ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಆದೇಶಕ್ಕೆ ಎಸ್‌ಐಗಳ ಅಲೆದಾಟ

ಎಸ್‌ಪಿ ಶ್ರೇಣಿಗೆ ಇಳಿದ ಹು-ಧಾ ಪೊಲೀಸ್‌ ಕಮಿಷನರ್ ಹುದ್ದೆ
Published 25 ಫೆಬ್ರುವರಿ 2024, 4:43 IST
Last Updated 25 ಫೆಬ್ರುವರಿ 2024, 4:43 IST
ಅಕ್ಷರ ಗಾತ್ರ

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್ ಹುದ್ದೆಯನ್ನು ಎಸ್‌ಪಿ ಶ್ರೇಣಿಗೆ ಇಳಿಸಿದ ಕಾರಣ ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ. ಮೀಸಲು ಪಡೆಯ ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಐ) ಹುದ್ದೆಗಳಿಗೆ ಆಯ್ಕೆಯಾದವರಿಗೆ 6 ತಿಂಗಳಿನಿಂದ ನೇಮಕಾತಿ ಆದೇಶ ವಿತರಣೆ ಆಗಿಲ್ಲ.

ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್ ಹುದ್ದೆಗೆ ಮೊದಲು ಐಜಿಪಿ–ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಐಜಿಪಿಗಳಾದ ರಮಣ್‌ ಗುಪ್ತಾ, ಲಾಬೂರಾಂ ನಂತರ ಗುಪ್ತಚರ ಇಲಾಖೆಯ ಉಪನಿರ್ದೇಶಕರಿಗೆ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಲಾಗಿತ್ತು. 2023ರ ಆಗಸ್ಟ್‌ನಲ್ಲಿ 2011ರ ಬ್ಯಾಚ್‌ನ ಅಧಿಕಾರಿ ಐಪಿಎಸ್‌ ಅಧಿಕಾರಿ, ಎಸ್‌ಪಿ ಶ್ರೇಣಿಯ ರೇಣುಕಾ ಸುಕುಮಾರ್ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.

ವರ್ಗಾವಣೆ ಆದೇಶದಲ್ಲೇ ಈ ಹುದ್ದೆಯನ್ನು ಎಸ್‌ಪಿ ಶ್ರೇಣಿಗೆ ಇಳಿಸಲಾಗಿದೆ. ಐಪಿಎಸ್ (ವೇತನ) ನಿಯಮಗಳು, 2016ರ ನಿಯಮ 12ರ ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಮಂಡ್ಯದ ಎಸ್‌ಪಿ ಶ್ರೇಣಿಯ ಹುದ್ದೆಗೆ ಸಮಾನವಾದದು ಎಂದು ಪರಿಗಣಿಸಲಾಗಿದೆ ಎಂದು ನಮೂದಿಸಲಾಗಿತ್ತು.

ಎಸ್‌ಪಿ ಶ್ರೇಣಿಗಿಲ್ಲ ಆದೇಶ ನೀಡುವ ಅಧಿಕಾರ: 

ಕರ್ನಾಟಕ ಪೋಲಿಸ್‌ ಕಾಯ್ದೆ–1963ರ ಪ್ರಕಾರ, ನೇಮಕಾತಿ ಹೊಂದುವ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಅವರ ಕೆಳಗಿನ ವೃಂದದ ಅಧಿಕಾರಿಗಳಿಗೆ ಆಯಾ ವಲಯ ವ್ಯಾಪ್ತಿಯ ಮುಖ್ಯಸ್ಥರು ನೇಮಕಾತಿ ಆದೇಶ ನೀಡುವ ಅಧಿಕಾರ ಹೊಂದಿದ್ದಾರೆ. ಹಾಗೆ ನೇಮಕಾತಿ ಆದೇಶ ನೀಡುವ ಮುಖ್ಯಸ್ಥರು ಎಡಿಜಿಪಿ ಅಥವಾ ಐಜಿಪಿ ಶ್ರೇಣಿಯ ಅಧಿಕಾರಿಗಳಾಗಿರಬೇಕು.

2021–22ನೇ ಸಾಲಿನಲ್ಲಿ ಮೀಸಲು ಪೊಲೀಸ್‌ ಪಡೆಗೆ 71 ಸಬ್‌ ಇನ್‌ಸ್ಪೆಕ್ಟರ್‌ಗಳು ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಆರು ಪೊಲೀಸ್‌ ಕಮಿಷನರೇಟ್‌ಗಳಿದ್ದು, ಉಳಿದ ಕಮಿಷನರೇಟ್‌ ವ್ಯಾಪ್ತಿಗೆ ಆಯ್ಕೆಯಾಗಿದ್ದವರು ಈಗಾಗಲೇ ನೇಮಕಾತಿ ಆದೇಶ ಪಡೆದು ಕಲಬುರಗಿಯ ಪೊಲೀಸ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ಹುದ್ದೆಯಲ್ಲಿರುವ ರೇಣುಕಾ ಅವರು ಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿರುವ ಕಾರಣ ನಿಯಮದಂತೆ ನೇಮಕಾತಿ ಆದೇಶ ನೀಡುವ ಅಧಿಕಾರ ಹೊಂದಿಲ್ಲ. ಹಾಗಾಗಿ, ಹುಬ್ಬಳ್ಳಿ–ಧಾರವಾಡ ನಗರ ಮೀಸಲು ಸಶಸ್ತ್ರ ಪಡೆಗೆ ಆಯ್ಕೆಯಾಗಿದ್ದ ಎಸ್‌ಐಗಳಿಗೆ ನೇಮಕಾತಿ ಆದೇಶ ವಿತರಣೆಯೇ ಆಗಿಲ್ಲ.

’ರಾಜ್ಯದಲ್ಲಿನ ಕಮಿಷನರೇಟ್‌ಗಳಲ್ಲಿ ನಾಲ್ಕು ಕಡೆ ಐಜಿಪಿ–ಎಡಿಜಿಪಿ ಶ್ರೇಣಿಯ ಅಧಿಕಾರಿಗಳು ಇದ್ದಾರೆ. ಹುಬ್ಬಳ್ಳಿ–ಧಾರವಾಡದಲ್ಲಿ ಮಾತ್ರ ಕೆಳ ಶ್ರೇಣಿಯ ಅಧಿಕಾರಿಗಳಿಗೆ ಕಮಿಷನರ್‌ ಹುದ್ದೆ ನೀಡಲಾಗಿದೆ. ಅವರೇ ನೇಮಕಾತಿ ಆದೇಶ ನೀಡಬೇಕಿರುವ ಕಾರಣ ಉಳಿದ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಸರ್ಕಾರದ ಯಡವಟ್ಟಿನಿಂದ ಇಂತಹ ಪ್ರಮಾದವಾಗಿದೆ. ಸಂತ್ರಸ್ತರು ಕೋರ್ಟ್‌ ಮೊರೆ ಹೋದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ’ ಎನ್ನುತ್ತಾರೆ ಹಿರಿಯ ಐ‍‍ಪಿಎಸ್‌ ಅಧಿಕಾರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT