ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಗಾವಣೆಯಲ್ಲಿ ಲಂಚದ ವ್ಯವಹಾರ ನಡೆದಿಲ್ಲ, ನೇಮಕಾತಿಯಲ್ಲಿ ಪಾರದರ್ಶಕತೆ: ಸುಧಾಕರ್‌

Published : 21 ಮಾರ್ಚ್ 2022, 19:45 IST
ಫಾಲೋ ಮಾಡಿ
Comments

ಬೆಂಗಳೂರು: ‘ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ನೇಮಕಾತಿ, ಬಡ್ತಿ, ವರ್ಗಾವಣೆಯಲ್ಲಿ ಅನುಮಾನ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ನಾನು ಈ ಇಲಾಖೆಗಳ ಸಚಿವನಾಗಿ 17 ತಿಂಗಳ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದೇನೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

‘ಆರೋಗ್ಯ'ಕ್ಕೆ ಲಂಚದ 'ವೈರಸ್‌' ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಮಾರ್ಚ್‌ 21ರಂದು ಪ್ರಕಟವಾದ ವಿಶೇಷ ವರದಿ ಸತ್ಯಕ್ಕೆ ದೂರವಾಗಿದೆ. ಅಲ್ಲದೆ, ರಾಜಕೀಯ ಪ್ರೇರಿತವಾಗಿರುವ ಅನುಮಾನ ಮೂಡಿಸಿದೆ’ ಎಂದಿದ್ದಾರೆ.

‘ವೈದ್ಯರು, ತಜ್ಞ ವೈದ್ಯರು ಮತ್ತು ಇತರ ಸಿಬ್ಬಂದಿಯ ವಿಶೇಷ ನೇರ ನೇಮಕಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಐದು ಪ್ರತ್ಯೇಕ ಉನ್ನತಾಧಿಕಾರ ಸಮಿತಿಗಳನ್ನು ರಚಿಸಲಾಗಿತ್ತು. ಆ ಸಮಿತಿಗಳು ಮೆರಿಟ್ ಮತ್ತು ಮೀಸಲು ಅನ್ನೇ ಮಾನದಂಡವಾಗಿ ಇಟ್ಟುಕೊಂಡು ದಾಖಲೆ ಅವಧಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿವೆ. ಕರ್ತವ್ಯಕ್ಕೆ ಹಾಜರಾಗದವರ ಬದಲಿಗೆ ಕಾದಿರಿಸಿದ ಪಟ್ಟಿಯಲ್ಲಿ ಇದ್ದವರಿಗೆ ನೇಮಕ ಆದೇಶ ನೀಡಲಾಗಿದೆ. ವೈದ್ಯಕೀಯ ಕಾಲೇಜು ನೇಮಕಗಳಿಗೆ ಡೀನ್‌ಗಳ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಲಾಗಿದ್ದು, ಅದರಲ್ಲಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಒಬ್ಬ ಪ್ರತಿನಿಧಿ, ಡಿಎಂಇ ಮತ್ತು ಪ್ರಧಾನ ಕಾರ್ಯದರ್ಶಿ ಅವರ ಪ್ರತಿನಿಧಿ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಇಲಾಖೆ ನಿಗದಿಪಡಿಸಿರುವ ಮಾನದಂಡ ಮತ್ತು ನಿಯಮಗಳ ಅನ್ವಯ ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿ ಸಿದ್ಧಪಡಿಸಿದೆ. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆಯೂ ಯಾವುದೇ ಆಕ್ಷೇಪ ಬಂದಿಲ್ಲ’ ಎಂದಿದ್ದಾರೆ.

‘ವರ್ಗಾವಣೆಗೆ ಸಂಬಂಧಿಸಿದಂತೆ ದೂರುಗಳು ಬಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸೂಚಿಸಲಾಗಿದೆ. ಕೆಲವು ತುರ್ತು ಪ್ರಕರಣಗಳಲ್ಲಿ ವರ್ಗಾವಣೆ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಯ ಆದೇಶಕ್ಕೆ ಕಡತ ರವಾನಿಸಲಾಗಿದೆ. ವರ್ಗಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಯಾವುದೇ ದೂರು ಸಕ್ಷಮ ಪ್ರಾಧಿಕಾರಗಳಲ್ಲಿ ದಾಖಲಾಗಿಲ್ಲ. ಒಟ್ಟಾರೆ ಎರಡೂ ಇಲಾಖೆಗಳಲ್ಲಿ ನಡೆದಿರುವ ವರ್ಗಾವಣೆಯಲ್ಲಿ ಯಾವುದೇ ಲಂಚ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ.

‘ಇಲಾಖಾ ಮುಂಬಡ್ತಿ ಸಮಿತಿಗಳು ಅಭ್ಯರ್ಥಿಗಳ ಅರ್ಹತೆ ಮತ್ತು ಮಾನದಂಡಗಳ ಆಧಾರದ ಮೇಲೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ನೀಡುವ ಶಿಫಾರಸು ಅನ್ವಯ ಬಡ್ತಿ ನೀಡಲಾಗುತ್ತದೆ. ಒಂದು ವೇಳೆ ಯಾರಿಗಾದರೂ ಅನ್ಯಾಯ ಆಗಿದ್ದಲ್ಲಿ ದೂರು ನೀಡಲು ಅವಕಾಶಗಳಿವೆ. ಒಂದೇ ಒಂದು ದೂರು ದಾಖಲಾಗಿಲ್ಲ’ ಎಂದೂ ತಿಳಿಸಿದ್ದಾರೆ.

‘ಔಷಧ ಮತ್ತು ವೈದ್ಯಕೀಯ ಉಪಕರಣ ಖರೀದಿ ಹಿರಿಯ ಐಎಎಸ್ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯುತ್ತದೆ. ಈ ಕಡತ ಸಚಿವರ ಬಳಿ ಬರುವುದೇ ಇಲ್ಲ. ಕೋವಿಡ್‌ ಸಂದರ್ಭದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ಮತ್ತು ಸಚಿವ ಸಂಪುಟದ ಅನುಮೋದನೆ ಮೇರೆಗೆ ನಡೆದಿವೆ. ನಾನಾ ಹಂತಗಳಲ್ಲಿ ಪರಿಶೀಲನೆ, ಅನುಮೋದನೆಗಳ ಬಳಿಕವಷ್ಟೇ ಕಾಮಗಾರಿಗೆ ಅನುಮತಿ ನೀಡಲಾಗುತ್ತದೆ. ಮಾಜಿ ಶಾಸಕರೊಬ್ಬರು ದೂರು ದಾಖಲಿಸಿದಾಕ್ಷಣ ಅವಲ್ಲವೂ ಆಧಾರಸಹಿತ ಎಂದು ಭಾವಿಸಬೇಕೆ’ ಎಂದೂ ಪ್ರಶ್ನಿಸಿದ್ದಾರೆ.

‘ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ’
ಆರೋಗ್ಯ ಇಲಾಖೆಯ ಆಯುಕ್ತರ ಹುದ್ದೆಯ ಬಗ್ಗೆ ವರದಿಯಲ್ಲಿರುವ ಅಂಶ ಸತ್ಯಕ್ಕೆ ದೂರವಾದುದು. ಬಿಬಿಎಂಪಿಯಲ್ಲಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ, ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ನನ್ನನ್ನು ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಿದ್ದಾರೆ.
–ರಂದೀಪ್, ಆಯುಕ್ತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

*
‘ಜ್ಯೇಷ್ಠತೆಯ ಆಧಾರದಲ್ಲಿ ನೇಮಕ’
ಆರೋಗ್ಯ ಇಲಾಖೆಯ ನಿರ್ದೇಶಕ ಹುದ್ದೆಗೆ ನನ್ನ ನೇಮಕದ ಬಗ್ಗೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಸಂಪೂರ್ಣವಾಗಿ ಜ್ಯೇಷ್ಠತೆ ಆಧಾರದಲ್ಲಿ ನನ್ನ ನೇಮಕ ಆಗಿದೆ. ಹಿರಿಯ ವೈದ್ಯೆಯಾಗಿದ್ದು, ಈ ಕಾರಣಕ್ಕೆ ಹುದ್ದೆಗೆ ಅರ್ಹತೆ ಪಡೆದಿದ್ದೆ. ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ನನ್ನ ನೇಮಕಕ್ಕೆ ಮಂಜೂರಾತಿ ನೀಡಿದ್ದು, ತಕ್ಷಣವೇ ಸಚಿವರ ಕಚೇರಿ ಅನುಮೋದನೆ ನೀಡಿದೆ.
-ಡಾ. ಇಂದುಮತಿ,ನಿರ್ದೇಶಕಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT