ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂದಿನಿ’– ‘ಅಮುಲ್‌’ ವಿಲೀನಗೊಳಿಸುವ ಶಾ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ಆಕ್ರೋಶ

Last Updated 31 ಡಿಸೆಂಬರ್ 2022, 14:15 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನ ಅಮುಲ್‌ ಜತೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್ –ನಂದಿನಿ)ಯನ್ನು ವಿಲೀನಗೊಳಿಸುವ ಅಮಿತ್‌ ಶಾ ಅವರ ಹೇಳಿಕೆಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿದೆ.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿದ್ದ ಅಮಿತ್‌ ಶಾ ಅವರು, ಗುಜರಾತ್‌ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು.

‘ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975ರಿಂದಲೂ ಕೆಎಂಎಫ್‌ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದಿದ್ದರು.

ಅಮಿತ್‌ ಶಾ ಅವರ ಹೇಳಿಕೆ ಕುರಿತ ಮಾಧ್ಯಮ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಮುಲ್‌–ನಂದಿನಿ ವಿಲೀನಕ್ಕೆ ಸಾಮಾಜಿಕ ಮಾಧ್ಯಮದ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳು

ಅಮುಲ್ ಇಲ್ಲದೆಯೂ ಕರ್ನಾಟಕ ಮತ್ತು ನಂದಿನಿ/ಕೆಎಂಎಫ್ ಉತ್ತಮವಾಗಿ ನಡೆಯಬಲ್ಲವು. ಅಮುಲ್‌ಗೆ ನಂದಿನಿ ಉತ್ತಮ ಪ್ರತಿಸ್ಪರ್ಧಿಯಾಗಬಹುದೇ ವಿನಾ, ಅಂಗಸಂಸ್ಥೆಯಲ್ಲ ಎಂದು ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಎಂಎಫ್ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯಾದ್ಯಂತ ಅಸ್ತಿತ್ವ ಹೊಂದಿದೆ. ಕರ್ನಾಟಕದ ಹಳ್ಳಿಗಳಲ್ಲಿ ಪ್ರಾಥಮಿಕ ಹಂತದ ಡೈರಿಗಳನ್ನು ಸ್ಥಾಪಿಸಲು ಕೆಎಂಎಫ್‌ಗೆ ಮಾತ್ರ ಸಾಧ್ಯ ಎಂದು ನಾನು ಭಾವಿಸುತ್ತೇನೆ. ಅಮುಲ್ ಅನ್ನು ಇಲ್ಲಿಗೆ ತಂದರೆ ಅದ್ಯಾವ ಉದ್ದೇಶಗಳನ್ನು ಈಡೇರಿಸಿದಂತೆ ಆಗುತ್ತದೆ? ಕೆಎಂಎಫ್‌ನ ಸ್ವಾಯತ್ತತೆಗೆ ಧಕ್ಕೆಯಾಗಬಾರದು. ನಂದಿನಿ, ಕೆಎಂಎಫ್‌ ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮುಲ್‌ ಜೊತೆ ವಿಲೀನ ಮಾಡಿದರೆ ಏನಾಗುತ್ತದೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, ಎಸ್‌ಬಿಐ ಜೊತೆ ಎಸ್‌ಬಿಎಂ ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ಟಿನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತದೆ ಅಷ್ಟೆ ಎಂದು ಬರಹಗಾರ, ಕನ್ನಡಪರ ಚಿಂತಕ ವಸಂತ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.

ದಯವಿಟ್ಟು ನಂದಿನಿ / ಕೆಎಂಎಪ್ ತಂಟೆಗೆ ಬರಬೇಡಿ. ಕೆಎಂಫ್ ಪ್ರತಿ ಹಳ್ಳಿಯಲ್ಲೂ ಇರುವುದು ನಿಮಗೆ ತಿಳಿದಿಲ್ಲವೆ. ಮತ್ತಿನ್ನೇನು ತಿಳಿದಿದೆ ನಿಮಗೆ. ಮೊದಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಗಳ ಹಳ್ಳಿಗಳಲ್ಲಿ ಉತ್ತಮ ಡೈರಿಗಳನ್ನು ಸ್ಥಾಪಿಸಿ. ನಂತರ ನಂದಿನಿ ಬಗ್ಗೆ ಮಾತನಾಡುವಿರಂತೆ. ನಂದಿನಿ ಮತ್ತು ಅಮುಲ್ ಅನ್ನು ರಿಲಯನ್ಸ್ ಆದಾನಿಗೆ ಮಾರಾಟ ಮಾಡುವ ಹುನ್ನಾರವೇ? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಾರವಾಗಿ ಟ್ವೀಟ್‌ ಮಾಡಿದೆ.

ಅಮುಲ್‌‌ ಅನ್ನು ಸ್ಥಾಪಿಸಿದ ಡಾ. ಕುರಿಯನ್‌ ಅವರನ್ನು ಹೊರದಬ್ಬಿದ ಗುಜರಾತಿಗಳು ಈಗ ‘ನಂದಿನಿ’ಯನ್ನು ಮಾರಾಟ ಮಾಡಲು ಬಂದಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಲಾವಣ್ಯ ಬಲ್ಲಾಳ್‌ ಟೀಕಿಸಿದ್ದಾರೆ.

ನಂದಿನಿ ಎಂಬುದು ಕೇವಲ ಬ್ರಾಂಡ್‌ ಅಲ್ಲ. ಅದು ಕರ್ನಾಟಕದ ಹೆಗ್ಗುರುತು. ಹಾಲು ಉತ್ಪಾದಕರ ಹೆಮ್ಮೆಯ ಸಂಸ್ಥೆ. ಅಮುಲ್ ಅನ್ನು ನಂದಿನಿಯೊಂದಿಗೆ ವಿಲೀನಗೊಳಿಸಿದರೆ ಬೆಳವಣಿಗೆಯಾಗುವುದಿಲ್ಲ. ಆದರೆ, ನಮ್ಮದೇ ಹೆಗ್ಗುರುತಿಗೆ ತೀವ್ರ ಧಕ್ಕೆಯಾಗಲಿದೆ. ನಮಗೀ ಪ್ರಸ್ತಾವ ಬೇಡ. ನಂದಿನಿಯಿಂದ ದೂರವಿರಿ ಎಂದು ಗುರು ಪ್ರಸಾದ್‌ ಎಂಬುವವರು ಹೇಳಿದ್ದಾರೆ.

ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮುಳುಗಿಸಿ ಆಯ್ತು ಈಗ ನಂದಿನಿಯನ್ನು ಮುಳುಗಿಸಲು ನೋಡುತ್ತಿದ್ದಾರೆ ಎಂದು ರವಿ ಕುಮಾರ್‌ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ನಂದಿನಿ ನಮ್ಮ ಹಳ್ಳಿಗಳಿಗೆ ತಲುಪಿದೆ. ಚೆನ್ನಾಗಿರುವ ಎಲ್ಲವೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುಚ್ಚು ಹಂಬಲ ಬಿಡಿ ಎಂದು ಮಹೇಶ್‌ ರುದ್ರಗೌಡ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.


ಅಮಿತ್‌ ಶಾ ಅವರೇ ನಿಮ್ಮ ಪ್ರಸ್ತಾವಕ್ಕೆ ಬದಲಾಗಿ ಹೀಗೆ ಮಾಡೋಣ. ಗುಜರಾತ್‌ನಲ್ಲಿ ನಂದಿನಿ ಬ್ರಾಂಡ್ ಡೈರಿಗಳನ್ನು ಸ್ಥಾಪಿಸೋಣ. ನಿಮ್ಮ ಅಮುಲ್ ಅನ್ನು ನಂದಿನಿಯೊಂದಿಗೆ ವಿಲೀನಗೊಳಿಸಿ. ನಂದಿನಿ ಕರ್ನಾಟಕದ ಹೆಮ್ಮೆಯ ಬ್ರಾಂಡ್. ಅದರ ತಂಟೆಗೆ ಬರಬೇಡಿ ದಯವಿಟ್ಟು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಥೆ ನಮಗೆಲ್ಲ ಚೆನ್ನಾಗಿ ಗೊತ್ತಿದೆ ಎಂದು ‘ಚಂದನವನ’ ಎಂಬ ಟ್ವಿಟರ್‌ ಖಾತೆಯಿಂದ ಪೋಸ್ಟ್‌ ಪ್ರಕಟಿಸಲಾಗಿದೆ.

ಕರ್ನಾಟಕ ಮೂಲದ ಬ್ಯಾಂಕುಗಳನ್ನು ನಾಶಪಡಿಸಿದ್ದಾಯ್ತು. ಈಗ ಕೆಎಂಎಫ್‌ ಮೇಲೆ ಕೇಂದ್ರ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಕರ್ನಾಟಕದ ರೈತರ ಪಾಲಿನ ಕಾಮದೇನುವಂತಿರುವ ಕೆಎಂಎಫ್‌ ವಿಲೀನದ ಹೆಸರಲ್ಲಿ ಮುಳುಗಿಸುವ ಬಿಜೆಪಿಯ ಹುನ್ನಾರವನ್ನು ತಡೆಯಲು ಕನ್ನಡಿಗರು ಸಜ್ಜಾಗಬೇಕಿದೆ. ಕರ್ನಾಟಕದ ಅಸ್ಮಿತೆ, ಅರ್ಥಿಕತೆಗಳೆಲ್ಲವನ್ನೂ ಅಪೋಷನ ಪಡೆಯುವುದೇ ಬಿಜೆಪಿ ಅಜೆಂಡಾ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಅಮುಲ್ 'ಟೇಸ್ಟ್‌ ಆಫ್‌ ಇಂಡಿಯಾ' ಇರಬಹುದು ಆದರೆ 'ನಂದಿನಿ' ನಮ್ಮ ಕರ್ನಾಟಕದ ಜೀವನಾಡಿ. ಈ ಸರ್ಕಾರ ಮುಂದುವರೆದರೆ ನಮ್ಮ ಬ್ರಾಂಡ್‌ ಇತಿಹಾಸಪುಟ ಸೇರುವ ಎಲ್ಲಾ ಲಕ್ಷಣ ಕಾಣುತ್ತಾ ಇದೆ. ವಾರ್ಷಿಕ ₹1.50 ಲಕ್ಷ ಕೋಟಿ ವಹಿವಾಟು ಮಾಡುವ ನಮ್ಮ ನಂದಿನಿಯನ್ನು ಎಲ್ಲಾ ಒಂದು ಅನ್ನೊ ಹೆಸರಲ್ಲಿ ಕನ್ನಡ, ಕರ್ನಾಟಕದ ಎಲ್ಲಾ ಗುರುತನ್ನು ಮುಚ್ಚಿಹಾಕೋದು ಎಂದು ರಾಜ್ಯಸಭಾ ಸಂಸದ ಜಿ.ಸಿ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ರೈತರಿಗೆ ನಂದಿನಿ ಎನ್ನುವುದು ಮರಳುಗಾಡಿನಲ್ಲಿ ಓಯಸಿಸ್ ಇರುವಂತೆ. ಇದನ್ನು ಅಮುಲ್ ಜೊತೆಗೆ ಸೇರಿಸುವುದು ಬೇಡ. ಹಾಗೆ ಮಾಡಿದರೆ ಮೈಸೂರು ಮಹಾರಾಜರು ಕಟ್ಟಿ ಬೆಳೆ‌ಸಿದ ಮೈಸೂರು ರೈಲ್ವೆಯನ್ನು ಇಂಡಿಯನ್ ರೈಲ್ವೆಗೆ ಸೇರಿಸಿ ಈಗ ಸಣ್ಣಪುಟ್ಟದಕ್ಕೂ ಪರದಾಡುವಂತೆ ಆಗಿರುವ ಹಾಗಾಗುತ್ತದೆ. #SaveNandini ಎಂದು ಶಿಕ್ಷಕ ಸಿ.ಎಸ್‌ ಲಕ್ಷ್ಮೀಶ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT