ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

‘ಸಾಲದ ಹೊರೆಯೇ ಸಾವಿಗೆ ಕಾರಣ’ ಎಂದ ಸಹೋದರ
Last Updated 23 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ನಿರ್ಮಾಪಕರೂ ಆಗಿದ್ದ ಹೋಟೆಲ್ ಉದ್ಯಮಿ ಕಪಾಲಿ ಮೋಹನ್ ಅವರು ಸೆಲ್ಫಿ ವಿಡಿಯೊ ಮಾಡಿಟ್ಟು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸುಪ್ರೀಂ ಹೋಟೆಲ್‌ ನಡೆಸುತ್ತಿದ್ದ ಮೋಹನ್, ಅದೇ ಹೋಟೆಲ್‌ನಲ್ಲಿರುವ ತಮ್ಮ ಕೊಠಡಿಯಲ್ಲೇ ನೇಣು ಹಾಕಿಕೊಂಡಿದ್ದಾರೆ’ ಎಂದು ಗಂಗಮ್ಮನಗುಡಿ ಠಾಣೆ ಪೊಲೀಸರು ಹೇಳಿದರು.

‘ಹೋಟೆಲ್ ಉದ್ಯಮ ಹಾಗೂ ಸಿನಿಮಾ ನಿರ್ಮಾಣಕ್ಕಾಗಿ ಮೋಹನ್ ಅವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ನಿಲ್ದಾಣಕ್ಕೆ ಬಸ್‌ಗಳು ಬರುತ್ತಿರಲಿಲ್ಲ. ಪ್ರಯಾಣಿಕರು ಇರುತ್ತಿರಲಿಲ್ಲ. ಇದರಿಂದ ಮೋಹನ್ ನಷ್ಟ ಅನುಭವಿಸಿ ನೊಂದಿದ್ದರು. ಅದೇ ಅವರ ಆತ್ಮಹತ್ಯೆಗೆ ಕಾರಣ ಎಂಬುದಾಗಿ ಸಹೋದರ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ‘ಮೋಹನ್ ಭಾನುವಾರ ರಾತ್ರಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ಸೋಮವಾರ ಬೆಳಿಗ್ಗೆ 10ರ ಸುಮಾರಿಗೆ ಕೊಠಡಿಹೋಟೆಲ್‌ಗೆ ಹೋಗಿದ್ದ ಸಿಬ್ಬಂದಿ ಬಾಗಿಲು ತೆರೆದಾಗಲೇ ವಿಷಯ ಗೊತ್ತಾಗಿದೆ’ ಎಂದರು.

‘ಸಾಲ ಮಾಡಿದ್ದ ಮೋಹನ್, ಅದನ್ನು ಮನ್ನಾ ಮಾಡುವಂತೆ ಕೆಲವರನ್ನು ಕೋರಿದ್ದರು. ಇದನ್ನೇ ಸೆಲ್ಫಿ ವಿಡಿಯೊ ಮಾಡಿಟ್ಟಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಕ್ವಾಡಿ ಗ್ರಾಮದ ಮೋಹನ್ ಬೆಂಗಳೂರಿಗೆ ಬಂದು ಹೋಟೆಲ್ ಉದ್ಯಮ ಆರಂಭಿಸಿದ್ದರು. ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡು ನಟ ರಾಜ್‌ಕುಮಾರ್ ಹಾಗೂ ಕುಟುಂಬದವರೊಂದಿಗೆ ಒಡನಾಟ ಹೊಂದಿದ್ದರು.

ಕ್ಲಬ್‌, ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ: ಮಹಾಲಕ್ಷ್ಮಿ ಲೇಔಟ್‌ ಬಳಿ ಆರ್‌.ಜಿ.ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ ನಡೆಸುತ್ತಿದ್ದ ಮೋಹನ್, ಅಲ್ಲಿಯೇ ಜೂಜಾಟ ಆಡಿಸುತ್ತಿದ್ದರೆಂಬ ಆರೋಪ ಕೇಳಿಬಂದಿತ್ತು. ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಬಳಿಕ, ಮೋಹನ್ ತಲೆಮರೆಸಿಕೊಂಡಿದ್ದರು.

ಸದಾಶಿವನಗರದ ಎಲ್‌ಪಿಓ ರಸ್ತೆ ಹಾಗೂ ರಾಜ್‌ಮಹಲ್ ಗುಟ್ಟಹಳ್ಳಿ ಮನೆ ಮತ್ತು ಪಿ.ಜಿ.ಹಳ್ಳಿಯ ವಿನಾಯಕ್ ವೃತ್ತದಲ್ಲಿರುವ ‘ಬಾಲಾಜಿ ಫೈನಾನ್ಸ್‌’ ಕಚೇರಿ ಮೇಲೂ ದಾಳಿ ಮಾಡಿದ್ದರು. ಬಳಿಕವೇ ಮೋಹನ್ ಸಿಸಿಬಿ ಎದುರು ಸ್ವಯಂಪ್ರೇರಿತವಾಗಿ ಶರಣಾಗಿದ್ದರು.

ಸೆಲ್ಫಿ ವಿಡಿಯೊದಲ್ಲಿ ಏನಿದೆ?

’ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಹೋಟೆಲ್ ನಡೆಸುವ ಟೆಂಡರ್ ತೆಗೆದುಕೊಂಡಿದ್ದೆ. 7 ವರ್ಷದಿಂದಲೂ ಇಲ್ಲಿ ಬಸ್‌ ಬರುತ್ತಿಲ್ಲ. ಇದರಿಂದಾಗಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೇನೆ. ಮನೆ–ಮಠವನ್ನೂ ಮಾರಿಕೊಂಡಿದ್ದೇನೆ.ಬೆಂಗಳೂರಿನಲ್ಲಿ ಬದುಕಲು ದಾರಿಯೇ ಇಲ್ಲದಂತಾಗಿದೆ’ ಎಂದು ಮೋಹನ್ ಹೇಳಿದ್ದಾರೆ.

‘ಏಳು ತಿಂಗಳಿನಿಂದ ಹೋಟೆಲ್ ಬಾಡಿಗೆ ಕಟ್ಟಿಲ್ಲ. ಅದನ್ನು ಮನ್ನಾ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಎಲ್ಲ ಅಧಿಕಾರಿಗಳನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

₹30 ಕೋಟಿ ಸಾಲ

‘ಮೋಹನ್ ಅವರು ಬ್ಯಾಂಕ್ ಸೇರಿ ಹಲವೆಡೆ ₹30 ಕೋಟಿ ಸಾಲ ಮಾಡಿದ್ದರು ಎಂಬುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಾಲ ಕಟ್ಟದಿದ್ದಕ್ಕೆ ಹೋಟೆಲ್ ಜಪ್ತಿ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಎಚ್ಚರಿಸಿದ್ದರು. ಮಗಳ ಮದುವೆ ಕೆಲ ವಾರಗಳು ಬಾಕಿ ಇರುವಾಗಲೇ ಸಿಸಿಬಿ ಪೊಲೀಸರು ಸಹ ದಾಳಿ ಮಾಡಿದ್ದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT