ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಮಂಡ್ಯದಿಂದ ಎಚ್.ಡಿ. ಕುಮಾರಸ್ವಾಮಿ ಕಣಕ್ಕೆ?

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ 2024ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿರುವ ಜೆಡಿಎಸ್‌, ಬಿಜೆಪಿ ಸಖ್ಯದೊಂದಿಗೆ ಚುನಾವಣೆಗೆ ಸಜ್ಜಾಗುತ್ತಿದೆ. ಹಾಸನ, ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳು ಜೆಡಿಎಸ್‌ಗೆ ಸಿಗುವ ಸಂಭವ ಇದೆ. ಸೀಟು ಹಂಚಿಕೆಗೆ ಮುನ್ನವೇ, ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ರಾಜಕೀಯ ಪಡಸಾಲೆಯಲ್ಲಿ ಶುರುವಾಗಿವೆ. ‘ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ’ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದರೂ ಪಕ್ಷದ ಒಳಮನೆಯಲ್ಲಿ ತಮ್ಮ ನಾಯಕನ ಸ್ಪರ್ಧೆ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದೆ.

2019ರಲ್ಲಿ ಲೋಕಸಭೆ ಚುನಾವಣೆ ನಡೆದಾಗ, ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಎರಡು ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಆಗಲೂ, ಕುಮಾರಸ್ವಾಮಿ ಪುತ್ರ ನಿಖಿಲ್‌ ಮಂಡ್ಯದಲ್ಲಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆಗಳು ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನ ಜೋರಾಗಿಯೇ ನಡೆದಿತ್ತು. ‘ದೇವೇಗೌಡರು, ಪ್ರಜ್ವಲ್ ಬಿಟ್ಟರೆ ನಮ್ಮ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧಿಸುವುದಿಲ್ಲ’ ಎಂದು ಕುಮಾರಸ್ವಾಮಿ ಏಕಕಂಠದಲ್ಲಿ ಹೇಳಿದ್ದರು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಿಖಿಲ್ ಸ್ಪರ್ಧೆ ನಿಕ್ಕಿಯಾಯಿತು.

ಆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಕಾಂಗ್ರೆಸ್‌ ಸ್ಪರ್ಧಾಳುವಾಗುವ ಲೆಕ್ಕವಿತ್ತು. ನಿಖಿಲ್ ಕುಮಾರಸ್ವಾಮಿಗಾಗಿ ಮಂಡ್ಯ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದ್ದರಿಂದಾಗಿ, ಕಾಂಗ್ರೆಸ್ ಕೈಚೆಲ್ಲಿತ್ತು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಬಿಜೆಪಿ ನೇರ ಬೆಂಬಲ ಘೋಷಿಸಿದ್ದರೆ, ಕಾಂಗ್ರೆಸ್‌ ನಾಯಕರು ಪೂರ್ಣ ಸಹಕಾರ ನೀಡಿದ್ದರು. ಹೀಗಾಗಿ, ಸುಮಲತಾ ಗೆಲುವು ಸಾಧಿಸಿದ್ದರು.

ಈಗ ರಾಜಕೀಯ ಬದಲಾಗಿದೆ. ಸುಮಲತಾ ಬಿಜೆಪಿಯ ಸಹವಾಸದಲ್ಲಿದ್ದರೂ ಆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ತೀರಾ ಕ್ಷೀಣ. ಹೀಗಾಗಿ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ವರಿಷ್ಠರು ಆಸಕ್ತಿ ತೋರಿದ್ದಾರೆ. ಕುಮಾರಸ್ವಾಮಿ ಸ್ಪರ್ಧಿಸಿದರೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿತಕಾರಿ ವಾತಾವರಣ ನಿರ್ಮಾಣವಾಗಬಹುದು ಎಂಬುದು ಕಮಲ ಪಾಳಯದ ನಂಬಿಕೆ.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಕುಮಾರಸ್ವಾಮಿ, ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬರುತ್ತಿದೆ. ನಮ್ಮ ಜನರು, ಕಾರ್ಯಕರ್ತರ ಭಾವನೆ ಹಾಗಿರುವುದು ಇಂತಹ ಸುದ್ದಿಗೆ ಕಾರಣ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ’ ಎಂದಿದ್ದರು.

‘ಕೇಂದ್ರ ಸಚಿವರಾಗಲಿದ್ದೀರಾ’ ಎಂಬ ಪ್ರಶ್ನೆಗೆ, ‘ಯಾರ ಹಣೆಯ ಮೇಲೆ ಏನೇನು ಬರೆದಿದೆಯೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು. ಕಾದು ನೋಡೋಣ’ ಎಂದು ಹೇಳಿ, ಮುಂದಿನ ನಡೆಯನ್ನು ರಹಸ್ಯವಾಗಿಯೇ ಉಳಿಸಿದ್ದರು.

‘ರಾಜ್ಯದಲ್ಲಿ 19 ಶಾಸಕರನ್ನಿಟ್ಟುಕೊಂಡು ವಿರೋಧ ಪಕ್ಷವಾಗಿ ಕೂರುವುದಕ್ಕಿಂತ ಕೇಂದ್ರ ಸಚಿವರಾದರೆ ಅನುಕೂಲಗಳು ಜಾಸ್ತಿ ಎಂಬ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದಾಗಿದೆ. ಮುಂದಿನ ನಾಲ್ಕು ವರ್ಷ ಸಚಿವರಾಗಿ ದೇಶ, ರಾಜ್ಯ ಸುತ್ತಾಡಿ ವರ್ಚಸ್ಸು ಹೆಚ್ಚಿಸಿಕೊಂಡು, ಪಕ್ಷ ಬೆಳೆಸಿದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಒಡ್ಡುವ ಅಪೇಕ್ಷೆ ಅವರಲ್ಲಿದೆ. ಹೀಗಾಗಿ, ಮಂಡ್ಯದಲ್ಲಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ; ಅವರು ಸ್ಪರ್ಧಿಸದೇ ಇದ್ದರೂ ನಿಖಿಲ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ’ ಎನ್ನುತ್ತವೆ ಜೆಡಿಎಸ್ ಮೂಲಗಳು.

ಮಂಡ್ಯದಿಂದ ಮತ್ತೆ ಸ್ಪರ್ಧೆ: ಸಂಸದೆ ಸುಮಲತಾ

ಮಂಡ್ಯ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ಪರ್ಧೆ ಖಚಿತ. ಈ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ’ ಎಂದು ಸಂಸದೆ ಸುಮಲತಾ, ಮತ್ತೆ ಸ್ಪರ್ಧೆಯ ಸುಳಿವು ನೀಡಿದರು.

ಮದ್ದೂರಿನಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬಿಜೆಪಿ–ಜೆಡಿಎಸ್‌ ಮೈತ್ರಿ ಬಗ್ಗೆ ಮಾತನಾಡಲು ಮಾತ್ರ ನಿರಾಕರಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು, ವಿಧಾನಸಭೆ ಚುನಾವಣೆಯ ಸಂದರ್ಭ ಬಿಜೆಪಿಯತ್ತ ವಾಲಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚನ್ನಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲೂ ಭಾಗಿಯಾಗಿದ್ದರು. ಅವರ ಅನೇಕ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

‘ಲೋಕಸಭೆ ಚುನಾವಣೆ ಸಂದರ್ಭ ಸುಮಲತಾ ಅವರೂ ಬಿಜೆಪಿ ಸೇರಲಿದ್ದು, ಪಕ್ಷದ ಅಭ್ಯರ್ಥಿಯಾಗಲಿದ್ದಾರೆ’ ಎನ್ನಲಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದು, ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸುಮಲತಾ ಮತ್ತೆ ಸ್ಪರ್ಧೆಗೆ ಆಸಕ್ತಿ ತೋರಿರುವುದು ಕುತೂಹಲ ಕೆರಳಿಸಿದೆ.

ಚುನಾವಣೆಯಲ್ಲಿ ಸ್ಪರ್ಧೆ ಖಚಿತ. ಸಮಯ ಬಂದಾಗ ಮತ್ತೆ ಮಾತನಾಡುತ್ತೇನೆ. ಬಿಜೆಪಿ–ಜೆಡಿಎಸ್ ಮೈತ್ರಿ ಬಗ್ಗೆ ನಾನೇನು ಹೇಳಲಾರೆ.
–ಸುಮಲತಾ, ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT