ನವದೆಹಲಿ: ಕರ್ನಾಟಕದಲ್ಲಿ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಲು ₹17,901.73 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಬುಧವಾರ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ₹17,901.73 ಕೋಟಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದರು.
ಈ ವರ್ಷ ರಾಜ್ಯದಲ್ಲಿ ಬರ ತೀವ್ರವಾಗಿದೆ. ಜೂನ್‌ನಲ್ಲಿ ಶೇ 56 ಮಳೆ ಕೊರತೆ ಆಗಿತ್ತು. ಜುಲೈನಲ್ಲಿ ಶೇ 29, ಆಗಸ್ಟ್‌ನಲ್ಲಿ ಶೇ 73, ಸೆಪ್ಟೆಂಬರ್‌ನಲ್ಲಿ ಶೇ 26 ಮಳೆ ಕೊರತೆ ಉಂಟಾಗಿತ್ತು. ಅಕ್ಟೋಬರ್‌ನಲ್ಲಿ ಈವರೆಗೆ ಶೇ 63ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಖಾರಿಫ್ ಹಂಗಾಮಿನಲ್ಲಿ 45.55 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಿಂದ ₹33,710 ಕೋಟಿ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇದುವರೆಗೆ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ಉಪಸಮಿತಿಯ ಸಭೆ ನಡೆಸಿ ಇನ್ನಷ್ಟು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗುವುದು ಎಂದು ಅವರು ತಿಳಿಸಿದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ, ಬರದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಇಬ್ಬರಿಗೆ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಅವಕಾಶ ಇದೆ. ರಾಜ್ಯ ಸರ್ಕಾರವು ಕುಟುಂಬದ ಒಬ್ಬ ವ್ಯಕ್ತಿಗೆ 90 ದಿನಗಳ ಮಟ್ಟಿಗೆ ಪರಿಹಾರ ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ₹12,577 ಕೋಟಿ ಪರಿಹಾರ ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಜೀವನೋಪಾಯಕ್ಕಾಗಿ ಪರಿಹಾರ ಕೋರಿಕೆಯ ಪ್ರಸ್ತಾವ ಸಲ್ಲಿಸಿದೆ ಎಂದು ಅವರು ಹೇಳಿದರು.
ಪರಿಹಾರ ಮಂಜೂರು ಮಾಡುವ ಸಂದರ್ಭದಲ್ಲಿ ರಾಜ್ಯದ ಜನಸಂಖ್ಯೆಯ ಶೇಕಡಾ 70 ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಇತ್ತೀಚಿನ ಸಂಖ್ಯೆಯನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಚಲುವರಾಯಸ್ವಾಮಿ ಮಾತನಾಡಿ, ‘ಕೇಂದ್ರದ ಫಸಲ್ ಬೀಮಾ ಯೋಜನೆಯ ಮಾರ್ಗಸೂಚಿಯ ಬಗ್ಗೆ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬೇಕಿದೆ. ಈ ಸಂಬಂಧ ರಾಜ್ಯದ ನಿಲುವನ್ನು ಕೇಂದ್ರಕ್ಕೆ ವಾರದಲ್ಲಿ ತಿಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.