ಬೆಂಗಳೂರು: ‘ಕೆರೆಗಳಲ್ಲಿ ಮೀನುಗಾರಿಕೆ ಮಾಡಿ, ಮೀನು ಫಸಲನ್ನು ಹರಾಜು ಹಾಕಿ ಅದರಿಂದ ಬರುವ ಆದಾಯದಿಂದ ವಿದ್ಯುತ್ ಶುಲ್ಕ ಪಾವತಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಏತ ನೀರಾವರಿಗಳಿಗೆ ಸಂಬಂಧಿಸಿದಂತೆ ವಿವಿಧ ಎಸ್ಕಾಂಗಳಿಗೆ ಜಲಸಂಪನ್ಮೂಲ ಇಲಾಖೆಯಿಂದ ವಿದ್ಯುತ್ ಶುಲ್ಕ ಪಾವತಿ ಆಗಿಲ್ಲ. ಸುಮಾರು ₹4,000 ಕೋಟಿಗೂ ಹೆಚ್ಚು ಮೊತ್ತ ಇಂಧನ ಇಲಾಖೆಗೆ ಪಾವತಿ ಮಾಡಬೇಕಾಗಿದೆ ಎಂದು ಅವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸುರೇಶ್‌ಗೌಡರ ಪ್ರಶ್ನೆಗೆ ಉತ್ತರಿಸಿದರು.
‘ಹಿಂದೆಲ್ಲ ನೀರಾವರಿ ಸಹಕಾರಿ ಸಂಘಗಳು ಇದ್ದವು, ಅವು ಶುಲ್ಕ ಪಾವತಿ ಮಾಡುತ್ತಿದ್ದವು. ಈಗ ಏನೂ ಇಲ್ಲ. ಯಾರೂ ಕಟ್ಟೋದಿಲ್ಲ. ನಾವೂ ಹಣ ನೀಡದೇ ಇದ್ದರೆ ಇಂಧನ ಇಲಾಖೆಯವರು ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾ? ಎಷ್ಟು ದಿನ ಅಂತ ಪಾವತಿ ಮಾಡದೇ ಇರಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಯಾರಾದರೂ ಸರಿ ವಿದ್ಯುತ್ ಶುಲ್ಕ ಪಾವತಿ ಮಾಡಲೇಬೇಕಲ್ಲ. ಅದಕ್ಕಾಗಿ ಕೆರೆಗಳಲ್ಲಿ ಮೀನುಗಾರಿಕೆ ಮಾಡಿಸಿ, ಮೀನುಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ವಿದ್ಯುತ್ ಶುಲ್ಕ ಪಾವತಿಗೆ ಬಳಸಲಾಗುವುದು. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಿವಕುಮಾರ್ ಹೇಳಿದರು.
ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಸಂದರ್ಭದಲ್ಲಿ ಒಂದೆರಡು ವರ್ಷ ಬಿಲ್ ಪಾವತಿ ಜವಾಬ್ದಾರಿ ತೆಗೆದುಕೊಳ್ಳಬಹುದು, ನಿರಂತರವಾಗಿ ಹೊರೆ ಹೊತ್ತುಕೊಳ್ಳುವುದು ಕಷ್ಟ. ಕೆರೆ ತುಂಬಿಸುವುದರಿಂದ ಇಲಾಖೆಗೆ ಆದಾಯ ಬರುತ್ತಿಲ್ಲ ಎಂದು ತಿಳಿಸಿದರು.
ಈ ವಿಚಾರವಾಗಿ ಮೀನುಗಾರಿಕೆ ಇಲಾಖೆ ಮತ್ತು ಇಂಧನ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಮಾದರಿಯಲ್ಲಿ ಎಲ್ಲ ಏತ ನೀರಾವರಿಗಳಿಗೂ ಉಚಿತ ವಿದ್ಯುತ್ ಪೂರೈಕೆ ಮಾಡಿ ಎಂದು ಬಿಜೆಪಿ ಸದಸ್ಯರು ಶಿವಕುಮಾರ್ ಕಾಲೆಳೆದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಏತ ನೀರಾವರಿ ಮತ್ತು ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ಸೌರ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. 15–20 ಮೆಗಾ ವ್ಯಾಟ್ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಅವುಗಳನ್ನು ಫೀಡರ್‌ಗೆ ಸಂಪರ್ಕ ಕಲ್ಪಿಸುವ ಮೂಲಕ ವಿದ್ಯುತ್ ಹೊರೆ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ಒಂದು ನೀತಿ ರೂಪಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.