ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮೂರು: JDS ಅಭ್ಯರ್ಥಿಗಳು ಯಾರು? ಇಂದು ಘೋಷಣೆ ಸಾಧ್ಯತೆ

ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಜೆಡಿಎಸ್‌ ನಾಯಕರಿಗೆ ಇನ್ನೂ ಸಾಧ್ಯವಾಗಿಲ್ಲ
Published 26 ಮಾರ್ಚ್ 2024, 0:32 IST
Last Updated 26 ಮಾರ್ಚ್ 2024, 0:32 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಜೆಡಿಎಸ್‌ ನಾಯಕರಿಗೆ ಇನ್ನೂ ಸಾಧ್ಯವಾಗಿಲ್ಲ. ಪಕ್ಷದ ‘ಕೋರ್‌ ಕಮಿಟಿ’ ಸಭೆ ಮಂಗಳವಾರ ನಡೆಯಲಿದ್ದು, ಆ ಬಳಿಕ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಲೇ ಇದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರ ಮನವೊಲಿಕೆ ಬಳಿಕವೇ ಮಂಡ್ಯ ಸ್ಪರ್ಧೆ ಕುರಿತು ತೀರ್ಮಾನ ಪ್ರಕಟಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಕಾರಣದಿಂದ ಅಭ್ಯರ್ಥಿಗಳ ಘೋಷಣೆ ವಿಳಂಬವಾಗುತ್ತಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್‌ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸುವಂತೆ ಬಿಜೆಪಿಯ ಎ.ಟಿ. ರಾಮಸ್ವಾಮಿ ಮತ್ತು ಪ್ರೀತಂ ಗೌಡ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ವರಿಷ್ಠರ ಮೂಲಕವೇ ಅವರಿಬ್ಬರ ಮನವೊಲಿಕೆ ಪ್ರಯತ್ನ ನಡೆದಿದೆ. ಕೋಲಾರದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಮುಖಂಡ ಮಲ್ಲೇಶ್‌ ಬಾಬು ಹೆಸರುಗಳು ಪರಿಶೀಲನೆಯಲ್ಲಿವೆ.

‘ಜೆ.ಪಿ. ನಗರದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ, ಅಲ್ಲಿಯೇ ಮಂಗಳವಾರ ಬೆಳಿಗ್ಗೆ ‘ಕೋರ್‌ ಕಮಿಟಿ’ ಸದಸ್ಯರೊಂದಿಗೆ ಸಭೆ ನಡೆಸುವರು. ಆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಳ್ಳಲಿದೆ. ಹಾಸನ ಜಿಲ್ಲೆಯ ಪ್ರವಾಸದಲ್ಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ಬೆಂಗಳೂರಿಗೆ ವಾಪಸಾದ ಬಳಿಕ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ’ ಎಂದು ಮೂಲಗಳು ಹೇಳಿವೆ.

ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರ ಜತೆ ಸೋಮವಾರ ಸಭೆ ನಡೆಸಿದ ಕುಮಾರಸ್ವಾಮಿ, ‘ಚನ್ನಪಟ್ಟಣ ಕ್ಷೇತ್ರ ಮತ್ತು ರಾಮನಗರ ಜಿಲ್ಲೆಯನ್ನು ನಾನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಯಾವುದೇ ಸಂದರ್ಭದಲ್ಲೂ ನಿಮ್ಮ ಜತೆ ಇರುತ್ತೇನೆ. ಆದರೆ, ಪಕ್ಷದ ಹಿತದೃಷ್ಟಿಯಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT