ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಜರಿ’ ಬಸ್ ಸಂಚಾರಕ್ಕೆ ತಡೆ:ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

Published 27 ಡಿಸೆಂಬರ್ 2023, 23:18 IST
Last Updated 27 ಡಿಸೆಂಬರ್ 2023, 23:18 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಗದಿತ ಕಿಲೋ ಮೀಟರ್‌ಗಳಷ್ಟು ಸಂಚರಿಸಿದ ಬಳಿಕ ಸಾಮರ್ಥ್ಯ ಕಳೆದುಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಸಿ) ಬಸ್‌ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್‌ಗಳನ್ನು ಪುನಃ ನಗರ, ಹಳ್ಳಿಗಳ ಮಾರ್ಗ ಅಥವಾ ಮತ್ತಾವುದೇ ಮಾರ್ಗಗಳಲ್ಲಿನ ಸಂಚಾರಕ್ಕೆ ಬಳಸಲು ಅನುಮತಿ ನೀಡಬಾರದು’ ಎಂದು ಹೈಕೋರ್ಟ್, ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಆಯಸ್ಸು ತೀರಿ ಗುಜರಿ ಸೇರಬೇಕಾಗಿದ್ದ ಕೆಎಸ್‌ಆರ್‌ಟಿ ಬಸ್‌ ಅನ್ನು ರಸ್ತೆಗಿಳಿಸಿ ಅಪಘಾತ ಉಂಟು ಮಾಡಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ತೀರ್ಪು ಪ್ರಕಟಿಸಿದೆ.

‘ಬಸ್‌ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರತಿ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (ಆರ್‌ಟಿಓ) ಸುಸ್ಥಿತಿ ದೃಢೀಕರಣ ಪತ್ರ (ಎಫ್‌ಸಿ) ಪಡೆಯಬೇಕು. ಆರ್‌ಟಿಓ ವತಿಯಿಂದ ದೃಢೀಕರಣ ಪತ್ರ ಪಡೆದ ಬಸ್‌ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು. ಕಾಲಕಾಲಕ್ಕೆ ಬಸ್‌ಗಳನ್ನು ಪರಿಶೀಲನೆ ನಡೆಸಿ ದುರಸ್ತಿ ಮಾಡಬೇಕು’ ಎಂಬುದೂ ಸೇರಿದಂತೆ ನ್ಯಾಯಪೀಠ ವಿವಿಧ ನಿರ್ದೇಶನಗಳನ್ನು ನೀಡಿದೆ.

‘ಅಪಘಾತಕ್ಕೆ ಕಾರಣವಾದ ಬಸ್‌, ಅಪಘಾತ್ಕಕ್ಕೂ ಮುನ್ನವೇ 10 ಲಕ್ಷ ಕಿಲೋ ಮೀಟರ್‌ಗಳಷ್ಟು ಸಂಚರಿಸಿತ್ತು. ಅದರ ಎಂಜಿನ್‌ ಸ್ಟಾರ್ಟ್‌ ಆಗುತ್ತಿರಲಿಲ್ಲ. ಹಾರನ್‌ ಇರಲಿಲ್ಲ ಎಂಬುದು ನಿಜಕ್ಕೂ ಚಿಂತಾಜನಕ ವಿಚಾರ’ ಎಂಬ ಅಂಶವನ್ನು ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ‘ಬಸ್‌ಗಳನ್ನು ಸುಸ್ಥಿತಿಯಲ್ಲಿ ಇಡುವುದು ಕೆಎಸ್‌ಆರ್‌ಟಿಸಿಯ ಆದ್ಯ ಕರ್ತವ್ಯ. ಇಂತಹ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಾರಿಗೆ ಸೌಲಭ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಬೇಕಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತೀರ್ಪಿನಲ್ಲಿ ವಿವರಿಸಲಾದ ನಿರ್ದೇಶನಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ‌ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಪೀಠ ಅದೇಶಿಸಿದೆ.

ಪ್ರಕರಣವೇನು?:

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಎತ್ತಿನಬಯಲು ನಿವಾಸಿ ಸತೀಶ್‌ ಗಣಪತಿ ಗುನಗಿ ವಾಯವ್ಯ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಬಸ್ ಚಾಲಕರಾಗಿದ್ದರು. 2006ರ ನವೆಂಬರ್ 27ರಂದು ಅವರು ಚಲಾಯಿಸುತ್ತಿದ್ದ ಬಸ್ (ಕೆಎ-31 ಎಫ್-620) ಅಂಕೋಲಾದ ಕೆ.ಸಿ. ರಸ್ತೆಯಲ್ಲಿರುವ ಹರ್ಷ ಹೋಟೆಲ್ ಮುಂಭಾಗ ಮಧ್ಯಾಹ್ನ 12.10ರ ಸಮಯದಲ್ಲಿ ಕೆವಿಎಸ್ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿತ್ತು.

ಘಟನೆಯಲ್ಲಿ ಮೃತ್ಯುಂಜಯ (11) ಮತ್ತು ಅಭಿಲಾಷ್ ಮಾರುತಿ ಗಾಂವಕರ್ (12) ಸಾವನ್ನಪ್ಪಿದ್ದರು. ಮೃತ್ಯುಂಜಯನ ಅಣ್ಣ ಏಳನೇ ತರಗತಿಯಲ್ಲಿ ಓದುತ್ತಿದ್ದ ಧನಂಜಯ ಗಂಭೀರವಾಗಿ ಗಾಯಗೊಂಡಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಅಂಕೋಲಾ ಠಾಣಾ ಪೊಲೀಸರು ತನಿಖೆ ನಡೆಸಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಚಾಲಕ ಸತೀಶ್‌ಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿ, 2008ರ ನವೆಂಬರ್ 26ರಂದು ಆದೇಶ ಹೊರಡಿಸಿತ್ತು. ಈ ಶಿಕ್ಷೆಯನ್ನು ಕಾರವಾರ ಜಿಲ್ಲಾ ನ್ಯಾಯಾಲಯ 2019ರ ಮೇ 29ರಂದು ಎತ್ತಿ ಹಿಡಿದಿತ್ತು.

ಇದನ್ನು ಪ್ರಶ್ನಿಸಿ ಸತೀಶ್, ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.

ಚಾಲಕನ ಸದ್ಯದ ವಯಸ್ಸು 44 ವರ್ಷ. ಈ ಕಾರಣಕ್ಕಾಗಿ ಅವರಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣದಲ್ಲಿ ಕೊಂಚ ಔದಾರ್ಯ ತೋರಿಸಬಹುದು ಎಂದು ತೀರ್ಮಾನಿಸಿ, ಒಂದು ವರ್ಷದ ಶಿಕ್ಷೆಯನ್ನು ಆರು ತಿಂಗಳಿಗೆ ಇಳಿಸಿದೆ.

ಚಾಲಕನ ಸಮರ್ಥನೆ

‘ಅಪಘಾತಕ್ಕೆ ಕಾರಣವಾದ ಬಸ್‌ನಲ್ಲಿ ಹಲವು ತಾಂತ್ರಿಕ ದೋಷಗಳಿವೆ. ಇದನ್ನು ಸಂಚಾರಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕರಿಗೆ ನಾನು ತಿಳಿಸಿದ್ದೆ. ಆದರೂ ನಿಯಂತ್ರಕರು ಪ್ರಯಾಣಿಕರು ಕಾಯುತ್ತಿದ್ದಾರೆ. ಇದನ್ನೇ ತೆಗೆದುಕೊಂಡು ಹೋಗಬೇಕು. ನೀವು ನನ್ನ ಮಾತು ಕೇಳದೇ ಹೋದರೆ ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಅನಿವಾರ್ಯವಾಗಿ ಬಸ್‌ ತೆಗೆದುಕೊಂಡು ಹೋದೆ. ಮೊದಲಿಗೆ ಬಸ್‌ ಸ್ಟಾರ್ಟ್ ಆಗಲೇ ಇಲ್ಲ. ಪ್ರಯಾಣಿಕರಿಂದ ತಳ್ಳಿಸಿಕೊಂಡು ಬಸ್‌  ಸ್ಟಾರ್ಟ್‌ ಮಾಡಲಾಯಿತು. ಬಸ್‌ಗೆ ಹಾರನ್ ಕೂಡಾ ಇರಲಿಲ್ಲ. ಈ ದೋಷಗಳಿಂದಲೇ ಅಪಘಾತ ಉಂಟಾಗಿತ್ತು. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯಗಳು ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸಬೇಕು" ಎಂದು ಸತೀಶ್ ಮರುಪರಿಶೀಲನಾ ಅರ್ಜಿಯಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT