ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಮಾಲ್‌ ಬೀಗ ತೆರೆಯಲು ಹೈಕೋರ್ಟ್‌ ಆದೇಶ

ಜುಲೈ 31ರೊಳಗೆ ₹ 20 ಕೋಟಿ ಪಾವತಿ: ಕಂಪನಿಯ ಮುಚ್ಚಳಿಕೆ
Published 16 ಮೇ 2024, 16:16 IST
Last Updated 16 ಮೇ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾದ ₹ 41 ಕೋಟಿ ಆಸ್ತಿ ತೆರಿಗೆಯ ಬಾಕಿ ಹಣದ ಪೈಕಿ ₹ 20 ಕೋಟಿಯನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಮಂತ್ರಿ ಮಾಲ್‌, ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೇ 17ರ (ಶುಕ್ರವಾರ) ಬೆಳಗ್ಗೆ 10 ಗಂಟೆಯ ಒಳಗಾಗಿ ಬೀಗ ತೆರೆಯುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಿದೆ.

ಮಾಲ್‌ಗೆ ಬೀಗ ಹಾಕಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ, ಮಂತ್ರಿಮಾಲ್‌ನ ‘ಮೆಸರ್ಸ್‌ ಅಭಿಷೇಕ್‌ ಪ್ರಾಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ಅಧಿಕೃತ ಪ್ರತಿನಿಧಿ ಗಿರೀಶ್‌ ಗುಪ್ತಾ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ರಜಾಕಾಲದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಗುರುವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಮಾಲ್‌ನಲ್ಲಿ 250ಕ್ಕೂ ಹೆಚ್ಚಿನ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿವೆ. ಹತ್ತಿರತ್ತಿರ 2,500 ಉದ್ಯೋಗಿಗಳಿದ್ದಾರೆ. ಬಿಬಿಎಂಪಿ ಕಾನೂನು ಬಾಹಿರವಾಗಿ ಮಾಲ್‌ಗೆ 2024ರ ಮೇ 10ರಿಂದ ಬೀಗ ಹಾಕಿದೆ. ಇದು ಉದ್ಯೋಗಿಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ನಿತ್ಯವೂ ಅಂದಾಜು ₹ 7 ರಿಂದ 8 ಕೋಟಿ ವ್ಯಾಪಾರ ನಷ್ಟವಾಗುತ್ತಿದೆ’ ಎಂದು ವಿವರಿಸಿದರು.

‘ಅಕ್ಷಯ ತೃತೀಯಾ ದಿನದಿಂದ ಮಾಲ್‌ ಒಳಗಿರುವ ಚಿನ್ನಾಭರಣ ಮಳಿಗೆಗಳ ವ್ಯಾಪಾರಕ್ಕೆ ಅಡಚಣೆ ಉಂಟಾಗಿ, ದೊಡ್ಡಮೊತ್ತದ ನಷ್ಟ ಉಂಟಾಗಿದೆ. ಈ ನಡೆ ಮಳಿಗೆಗಳ ಬಾಡಿಗೆದಾರರು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಬಾಡಿಗೆ ಪಾವತಿಸಲು ನಿರಾಕರಿಸುವುದನ್ನು ಪ್ರೇರೇಪಿಸುತ್ತದೆ’ ಎಂದು ಆರೋಪಿಸಿದರು. ಅಂತೆಯೇ, ಕಂಪನಿ ಪರವಾದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ‘2024ರ ಜುಲೈ 31ರೊಳಗೆ ₹ 20 ಕೋಟಿ ಮೊತ್ತವನ್ನು ಬಿಬಿಎಂಪಿಗೆ ಪಾವತಿಸಲಾಗುವುದು’ ಎಂದು ಮುಚ್ಚಳಿಕೆ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಕಂಪನಿಯು 2024ರ ಜೂನ್‌ 1ರೊಳಗೆ ₹ 3.5 ಕೋಟಿ ಮೊತ್ತವನ್ನು ಬಿಬಿಎಂಪಿಗೆ ಪಾವತಿಸಬೇಕು’ ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಮಾಡಿತು. ಕಂಪನಿ ಪರ ಹೈಕೋರ್ಟ್‌ ವಕೀಲೆ ಪಿ.ಎಲ್‌.ವಂದನಾ ರೆಡ್ಡಿ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?: ‘ಮಂತ್ರಿಮಾಲ್‌ ಒಟ್ಟು ₹41 ಕೋಟಿ ಮೊತ್ತದ ಆಸ್ತಿ ತೆರಿಗೆ ಪಾವತಿಸಿಲ್ಲ’ ಎಂದು ಆರೋಪಿಸಿ ಬಿಬಿಎಂಪಿ ಇದೇ 10ರಂದು ಐದನೇ ಬಾರಿಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಸಿಟಿ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಬಾಕಿಯಿರುವ ಪೈಕಿ ಶೇ 50ರಷ್ಟು ತೆರಿಗೆ ಹಣವನ್ನು 10 ದಿನಗಳಲ್ಲಿ ಬಿಬಿಎಂಪಿಗೆ ಪಾವತಿಸಬೇಕು. ಹಣ ಪಾವತಿಸಿದ ನಂತರ ಬಿಬಿಎಂಪಿ ಬೀಗ ತೆರೆದು ಮಾಲ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಬಿಬಿಎಂಪಿ ಅನುಮತಿ ನೀಡಬೇಕು’ ಎಂದು ಬುಧವಾರ (ಮೇ 15ರಂದು) ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT