ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

India independence Day| ಭಾರತವನ್ನು ಒಗ್ಗೂಡಿಸುವುದು ಯಾವುದು?

Published 13 ಆಗಸ್ಟ್ 2024, 23:30 IST
Last Updated 13 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಭಾರತವು 77 ವರ್ಷಗಳ ಹಿಂದೆ, ಅನೇಕ ಜನರ ಬಲಿದಾನದ ನಂತರ ಸ್ವಾತಂತ್ರ್ಯವನ್ನು ಗಳಿಸಿತು. ಎಷ್ಟೋ ತಲೆಮಾರುಗಳು ಈ ಸ್ವಾತಂತ್ರ್ಯವನ್ನು ಬಯಸಿತ್ತು ಮತ್ತು ಸ್ವತಂತ್ರ ಭಾರತದ ಕನಸನ್ನು ಕಂಡಿತ್ತು.

ಆದರೆ ಒಬ್ಬ ವ್ಯಕ್ತಿಯು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ವತಂತ್ರವಾಗಿಲ್ಲದಾಗ, ಅವರನ್ನು ನೀವು ವಿಮುಕ್ತನೆಂದು ಹೇಳಲು ಸಾಧ್ಯವಾಗುವುದೇ? ನಾವು ನಮ್ಮ ಮನಸ್ಸಿನ ಸಂಕೋಲೆಗಳಿಂದ ಹೊರಬರದ ಹೊರತು, ಸ್ವತಂತ್ರರಾಗಿದ್ದೇವೆ ಎಂದು ಎಂದಿಗೂ ಹೇಳಿಕೊಳ್ಳಲಾಗುವುದಿಲ್ಲ.

ಸ್ವಾತಂತ್ರ್ಯವು ನಿರ್ಭಯತೆಯನ್ನು ಸೂಚಿಸಬೇಕು. ಸ್ವಾತಂತ್ರ್ಯ ಎಂದರೆ ಸಂತೋಷ ಮತ್ತು ಆತ್ಮವಿಶ್ವಾಸ. ನಿಮ್ಮಲ್ಲಿ ನೀವು ವಿಶ್ವಾಸವನ್ನು ಹೊಂದಿದ್ದೀರಾ? ನೀವು ಸಂತೋಷವಾಗಿದ್ದೀರಾ? ಅಥವಾ ನಿಮ್ಮ ಸಂಕುಚಿತ ಮನೋಭಾವದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಾ? ನೀವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವು. ಸಂಕುಚಿತ ಮನೋಭಾವ ಮತ್ತು ಸಿದ್ಧಾಂತಗಳು, ಸೀಮಿತ ಆಲೋಚನೆಗಳಿಂದ ನಿಮ್ಮನ್ನು ನೀವು ಮುಕ್ತಗೊಳಿಸಿಕೊಳ್ಳದ ಹೊರತು ಮತ್ತು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳದ ಹೊರತು, ನೀವು ಸ್ವತಂತ್ರರೆಂದು ಹೇಳಿಕೊಳ್ಳಲಾಗುವುದಿಲ್ಲ.

ನಮ್ಮ ಬೇರುಗಳು ಆಧ್ಯಾತ್ಮದೊಂದಿಗೆ ಬೆಸೆದುಕೊಂಡಿವೆ

ಭಾರತವು ಆಧ್ಯಾತ್ಮಿಕತೆಯ ದಾರಿದೀಪವಾಗಿದೆ. ನಾವು ಮತ್ತು ನಮ್ಮ ಯುವಕರು, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮತ್ತು ನಮ್ಮ ಮೌಲ್ಯಗಳನ್ನು ಕಲಿಯುವ ಮತ್ತು ಗೌರವಿಸುವ ಮೂಲಕ ಆಂತರಿಕ ಸ್ವಾತಂತ್ರ್ಯದ ಹಾದಿಯಲ್ಲಿ ನಡೆಯುವುದು ಅವಶ್ಯಕವಾಗಿದೆ. ಅದೇ ಸಮಯದಲ್ಲಿ, ನಾವು ನಮ್ಮ ಯುವಕರನ್ನು ವ್ಯಸನಗಳ ವಿಷವರ್ತುಲದಿಂದ ಹೊರತರಬೇಕಾಗಿದೆ.

ಭಾರತವು ಅಮೆರಿಕಾದ ಮೂರನೇ ಒಂದು ಭಾಗದಷ್ಟು ಮಾತ್ರವೇ ಇದ್ದರೂ, ಭಾರತಮಾತೆಯು ಹಲವು ವೈವಿಧ್ಯಮಯವಾದ ಸಂಸ್ಕೃತಿಗಳು, ಭಾಷೆಗಳು, ಪಾಕಪದ್ಧತಿಗಳು, ಆಚರಣೆಗಳು ಮತ್ತು ನಂಬಿಕೆಗಳಿಗೆ ನೆಲೆಯಾಗಿದ್ದಾಳೆ. ಈ ದೇಶದಲ್ಲಿ ಪ್ರತಿ ಕೆಲವು ಕಿಲೋಮೀಟರ್‌ಗಳಿಗೆ ಸಂಸ್ಕೃತಿ, ಆಹಾರ ಮತ್ತು ಭಾಷೆಗಳು ಬದಲಾಗುತ್ತಿದ್ದರೂ, ಆಕೆ ಏಳಿಗೆ ಹೊಂದುತ್ತಲೇ ಇದ್ದಾಳೆ ಹಾಗೂ ಮುಂದಕ್ಕೆ ಸಾಗುತ್ತಲೇ ಇದ್ದಾಳೆ. ಈ ನೆಲದಲ್ಲಿ ವೇದ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಒಂದಕ್ಕೊಂದು ಓತಪ್ರೋತವಾಗಿ ಬೆಸೆದುಕೊಂಡಿದೆ. ಭಾರತಮಾತೆಯು ಇಲ್ಲಿ ಎಲ್ಲಾ ಸಮುದಾಯಗಳ ಜನರನ್ನು ಹಾಗೂ ಎಲ್ಲಾ ಸಂಪ್ರದಾಯಗಳ ಸಂತರನ್ನು ಮತ್ತು ಜ್ಞಾನಿಗಳನ್ನು ಸುದೀರ್ಘವಾಗಿ ಗೌರವಿಸುತ್ತಾ ಸಲಾಗುತ್ತಿದ್ದಾಳೆ. ಆಕೆಯ ಮಡಿಲು ಅನಾದಿ ಕಾಲದಿಂದಲೂ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು, ಯಹೂದಿಗಳು ಮತ್ತು ಪಾರ್ಸಿಗಳಿಗೆ ನೆಲೆಯಾಗಿದೆ.

ಧರ್ಮದ ಮೂಲತತ್ವ ಸಹಾನುಭೂತಿ, ಕಾಳಜಿ ಮತ್ತು ಸ್ವೀಕಾರಮನೋಭಾವದಿಂದ ಕೂಡಿದ ಆಧ್ಯಾತ್ಮಿಕತೆಯೇ ಎಂದು ಆಕೆ ನಮಗೆ ತೋರಿಸಿದ್ದಾಳೆ. ಅವಳು ಆ ಮೌಲ್ಯಗಳನ್ನು ಬದುಕಿದ್ದಾಳೆ. ನಮ್ಮ ಆಧ್ಯಾತ್ಮಿಕ ಸಾರದ ಸೌಂದರ್ಯವನ್ನು ನಾವು ಅರಿತುಕೊಂಡಾಗ, ನಮ್ಮ ಕಲ್ಪನೆಯ ಬಿಗಿತಗಳು ಕರಗುತ್ತವೆ ಮತ್ತು ನಮ್ಮಲ್ಲಿ ಮಾನವ ಪ್ರಜ್ಞೆಯ ನಿಜವಾದ ಅರಳುವಿಕೆಗೆ ದಾರಿ ಮಾಡಿಕೊಡುತ್ತವೆ ಎಂದು ಅವಳು ನಮಗೆ ತೋರಿಸುತ್ತಿದ್ದಾಳೆ.

ಆದ್ದರಿಂದ, ನಾವು ಆಧ್ಯಾತ್ಮಿಕತೆಯ ಮೂಲಕ ನಮ್ಮ ದೃಷ್ಟಿಯನ್ನು ವಿಸ್ತರಿಸಿಕೊಳ್ಳಲು ಮತ್ತು ನಮ್ಮ ಸಂಸ್ಕೃತಿ ಸಂಪ್ರದಾಯಗಳು ಮತ್ತು ಮೌಲ್ಯ ವ್ಯವಸ್ಥೆಗಳ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನಮ್ಮ ಬೇರುಗಳನ್ನು ಆಳವಾಗಿಸಿಕೊಳ್ಳಲು ಇದು ಸೂಕ್ತ ಸಮಯವಲ್ಲವೇ? ಈ ಸ್ವಾತಂತ್ರ್ಯ ದಿನದಂದು ಇದನ್ನು ಮಾಡೋಣವೇ? ವಿಶಾಲವಾದ, ಶಾಂತಿಯಿಂದ ಕೂಡಿದ, ಹಿಂಸೆ-ಮುಕ್ತ ಮತ್ತು ಒತ್ತಡ-ಮುಕ್ತ ನಾಳೆಗಾಗಿ, ಆಂತರಿಕ ಸ್ವಾತಂತ್ರ್ಯದ ಹಾದಿಯಲ್ಲಿ ನಡೆಯಲು ನಾವು ಪ್ರಮಾಣಿಕವಾಗಿ ಪ್ರಾರಂಭಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT