ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿ ಭಾಷಾ ಶಿಕ್ಷಣದಿಂದ ಕನ್ನಡ ಶಾಲೆಗಳ ಉಳಿವು: ಎಸ್.ಎಲ್. ಭೈರಪ್ಪ

ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ *ಕನ್ನಡ ಶಾಲೆಗಳ ಬಗ್ಗೆ ದುಂಡು ಮೇಜಿನ ಸಭೆ ನಡೆಸಿದ ಕಸಾಪ
Last Updated 5 ಏಪ್ರಿಲ್ 2022, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಮಾಧ್ಯಮ ಶಿಕ್ಷಣದ ಬಗೆಗಿನ ಕೀಳರಿಮೆ ಹೋಗಲಾಡಿಸಲು ಹಾಗೂ ಮಾತೃಭಾಷೆ ಶಿಕ್ಷಣ ಪ್ರೋತ್ಸಾಹಿಸಲು ಶಾಲೆಗಳಲ್ಲಿ ದ್ವಿ ಭಾಷಾ ಶಿಕ್ಷಣ ಅಗತ್ಯ. ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಪರಿಚಯಿಸುವ ಹಾಗೂ ಆಂಗ್ಲ ಮಾಧ್ಯಮದ ಮಕ್ಕಳಿಗೆ ಕನ್ನಡ ಕಲಿಸುವಪಠ್ಯ ಅಗತ್ಯ’ ಎಂದು ಕಾದಂಬರಿಕಾರಎಸ್.ಎಲ್. ಭೈರಪ್ಪ ಹೇಳಿದರು.

‌ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ʻಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿʼ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಆಂಗ್ಲ ಮಾಧ್ಯಮ ಶಿಕ್ಷಣದಿಂದ ತಾಂತ್ರಿಕ ಶಿಕ್ಷಣ ಸುಲಭವಾಗುತ್ತದೆ ಎಂಬ ಮನೋಭಾವ ಹಳ್ಳಿ ಜನರಲ್ಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲುಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಆದ್ಯತೆ ನೀಡಬೇಕು. ಮಾಧ್ಯಮಿಕ ಶಿಕ್ಷಣದಲ್ಲಿ ಆಂಗ್ಲ ಭಾಷೆ ಪರಿಚಯಿಸಬೇಕು. ಪ್ರೌಢ ಶಾಲೆಗಳಲ್ಲಿ 60 ನಿಮಿಷಗಳ ತರಗತಿಗಳಲ್ಲಿ 40 ನಿಮಿಷಗಳು ಕನ್ನಡ ಹಾಗೂ ಉಳಿದ 20 ನಿಮಿಷಗಳು ಆಂಗ್ಲ ಭಾಷೆಯಲ್ಲಿ ಬೋಧಿಸುವ ವ್ಯವಸ್ಥೆ ಜಾರಿಯಾಗಬೇಕು.ಎರಡೂ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇದರಿಂದ ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲ ಆಗುತ್ತದೆ. ಮಾಧ್ಯಮಗಳ ನಡುವಿನ ಕಂದಕವೂ ತೊಲಗಲಿದೆ’ ಎಂದು ಹೇಳಿದರು.

‘ಉಪನ್ಯಾಸಕರಿಗೆ ಭಾಷಾ ಶಕ್ತಿ ಅಗತ್ಯ. ಕನ್ನಡ ಮಾಧ್ಯಮದ ಪ್ರಾಧ್ಯಾಪಕರಿಗೆ ಇಂಗ್ಲಿಷ್ ಜ್ಞಾನ, ಇಂಗ್ಲಿಷ್ ಪ್ರಾಧ್ಯಾಪಕರಿಗೆ ಕನ್ನಡದ ಜ್ಞಾನ ಇರಬೇಕು. ಎರಡು ಭಾಷೆಯನ್ನೂ ತರಗತಿಯಲ್ಲಿ ಬಳಸಬೇಕು. ಈ ವ್ಯವಸ್ಥೆ ಬಂದರೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಭ್ಯಸಿಸುತ್ತಿರುವ ಮಕ್ಕಳ ಪೋಷಕರ ಭಯ ಹೋಗಲಾಡಿಸಲು ಸಾಧ್ಯ’ ಎಂದು ಹೇಳಿದರು.

3 ಸಾವಿರ ಮಾದರಿ ಶಾಲೆಗಳು:‌

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ಈ ಬಾರಿಯ ಬಜೆಟ್‌ನಲ್ಲಿ ಮಾದರಿ ಶಾಲೆಗಳನ್ನು ಘೋಷಿಸಲಾಗಿದೆ. ಶಾಲೆಗಳಲ್ಲಿ ತರಗತಿಗಳು ಇರುವಷ್ಟು ಕೊಠಡಿ ಹಾಗೂ ಶಿಕ್ಷಕರನ್ನು ಒದಗಿಸಲಾಗುತ್ತದೆ.ಇಂಗ್ಲಿಷ್ ಕಲಿಕೆ ಬಗ್ಗೆ ಪ್ರತ್ಯೇಕ ತರಗತಿ ಇರಲಿದೆ. ಈ ಸಾಲಿನಲ್ಲೇ 3 ಸಾವಿರ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದ ಒಂದು ಪುಟದಲ್ಲಿ ಕನ್ನಡ ಮತ್ತೊಂದು ಪುಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪಠ್ಯ ಇರಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸರ್ಕಾರವು 47 ಸಾವಿರಕ್ಕೂ ಅಧಿಕ ಶಾಲೆ ನಡೆಸುತ್ತಿದೆ. ಆದರೆ, 3,800 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದಾರೆ. 562 ಶಾಲೆಗಳಲ್ಲಿ ತಲಾ ಒಂದು ಮಕ್ಕಳು ಕಲಿಯುತ್ತಿದ್ದಾರೆ ಎಂದರು.

ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹಾಗೂ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

‘ಪ್ರೋತ್ಸಾಹ ಧನ ಸ್ಥಾಪನೆ ಮೂಲೆಗುಂಪು’

‘ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಾಗರಾಜ್ಯ ಸರ್ಕಾರವು ₹5 ಲಕ್ಷ ಗೌರವ ಧನ ನೀಡಿತ್ತು. ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಆ ಹಣವನ್ನು ವಾಪಸ್ ನೀಡಿ, ಉತ್ತಮ ಅಂಕ ಪಡೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸ್ಥಾಪಿಸಲು ಮನವಿ ಮಾಡಿಕೊಂಡಿದ್ದೆ. ಸರ್ಕಾರವು ಒಂದಷ್ಟು ಹಣವನ್ನು ಈ ಕಾರ್ಯಕ್ಕೆ ಮೀಸಲಿಡುವಂತೆ ಸಲಹೆ ನೀಡಿದ್ದೆ. ₹ 200 ಕೋಟಿ ಮೀಸಲಿರಿಸಿ, 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಒದಗಿಸಲು ಕ್ರಮ ವಹಿಸುವುದಾಗಿ ಅಂದಿನ ಶಿಕ್ಷಣ ಮಂತ್ರಿವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದನ್ನು ಮೂಲೆಗುಂಪು ಮಾಡಿತು’ ಎಂದು ಎಸ್‌.ಎಲ್. ಭೈರಪ್ಪ ಬೇಸರ ವ್ಯಕ್ತಪಡಿಸಿದರು.

‘ಹಿಂದುಳಿದವರು ಮುಂದೆ ಬರಬೇಕಾದರೆ ಇಂಗ್ಲಿಷ್ ಶಿಕ್ಷಣ ಅಗತ್ಯ ಎಂದು ಕೆಲವರ ತಲೆಯಲ್ಲಿದೆ. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಕನ್ನಡ ಮಾಧ್ಯಮ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಶಿಷ್ಯ ವೇತನ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ‘ಶಿಷ್ಯ ವೇತನಕ್ಕೆ₹200 ಕೋಟಿ ಮೀಸಲಿಡುವ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆಗೆ ಚರ್ಚಿಸಿ, ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT