ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಜುಲೈ ಅಂತ್ಯಕ್ಕೆ ಶಿಫಾರಸುಗಳ ಸಹಿತ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ನಡೆಯುತ್ತಿರುವ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ಯು ಸೋಮವಾರ (ಜೂನ್ 30) ಮುಕ್ತಾಯವಾಗಲಿದೆ. ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸುಗಳ ಸಹಿತ ಜುಲೈ ಅಂತ್ಯದ ಒಳಗೆ ವರದಿ ಸಲ್ಲಿಸಬೇಕೆಂಬ ಉದ್ದೇಶದಿಂದ, ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಲು ಇ– ಆಡಳಿತ ಇಲಾಖೆಯ ಜೊತೆ ಚರ್ಚೆ ನಡೆಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಮೇ 5ರಿಂದ ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಸಮೀಕ್ಷೆ ಆರಂಭಗೊಂಡಿತ್ತು. ರಾಜ್ಯದಲ್ಲಿ 2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆಯನ್ನು ಅಂದಾಜಿಸಿ (1.16 ಕೋಟಿ) ಹೋಲಿಸಿದಾಗ ಜೂನ್ 27ರವರೆಗೆ ಇಡೀ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇಕಡಾ 91ರಷ್ಟು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡಾ 51ರಷ್ಟು ಪ್ರಗತಿ ಆಗಿದೆ.

2025ರ ಅಂದಾಜು ಜನಸಂಖ್ಯೆಗೆ ಹೋಲಿಸಿದರೆ 12 ಜಿಲ್ಲೆಗಳಲ್ಲಿ ಶೇ 100 ಮತ್ತು ಅದಕ್ಕಿಂತ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗಿ ಆಗಿದ್ದಾರೆ. ಈ ಪೈಕಿ, ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ 111ರಷ್ಟು ಜನರು ಮಾಹಿತಿ ನೀಡಿದ್ದಾರೆ. ಒಂಬತ್ತು ಜಿಲ್ಲೆಗಳಲ್ಲಿ ಶೇ 95ರಿಂದ ಶೇ 99ರಷ್ಟು, ಏಳು ಜಿಲ್ಲೆಗಳಲ್ಲಿ ಶೇ 90ರಿಂದ ಶೇ 94ರಷ್ಟು ಜನರು ನೋಂದಾಯಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಶೇ 89, ರಾಮನಗರದಲ್ಲಿ ಶೇ 86, ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಹೊರತುಪಡಿಸಿ) ಶೇ 80ರಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1.04 ಕೋಟಿ ಪರಿಶಿಷ್ಟ ಜಾತಿಯವರಿದ್ದು, ಆ ಪೈಕಿ, ಆದಿ ಆಂಧ್ರ (ಎಎ), ಆದಿ ಕರ್ನಾಟಕ (ಎಕೆ), ಆದಿ ದ್ರಾವಿಡ (ಎಡಿ) ಎಂದು 44 ಲಕ್ಷ (ಶೇಕಡಾ 43.36) ಜನ ಘೋಷಿಸಿಕೊಂಡಿದ್ದರು. ಕೆಲವು ಜಿಲ್ಲೆಗಳಲ್ಲಿ ‘ಆದಿ ಕರ್ನಾಟಕ’ ಎಂದು ಹೊಲೆಯರೂ ಬರೆಸಿಕೊಂಡಿದ್ದರು. ಮಾದಿಗರೂ ಘೋಷಿಸಿಕೊಂಡಿದ್ದರು. ಆದಿ ದ್ರಾವಿಡರೂ ಇದೇ ರೀತಿ ಬರೆಸಿಕೊಂಡಿದ್ದರು. ಎಎ, ಎಕೆ, ಎಡಿ ಎನ್ನುವುದು ಒಂದೊಂದು ಜಾತಿಯಲ್ಲ ಬದಲಾಗಿ ‘ಜಾತಿಗಳ ಗುಂಪು’. ಹೀಗಾಗಿ, ಈ ಜನರು ಸಮೀಕ್ಷೆಯಲ್ಲಿ ತಮ್ಮ ಉಪ ಜಾತಿಗಳನ್ನು ನಮೂದಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ 8 ಲಕ್ಷ ಹೆಚ್ಚು ಜನರು ನಾನಾ ಕಾರಣಗಳಿಗೆ ತಮ್ಮ ಉಪ ಜಾತಿಯನ್ನು ನಮೂದಿಸಿಲ್ಲ. ಒಳ ಮೀಸಲಾತಿಗೆ ವರ್ಗೀಕರಣ ಮಾಡುವ ಹಂತದಲ್ಲಿ ಎಎ, ಎಕೆ, ಎಡಿ ಎಂದು ನಮೂದಿಸಿರುವ ಒಟ್ಟು ಜನಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಂಡುಕೊಳ್ಳಲಾಗುವುದು. 2–3 ದಿನಗಳಲ್ಲಿ ಈ ಅಂಕಿಸಂಖ್ಯೆಗಳು ಸ್ಪಷ್ಟವಾಗಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

‘ಕೆಲವು ಕುಟುಂಬಗಳಿಗೆ ಮೂಲ ಜಾತಿ ಗೊತ್ತಿದ್ದರೂ ಆ ಜಾತಿಗಳು ಪರಿಶಿಷ್ಟ 101 ಜಾತಿ ಪಟ್ಟಿಯಲ್ಲಿ ಇಲ್ಲ. ಅಂಥವರು ಉಪ ಜಾತಿ ಹೇಳಿದರೂ ನಮೂದಿಸಲು ಸಾಧ್ಯ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ‘ಮನ್ಸ’, ಕೊಡಗಿನ ‘ಕೆಂಬಟ್ಟಿ’, ಉಡುಪಿಯ ‘ಮೇರ’, ರಾಯಚೂರಿನ ‘ಮಾದಿಗ ದಾಸಿರಿ’ ಇಂತಹ ಕೆಲವು ಉಪ ಜಾತಿಗಳು ಎಕೆ, ಎಡಿ, ಎಎ ಆಗಿಯೇ ಮುಂದುವರಿಯಲಿವೆ.

ಈ ಜಾತಿಯವರು ತಮ್ಮ ಉಪ ಜಾತಿಯ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರ ಪಡೆದಿರುವುದು ಸಮೀಕ್ಷೆಯ ವೇಳೆ ಗಮನಕ್ಕೆ ಬಂದಿದೆ. ಇನ್ನೂ ಕೆಲವರಿಗೆ ತಮ್ಮ ಮೂಲ ಜಾತಿ ಗೊತ್ತಿದ್ದರೂ ಉಪ ಜಾತಿಯ ಹೆಸರು ಸಾಮಾಜಿಕವಾಗಿ ಅವಮಾನ ಹುಟ್ಟಿಸುವ ಪದಗಳು ಎನ್ನುವುದೂ ಸೇರಿದಂತೆ ನಾನಾ ಕಾರಣಗಳಿಗೆ ಹೇಳಿಕೊಳ್ಳಲು ನಿರಾಕರಿಸಿದ್ದಾರೆ. ಅಂಥವರು ಎಕೆ, ಎಡಿ, ಎಎ ಎಂದೇ ಸಮೀಕ್ಷಾ ವರದಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ’ ಎಂದೂ ಮೂಲಗಳು ತಿಳಿಸಿವೆ.

ಒಳ ಮೀಸಲು ಸಮೀಕ್ಷೆ 1.04 ಕೋಟಿ

2011ರ ಜನಗಣತಿಯಲ್ಲಿ ಪರಿಶಿಷ್ಟರ ಜನಸಂಖ್ಯೆ 1.16 ಕೋಟಿ

2025ರ ಅಂದಾಜು ಪರಿಶಿಷ್ಟರ ಜನಸಂಖ್ಯೆ 1.06 ಕೋಟಿ

ಸಮೀಕ್ಷೆಗೆ ಒಳಪಟ್ಟವರು (ಜೂನ್ 27ರವರೆಗೆ) 91

2025ರ ಅಂದಾಜು ಪರಿಶಿಷ್ಟರ ಜನಸಂಖ್ಯೆ ಹೋಲಿಸಿದರೆ ಶೇಕಡಾವಾರು

ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಮಾಜಿಕ ಹಿಂದುಳಿದಿರುವಿಕೆ ಉದ್ಯೋಗದಲ್ಲಿ ಪ್ರಾತಿನಿಧ್ಯ ಕೊರತೆ ಗುರುತಿಸಿ ಒಳ ಮೀಸಲಾತಿಗೆ ಉಪ ಜಾತಿಗಳನ್ನು ವರ್ಗೀಕರಿಸಲಾಗುವುದು
– ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ

ಪರಿಶಿಷ್ಟ ಕೇರಿಗಳಲ್ಲೂ ‘ತಾರತಮ್ಯ’

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ 10 ಜಾತಿಯವರು ಒಟ್ಟಿಗೆ ವಾಸ ಮಾಡುವ ಒಂದೇ ಒಂದು ಕೇರಿ ರಾಜ್ಯದಲ್ಲಿ ಇಲ್ಲ. ಆ ಮೂಲಕ ಈ ಜಾತಿಗಳ ನಡುವೆಯೇ ತಾರತಮ್ಯ ಇರುವ ಅಂಶ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

‘ಹೊಲೆಯರ ಕೇರಿಯೇ ಬೇರೆ. ಮಾದಿಗರ ಕೇರಿಯೇ ಬೇರೆ. ಬೋವಿ ಲಂಬಾಣಿ ಸಮುದಾಯದವರ ಕೇರಿಗಳೇ ಬೇರೆ. ಈ ಉಪಜಾತಿಯವರು ಒಬ್ಬರ ಮನೆಗೆ ಇನ್ನೊಬ್ಬರು ಹೋಗುವುದಿಲ್ಲ. ಒಬ್ಬರು ಮಾಡಿದ ಅಡುಗೆಯನ್ನು ಇನ್ನೊಂದು ಜಾತಿಯವರು ತಿನ್ನುವುದಿಲ್ಲ. ಒಂದು ಜಾತಿಯವರ ಬಾವಿಯಿಂದ ಇನ್ನೊಂದು ಜಾತಿಯವರು ನೀರು ಸೇದುವುದಿಲ್ಲ. ಹೆಣ್ಣು ಕೊಡುವ ತರುವ ಸಂಬಂಧವೂ ಇಲ್ಲ.ಇದರರ್ಥ ಈ ಜಾತಿಗಳೂ ಸಮಾನಾಂತರ ಜಾತಿಗಳಲ್ಲ’ ಎಂದು ಆಯೋಗ ತಿಳಿಸಿದೆ.

ಸರ್ಕಾರದ ಸಿಬ್ಬಂದಿಯಲ್ಲೂ ‘ಎಎ’ ‘ಎಕೆ’ ‘ಎಡಿ’

ಸರ್ಕಾರದ 43 ಇಲಾಖೆಗಳಿಂದ ಪರಿಶಿಷ್ಟ ಜಾತಿಯವರ ಮಾಹಿತಿ ಸಂಗ್ರಹಿಸಲಾಗಿದೆ. ಅದರಲ್ಲೂ ಶೇ 25ರಷ್ಟು ಸಿಬ್ಬಂದಿ ಎಎ ಎಡಿ ಎಎ ಎಂದೇ ನಮೂದಿಸಿಕೊಂಡಿದ್ದು ಉಪ ಜಾತಿಯನ್ನು ಹೇಳಿಕೊಂಡಿಲ್ಲ. ನಿಗಮಗಳಲ್ಲೂ ಇದೇ ಪರಿಸ್ಥಿತಿಯಿದೆ. ಪರಿಶಿಷ್ಟ ಜಾತಿಯ ಫಲಾನುಭವಿಗಳಲ್ಲಿ ಉಪ ಜಾತಿಯ ಮಾಹಿತಿ ಸಿಕ್ಕಿಲ್ಲ. ಪರಿಶಿಷ್ಟ ಜಾತಿಯವರಿಗಾಗಿಯೇ ಇರುವ ಏಳು ನಿಗಮಗಳಿಂದ ಮಾತ್ರ ಉಪ ಜಾತಿವಾರು ಫಲಾನುಭವಿಗಳ ಪಟ್ಟಿ ಲಭ್ಯವಾಗಿದೆ.

ಇನ್ನು ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952ರಿಂದ 2024ರವರೆಗೆ ಲೋಕಸಭೆ ವಿಧಾನಸಭೆಗೆ ಆಯ್ಕೆಯಾದವರ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಚುನಾವಣಾ ಆಯೋಗ ಕೂಡಾ ಪರಿಶಿಷ್ಟ ಜಾತಿ ಎಂದಷ್ಟೆ ಮಾಹಿತಿ ನೀಡಿದೆ. ಮನೆ ಮನೆ ಸಮೀಕ್ಷೆಯ ವೇಳೆ ಈ ಜನಪ್ರತಿನಿಧಿಗಳ ಉಪಜಾತಿ ಗೊತ್ತಾಗಿದೆ. ಆ ವೇಳೆಯಲ್ಲೂ ‘ಎಎ’ ‘ಎಕೆ’ ‘ಎಡಿ’ ಎಂದು ನಮೂದಿಸಿರುವ ಸಾಧ್ಯತೆಯೂ ಇದೆ. ದತ್ತಾಂಶಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.