ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ಮೈಸೂರಿನಲ್ಲಿ‌ ಮಳೆ; ರಸ್ತೆಗಳಲ್ಲಿ ನೀರಿನ ಹೋಯ್ದಾಟ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯ ವಿಳಂಬ
Last Updated 24 ಸೆಪ್ಟೆಂಬರ್ 2018, 4:26 IST
ಅಕ್ಷರ ಗಾತ್ರ

ಬೆಂಗಳೂರು: ವಾರಾಂತ್ಯದ ರಜೆ ಮುಗಿಸಿ ಸೋಮವಾರ ಕಟ್ಟುನಿಟ್ಟಾಗಿ ಕೆಲಸಕ್ಕೆ ಹೋಗಲೇಬೇಕೆಂದು ನಿದ್ರೆಗೆ ಜಾರಿದವರಿಗೆ, ರಾತ್ರಿ ಇಡೀ ಒಂದೇ ರಾಗದಲ್ಲಿ ಸುರಿದ ಮಳೆಯು ಎಚ್ಚರಿಸುತ್ತಲೇ ಇತ್ತು. ಇಡೀ ರಾತ್ರಿ ಸುರಿದ ಮಳೆಗೆ ರಸ್ತೆಗಳೆಲ್ಲ ನೀರಿನಲ್ಲಿ ತೋಯ್ದಿದ್ದು, ಗುಂಡಿ ಮುಚ್ಚಲು ಹಾಕಿದ್ದ ಸಿಮೆಂಟ್‌ ಮಿಶ್ರಿತ ಜಲ್ಲಿ ಪುಡಿ ರಸ್ತೆಗಳಲ್ಲಿ ರಂಗೋಲಿ ಮೂಡಿಸಿದೆ.

ತಂಪೆರದ ವರಣು ಕೆಲವು ಕಡೆ ಅವಘಡಗಳನ್ನೂ ಸೃಷ್ಟಿಸಿದ್ದಾನೆ. ಮೋರಿಗಳು ಬೋರ್ಗರೆದು ಹರಿಯುತ್ತಿವೆ, ಕೆಲವು ಕಡೆ ಮರಗಳು ಧರೆಗುರುಳಿವೆ. ಬಸ್‌, ಲಾರಿಗಳ ನಡುವೆ ಬೈಕ್‌ ಸವಾರರಿಗೆ ಕಾರಂಜಿಗಳ ಸಿಂಚನವಾಗಿದೆ. ಮಳೆಯಿಂದಾಗಿ ವಾಯುವಿಹಾರಿಗಳಿಗೆ‌ ಅಡ್ಡಿಯಾಗಿದ್ದು, ನಿತ್ಯ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ಉದ್ಯಾನಗಳು ಇಂದು ಬಿಕೊ ‌ಎನ್ನುತ್ತಿದ್ದವು. ಕೆಲವರು ಮಳೆಯ ಜತೆಯಲ್ಲಿಯೇ ಜಾಗಿಂಗ್‌ ಮುಂದುವರಿಸಿದರು.

ಕ್ರಿಕೆಟ್‌ ಪಂದ್ಯ ವಿಳಂಬ

ಸೋಮವಾರ ಕರ್ನಾಟಕ ಮತ್ತು ಗೋವಾ ನಡುವಣ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯ ನಡೆಯಬೇಕಿದ್ದ ಬೆಂಗಳೂರಿನ ರಾಜಾನುಕುಂಟೆಯ ಜಸ್ಟ್ ಕ್ರಿಕೆಟ್ ಮೈದಾನವು ಜಲಾವೃತವಾಗಿದೆ. ಇದರಿಂದಾಗಿ ಪಂದ್ಯವು ವಿಳಂಬವಾಗುವ ಸಾಧ್ಯತೆ ಇದೆ.
ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಕರ್ನಾಟಕ ಸೋತಿದೆ.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಮೈಸೂರು ನಗರದಲ್ಲಿ ಸೋಮವಾರ ನಸುಕಿನಲ್ಲಿ‌ ಭಾರಿ ಮಳೆ ಸುರಿದಿದೆ. ಗುಡುಗು, ಸಿಡಿಲಿನಿಂದ ಕೂಡಿದ ಮಳೆಗೆ‌ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಪಾಲಿಕೆ ಅಭಯ್ ರಕ್ಷಣಾ‌ ತಂಡ ನೀರನ್ನು ‌ಹೊರಹಾಕಿದೆ. ಈ ಕುರಿತು ಪ್ರಜಾವಾಣಿಗೆ‌ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಜಗದೀಶ್, ಶಾಂತಿನಗರದ ಮಹದೇವಪುರ ಮುಖ್ಯ ರಸ್ತೆಯಲ್ಲಿ ಒಂದೆರಡು ಮನೆಗಳಿಗೆ ನೀರು ನುಗ್ಗಿತ್ತು.‌ ಮಾಹಿತಿ ಬಂದ ಕೂಡಲೇ ಅಭಯ್ ತಂಡವು ನೀರನ್ನು ಹೊರ ಹಾಕಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಕೊಡಗು, ತುಮಕೂರಿನಲ್ಲೂ ಸುರಿಯುತ್ತಿದೆಮಳೆ

ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಸಾಧಾರಣ ಮಳೆ ಆಗುತ್ತಿದೆ‌. ಭೂಕುಸಿತ ಪ್ರದೇಶಗಳಾದ ಮಕ್ಕಂದೂರು, ಮಾದಾಪುರ, ಮುಕ್ಕೋಡ್ಲು, ತಂತಿಪಾಲ ಹಾಗೂ ಹಟ್ಟಿಹೊಳೆ ವ್ಯಾಪ್ತಿಯಲ್ಲೂ ದಟ್ಟ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆ ಆಗುತ್ತಿದೆ.ತುಮಕೂರಿನಲ್ಲಿತಡ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ.ಸುಡುಬಿಸಿಲಿಗೆ ಕಂಗೆಟ್ಟಿದ್ದ ಜನರು ಧಾರಾಕಾರ ಮಳೆಗೆ ತಂಪು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT