ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಹೆಚ್ಚಿದ ದೇಶದ್ರೋಹ ಚಟುವಟಿಕೆ: ಯತ್ನಾಳ ಆರೋಪ

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆರೋಪ, ಗಲಾಟೆ ನಡೆದ ಸ್ಥಳಕ್ಕೆ ಭೇಟಿ
Published : 29 ಸೆಪ್ಟೆಂಬರ್ 2024, 15:11 IST
Last Updated : 29 ಸೆಪ್ಟೆಂಬರ್ 2024, 15:11 IST
ಫಾಲೋ ಮಾಡಿ
Comments

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹದ ಚಟುವಟಿಕೆಗಳು ಹೆಚ್ಚಾಗಿವೆ. ಸಂಘಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಗಣಪತಿ ಹಬ್ಬ ಸೇರಿ ಹಿಂದೂಗಳ ಉತ್ಸವಗಳಲ್ಲಿ ಗಲಭೆಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

‘ಗಣೇಶೋತ್ಸವದ ಮೆರವಣಿಗೆ ಮೇಲೆ ನಾಗಮಂಗಲದಿಂದ ಆರಂಭವಾದ ಕಲ್ಲುತೂರಾಟ ರಾಜ್ಯದ ಹಲವೆಡೆ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಇದೊಂದು ಚಿಕ್ಕ ಘಟನೆಯಾಗಿ ಕಾಣುತ್ತಿದೆ. ಮುಸ್ಲಿಮರ ಓಲೈಕೆಯನ್ನು ಬಿಡದಿದ್ದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ದಾವಣಗೆರೆಯಲ್ಲಿ ನಡೆಯುತ್ತಿದ್ದ ಗಣೇಶನ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದರು. ಪೆಟ್ರೋಲ್‌ ಬಾಂಬ್‌ಗಳನ್ನು ಎಸೆದರು. ಅವರ ಮನೆಗಳಲ್ಲಿ ಪೆಟ್ರೋಲ್‌ ಬಾಂಬ್‌ ಬಾಟಲಿಗಳು ಸಿಕ್ಕಿವೆ. ಆದರೂ ಪೊಲೀಸರು ಇವರ ಬಗ್ಗೆ ಮೃಧು ಧೋರಣೆ ತಳೆದಿದ್ದಾರೆ. ಹಿಂದುತ್ವ ಪರ ಕಾರ್ಯಕರ್ತರ ಮೇಲೆ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.

‘ರಂಜಾನ್‌ ಹಾಗೂ ಈದ್‌ ಮಿಲಾದ್‌ ಮೆರವಣಿಗೆಯ ಮೇಲೆ ಈವರೆಗೆ ಕಲ್ಲುತೂರಾಟ ನಡೆದಿಲ್ಲ. ಆದರೆ, ಗಣೇಶೋತ್ಸವ ಶಾಂತಿಯಿಂದ ನಡೆಯಲು ಬಿಡುತ್ತಿಲ್ಲ. ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಹೆಚ್ಚು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಧ್ವನಿವರ್ಧಕ, ವಿದ್ಯುತ್‌ ದೀಪಾಲಂಕಾರಕ್ಕೂ ಪೂರ್ವಾನುಮತಿ ಪಡೆಯುವಂತೆ ಷರತ್ತುಗಳನ್ನು ವಿಧಿಸಲಾಗುತ್ತಿದೆ. ರಸ್ತೆಗಳನ್ನು ಬಂದ್‌ ಮಾಡಿ ನಮಾಜ್‌ ಮಾಡುವವರಿಗೆ ಏಕೆ ಇಂತಹ ನಿರ್ಬಂಧಗಳಿಲ್ಲ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015ರಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟರು. ಇದರಿಂದ ಸಂಘಪರಿವಾರದ ಕಾರ್ಯಕರ್ತರ ಕಗ್ಗೊಲೆಗಳು ನಡೆದವು. ಗಣೇಶೋತ್ಸವ ಕಳೆಗುಂದುವಂತೆ ಮಾಡುವ ವ್ಯವಸ್ಥಿತ ಪಿತೂರಿಯ ಭಾಗವಾಗಿ ಈ ಗಲಾಟೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಲಭೆಕೋರರಿಗೆ ಶ್ರೀರಕ್ಷೆ ನೀಡುತ್ತಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪಸಿಂಹ ಆರೋಪಿಸಿದರು.

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್‌, ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ವೀರೇಶ್‌ ಹನಗವಾಡಿ, ಯಶವಂತರಾವ್‌ ಜಾಧವ್‌, ಶಿವಕುಮಾರ್‌, ಜೀವನಮೂರ್ತಿ, ಶ್ರೀನಿವಾಸ್ ದಾಸಕರಿಯಪ್ಪ ಇದ್ದರು.

ಕುಟುಂಬದ ನಿಯಂತ್ರಣದಲ್ಲಿ ಪೊಲೀಸರು

ಪೊಲೀಸ್‌ ವರಿಷ್ಠಾಧಿಕಾರಿಯೂ ಸೇರಿದಂತೆ ದಾವಣಗೆರೆ ಪೊಲೀಸರು ಒಂದು ಕುಟುಂಬದ ನಿಯಂತ್ರಣದಲ್ಲಿದ್ದಾರೆ. ಕುಟುಂಬದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಕಾಲ ಹೀಗೆ ಇರುವುದಿಲ್ಲ. ಸರ್ಕಾರ ಉರುಳಿದರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂಬುದು ಗಮನದಲ್ಲಿರಲಿ ಎಂದು ಬಸವನಗೌಡ ಪಾಟೀಲ ಯತ್ನಾಳ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ವಿಎಚ್‌ಪಿ ನಾಯಕ ಸತೀಶ್‌ ಪೂಜಾರಿ ಅವರನ್ನು ಬಂಧಿಸಿದ ಪೊಲೀಸರು ಅವರ ಕುಟುಂಬದ ವಂಶವೃಕ್ಷ ಕೇಳಿ ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಕೊಲೆ ಆರೋಪಿಗಳಿಗೂ ವಂಶವೃಕ್ಷ ಕೇಳುವುದಿಲ್ಲ. ಹಿಂದುತ್ವದ ಪರ ಕೆಲಸ ಮಾಡುವ ಕಾರ್ಯಕರ್ತರಿಗೆ ಈರೀತಿ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದರು.

ಬಂಧಿತರ ಮನೆಗೆ ಭೇಟಿ

ಗಲಭೆ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಸತೀಶ್‌ ಪೂಜಾರಿ ಸೇರಿ ಹಲವರ ಮನೆಗಳಿಗೆ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಪ್ರತಾಪಸಿಂಹ ನೇತೃತ್ವದ ತಂಡ ಭಾನುವಾರ ಭೇಟಿ ನೀಡಿ ಕುಟುಂಬದ ಸದಸ್ಯರ ಅಳಲು ಆಲಿಸಿತು.

ಮಟ್ಟಿಕಲ್‌ ಬಡಾವಣೆ, ಅರಳಿ ಮರದ ವೃತ್ತ ಸೇರಿ ಹಲವೆಡೆಗೆ ಭೇಟಿ ನೀಡಿದ ತಂಡ ಸ್ಥಳೀಯರೊಂದಿಗೆ ಚರ್ಚೆ ನಡೆಸಿತು. ‘ಪೊಲೀಸರು ಅಮಾಯಕ ಯುವಕರನ್ನು ಬಂಧಿಸಿದ್ದಾರೆ. ಪುರುಷರನ್ನು ಹುಡುಕಿ ಜೈಲಿಗೆ ತಳ್ಳಿದ್ದಾರೆ. ಭೀತಿಯ ವಾತಾವರಣ ನಿರ್ಮಾಣವಾಗಿದೆ’ ಎಂದು ಮಹಿಳೆಯರು ದುಃಖ ತೋಡಿಕೊಂಡರು.

‘ಟಾಂಗಾ ಓಡಿಸುವ, ಗುಜರಿ ವ್ಯಾಪಾರ ಮಾಡುವವರೇ ಒಟ್ಟಾಗಿದ್ದಾರೆ. ಹಿಂದೂಗಳು ಒಗ್ಗೂಡುವ ಅಗತ್ಯವಿದೆ. ಅ.5ರಂದು ನಡೆಯುವ ಶೋಭಾಯಾತ್ರೆ ವೇಳೆಗೆ ಬಂಧಿತರನ್ನು ಹೊರತರುತ್ತೇವೆ’ ಎಂದು ಮಾಜಿ ಸಂಸದ ಪ್ರತಾಪಸಿಂಹ ಆಶ್ವಾಸನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT