ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪರಿಣಾಮ: ಅಧಿಸೂಚನೆಗೆ ಹೈಕೋರ್ಟ್‌ ನಿರ್ಬಂಧ

ಸ್ಥಳೀಯ ಭಾಷೆಯಲ್ಲಿ ಪ್ರಚಾರ ನೀಡಿ ಆಕ್ಷೇಪಣೆಗೆ ಅವಕಾಶ ನೀಡಲು ನಿರ್ದೇಶನ
Last Updated 5 ಆಗಸ್ಟ್ 2020, 22:19 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಸರದ ಮೇಲಿನ ಪರಿಣಾಮ ಅಧ್ಯಯನ-2020’ ಅಂತಿಮ ಅಧಿಸೂಚನೆಯನ್ನು ಕೇಂದ್ರ ಪರಿಸರ ಸಚಿವಾಲಯವು ಸೆಪ್ಟೆಂಬರ್ 7ರವರೆಗೆ ಪ್ರಕಟಿಸದಂತೆ ಹೈಕೋರ್ಟ್‌ ನಿರ್ಬಂಧಿಸಿದೆ.

‘ಕೋವಿಡ್ ಇರುವ ಕಾರಣ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಸಿಕ್ಕಿಲ್ಲ. ಕಾಲಾವಕಾಶ ನೀಡಿ ನಂತರ ಪ್ರಕ್ರಿಯೆ ಮುಂದುವರಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

‘ಲಾಕ್‌ಡೌನ್‌ಗೆ ಎರಡು ದಿನ ಮುನ್ನ (ಮಾರ್ಚ್ 23ರಂದು) ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಅದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿದ್ದು, ಅದನ್ನು ಸ್ಥಳೀಯ ಭಾಷೆಗಳಲ್ಲೂ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

‘ಕರಡಿನ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಸಂಬಂಧಪಟ್ಟ ರಾಜ್ಯ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು.

‘ಕನ್ನಡದಲ್ಲಿ ಪ್ರಚಾರ ನೀಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಪ್ರಸ್ತುತ ಪಡಿಸಿಲ್ಲ.ಸ್ಥಳೀಯ ಭಾಷೆಯಲ್ಲಿ ಪ್ರಚಾರ ನೀಡದೆ ಅಂತಿಮ ವರದಿ ಪ್ರಕಟಿಸಬಾರದು’ ಎಂದು ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT