ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು, ಅಜ್ಜಯ್ಯ, ಹಿಂದುತ್ವ, ಅಲ್ಲಾ, ಡಿಕೆಶಿ: ಶಾಸಕರ ಪ್ರಮಾಣ ವಚನದ ಕೌತುಕ

Published 22 ಮೇ 2023, 12:28 IST
Last Updated 22 ಮೇ 2023, 12:28 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನ ಮತ್ತು ದೇವರ ಹೆಸರಲ್ಲಿ ಮಾತ್ರ ಪ್ರಮಾಣ ಸ್ವೀಕರಿಸಬಹುದು. ಇತರ ಯಾವುದೇ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ ಕಾನೂನು ಬದ್ಧ ಆಗುವುದಿಲ್ಲ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಸೂಚನೆ ನೀಡಿದ್ದರೂ, ಕೆಲವು ಶಾಸಕರು ಅದನ್ನು ಪಾಲಿಸಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಗವಂತ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಸಿದ್ದರಾಮಯ್ಯ ಪ್ರಮಾಣ ಓದಿದ ಮೇಲೆ ಎಲ್ಲಿ ಸಹಿ ಹಾಕಬೇಕು ಎಂದರು. ಸಭಾಧ್ಯಕ್ಷರ ಪೀಠವನ್ನು ಬಳಸಿ ಬಂದು ಸಹಿ ಪುಸ್ತಕದಲ್ಲಿ ಸಹಿ ಹಾಕಿ ಎಂದು ಕಾರ್ಯದರ್ಶಿ ಹೇಳಿದರು. ಪೀಠ ಬಳಸಿ ಬರುವಾಗ ಅಲ್ಲಿ ನಿಂತಿದ್ದ ಮಾರ್ಷಲ್‌ ಬಳಿ ಎಲ್ಲಿ ಸಹಿ ಎಲ್ಲಿ ಹಾಕಬೇಕು ಎಂದು ಮತ್ತೆ ಪ್ರಶ್ನಿಸಿದರು.

ಕಾಂಗ್ರೆಸ್‌ನ ಶಿವಾನಂದ ಪಾಟೀಲ ಅಣ್ಣ ಬಸವಣ್ಣ ಹೆಸರಲ್ಲಿ, ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವ ಮತ್ತು ಗೋಮಾತೆ ಹೆಸರಲ್ಲಿ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಭಗವಂತನ ಹೆಸರಲ್ಲಿ ಆರಾಧ್ಯದೈವ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.

ಬಿಜೆಪಿ ಭಾಗೀರಥಿ ಮುರುಳ್ಯ ತಮ್ಮ ಕುಲದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವಾಗ, ಬಸವರಾಜ ರಾಯರೆಡ್ಡಿ, ‘ಹೀಗೆ ವಿವಿಧ ದೇವರುಗಳ ಹೆಸರು ಹೇಳುವುದು ಸರಿಯಲ್ಲ. ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಿ’ ಎಂದರು. ಅದಕ್ಕೆ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪಿಸಿದರು. ಈ ರೀತಿ ಹೆಸರು ಹೇಳುವುದನ್ನು ಯಾರು ಆರಂಭಿಸಿದರು ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಅವರನ್ನು ಕುಟುಕಿದರು.

ಗಾಲಿ ಜನಾರ್ದನ ರೆಡ್ಡಿ, ಗಂಗಾವತಿ ಜನತೆ, ಆಂಜನಾದ್ರಿ, ಹನುಮಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಕಾಂಗ್ರೆಸ್‌ ಖಲೀಜ್ ಫಾತೀಮಾ ಅಲ್ಲಾನ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT