕ ಪದ್ಧತಿಯಲ್ಲಿ ಬೆಳೆಯುತ್ತಾರೆ. ಕೊಟ್ಟಿಗೆ ಮತ್ತು ಹಸಿರೆಲೆ ಗೊಬ್ಬರ ಮಾತ್ರ ನೀಡುತ್ತಾರೆ. ಹನಿ ನೀರಾವರಿ ಅಳವಡಿಸಿದ್ದಾರೆ.

‘2002ರಲ್ಲಿ ಕೂಡಲಸಂಗಮದಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೂಂಡಿದ್ದಾಗ ಕೃಷಿ ತಜ್ಞ ಸುಭಾಷ ಪಾಳೇಕರ ಅವರಿಂದ ಪ್ರಭಾವಿತಗೊಂಡು ನೈಸರ್ಗಿಕ ಕೃಷಿ ಅಳವಡಿಸಿಕೊಂಡಿದ್ದೇನೆ. ಇದರಿಂದ ಅನುಕೂಲವಾಗುತ್ತಿದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ: 9480429982.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT