ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಖ್ಯ ಜಾತ್ಯತೀತತೆಗೆ ಧಕ್ಕೆ ತಾರದು: ದೇವೇಗೌಡ

Published 27 ಸೆಪ್ಟೆಂಬರ್ 2023, 16:23 IST
Last Updated 27 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಜತೆ ಮೈತ್ರಿಗೆ ನಾನೇ ಒಪ್ಪಿಗೆ ನೀಡಿದೆ. ಜೆಡಿಎಸ್‌ ಪಕ್ಷ ಎನ್‌ಡಿಎ ಭಾಗವಾದರೂ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳ ಹಿತಾಸಕ್ತಿಗೆ ಬದ್ಧವಾಗಿರುತ್ತದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

‘ನಮ್ಮ ಪಕ್ಷದ ಎಲ್ಲಾ ಶಾಸಕರು, ನಾಯಕರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇವೆ. ರಾಜಕೀಯ ಬೆಳವಣಿಗೆ, ಪಕ್ಷದ ಹಿತದೃಷ್ಟಿಯಿಂದ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇವೆ. ಇದು ಅವಕಾಶವಾದಿ ರಾಜಕಾರಣ ಅಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೈತ್ರಿಯಲ್ಲಿ ತಪ್ಪು ಹುಡುಕುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ದೇಶದ ಎಲ್ಲೆಡೆ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಜಾತ್ಯತೀತ ನಿಲುವಿನ ಇತರೆ ಪಕ್ಷಗಳನ್ನು ಬಲಿಕೊಡುತ್ತಿದೆ. 2018ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ವಿನಂತಿಸಿದ್ದರು. ಒಂದೇ ವರ್ಷದಲ್ಲಿ ತಮ್ಮ ನಿಲುವು ಬದಲಾಯಿಸಿ, ಶಾಸಕರ ರಾಜೀನಾಮೆಗೆ ಕುಮ್ಮಕ್ಕು ನೀಡುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು. ಕಾಂಗ್ರೆಸ್‌ನ ಇಂತಹ ದ್ವಿಮುಖ ನೀತಿಯ ವಿರುದ್ಧ ಜೆಡಿಎಸ್ ಹೋರಾಟ ನಡೆಸುತ್ತಿದೆ ಎಂದರು.

‘ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿ.ಎಂ. ಫಾರೂಕ್ ಅವರನ್ನು ಕಾಂಗ್ರೆಸ್‌ನವರು ಸೋಲಿಸಿದರು. ಆಗ ಅವರಿಗೆ ಜಾತ್ಯತೀತತೆ ನೆನಪಾಗಲಿಲ್ಲವೇ’ ಎಂದು ಪ್ರಶ್ನಿಸಿದರು.

‘ನಾವೇನು ಬಿಜೆಪಿ ನಾಯಕರ ಜತೆ ಕದ್ದುಮುಚ್ಚಿ ಮಾತನಾಡಿಲ್ಲ. ಮೈತ್ರಿಯಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ಆಗಿದೆ. ಪ್ರಧಾನಿಗಳ ಜತೆ ಇನ್ನೂ ಮಾತುಕತೆ ನಡೆಸಿಲ್ಲ’ ಎಂದು ಮಾಹಿತಿ ನೀಡಿದರು.

‘ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೂ ತನ್ನ ಸಿದ್ಧಾಂತ, ನಿಲುವಿನಿಂದ ವಿಮುಖವಾಗುವುದಿಲ್ಲ. ಜಾತ್ಯತೀತ ಸಿದ್ಧಾಂತ ಗಾಳಿಗೆ ತೂರುವ ಕೆಲಸಕ್ಕೆ ಆಸ್ಪದ ನೀಡಿಲ್ಲ. ಕಳೆದ 60 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಮುಂದೆಯೂ ಬಿಡುವುದಿಲ್ಲ. ಆದರೆ, ಮುಸ್ಲಿಂ ಸಮುದಾಯ ಕಳೆದ ಚುನಾವಣೆಯಲ್ಲಿ ಬೆಂಬಲ ನೀಡಲಿಲ್ಲ. ಇದು ನೋವಿನ ವಿಚಾರ’ ಎಂದರು.

ಸಂಪರ್ಕಕ್ಕೆ ಸಿಗದ ಇಬ್ರಾಹಿಂ: ಕುಮಾರಸ್ವಾಮಿ

ಮೈತ್ರಿ ನಂತರ ಪಕ್ಷದ ರಾಜ್ಯ ಘಟಕದ ಆಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಮೈತ್ರಿ ಬಗ್ಗೆ ಮುಸ್ಲಿಂ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಇಬ್ರಾಹಿಂ ಅವರಿಗೂ ಮಾಹಿತಿ ಗೊತ್ತಿದೆ. ಮೈತ್ರಿಯ ಯಾವ ವಿಷಯಗಳನ್ನೂ ಮುಚ್ಚಿಟ್ಟಿಲ್ಲ’ ಎಂದರು.

ಮುಸ್ಲಿಂ ಮತಗಳಿಲ್ಲದೇ ಕುಮಾರಸ್ವಾಮಿ ಗೆದ್ದಿದ್ದಾರಾ ಎಂಬ ವಸತಿ ಸಚಿವ ಜಮೀರ್ ಅಹಮದ್ ಖಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದ್ದಿದ್ದರೆ ಆ ಸಮುದಾಯ ಅಲ್ಲೂ ಮತ ಹಾಕುತ್ತಿರಲಿಲ್ಲ ಎಂದರು.

‘ಸರ್ಕಾರ ಬೀಳಿಸುವಾಗ ಬಿಜೆಪಿಯ ಐವರು ಶಾಸಕರು ಬೆಂಬಲ ಕೊಡಲು ಮುಂದಾಗಿದ್ದರು. ಆದರೆ ಸಚಿವ ಮಹಾಶಯರೊಬ್ಬರು ಐವರು ಬಿಜೆಪಿ ಶಾಸಕರು ಬಂದರೆ ಕಾಂಗ್ರೆಸ್‌ನ ಇನ್ನೂ ಐವರನ್ನು ಕಳುಹಿಸುತ್ತೇವೆ ಎಂದಿದ್ದರು’ ಎಂದು ಜಮೀರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT