ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹಗರಣ | ಸುಧಾಕರ್ ಮೈಮೇಲೆ ಚೇಳು ಬಿದ್ದಂತೆ ಆಡುತ್ತಿರುವುದೇಕೆ: ಕಾಂಗ್ರೆಸ್

Published 29 ಆಗಸ್ಟ್ 2023, 8:01 IST
Last Updated 29 ಆಗಸ್ಟ್ 2023, 8:01 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿವಾರಣೆ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ವಹಿಸಿದರೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಭಯವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ನಾನು ಯಾವ ತಪ್ಪನ್ನೂ ಮಾಡಿಲ್ಲ. ಯಾವ ತನಿಖೆಗೂ ಹೆದರುವುದಿಲ್ಲ. ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂಬ ಮಾಜಿ ಸಚಿವ ಸುಧಾಕರ್‌ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕೋವಿಡ್‌ ಹಗರಣದ ತನಿಖೆ ಕುರಿತು ಸುಧಾಕರ್ ಅವರು ಮೈಮೇಲೆ ಚೇಳು ಬಿದ್ದಂತೆ ಹೌಹಾರುತ್ತಿರುವುದೇಕೆ? ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ಕುಂಬಳಕಾಯಿಯ ಕಳ್ಳರು ಇವರೇ ಎಂದರ್ಥವಲ್ಲವೇ’ ಎಂದು ತಿರುಗೇಟು ಕೊಟ್ಟಿದೆ.

‘ಸುಧಾಕರ್ ಅವರೇ, ಕೋವಿಡ್‌ ಹಗರಣವೊಂದನ್ನು ತನಿಖೆಗೆ ವಹಿಸುವುದು ದ್ವೇಷ ರಾಜಕಾರಣ ಹೇಗಾಗುತ್ತದೆ?, ಹಗರಣದ ಕಡೆ ನಾವು ಬೆರಳು ತೋರಿಸಿದಾಗ ಸಾಕ್ಷಿ ಎಲ್ಲಿದೆ, ತನಿಖೆಯಾಗಲಿ ಎನ್ನುವ ಬಿಜೆಪಿಗರು ತನಿಖೆಗೆ ವಹಿಸಿದಾಕ್ಷಣ ದ್ವೇಷ ರಾಜಕಾರಣ ಎಂದು ಚೀರಾಡುತ್ತಾರೆ! ಬಿಜೆಪಿಗರು ಸತ್ಯ ಹರೀಶ್ಚಂದ್ರನ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಕುನ್ಹಾ ಆಯೋಗ ರಚನೆ

ಕೋವಿಡ್‌ ನಿವಾರಣೆ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೋವಿಡ್‌ ನಿರ್ವಹಣೆಗಾಗಿ ಔಷಧಿ ಹಾಗೂ ಉಪಕರಣಗಳ ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ನೀಡಿರುವ ವರದಿಯಲ್ಲಿ ಆರೋಪಗಳ ಬಗ್ಗೆ ವಿವರಿಸಲಾಗಿದೆ. ಹೀಗಾಗಿ, ಪ್ರಕರಣದ ತನಿಖೆಗೆ ಆಯೋಗ ರಚಿಸಲಾಗಿದೆ ಎಂದು ಆದೇಶ ಹೇಳಿದೆ.

ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಸೌಲಭ್ಯವನ್ನು ಆರೋಗ್ಯ ಇಲಾಖೆ ಒದಗಿಸಬೇಕು ಎಂದೂ ತಿಳಿಸಲಾಗಿದೆ.

ಸುಧಾಕರ್ ಹೇಳಿದ್ದೇನು?

ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ನೇತೃತ್ವದಲ್ಲಿ ಆಯೋಗ ನೇಮಿಸಿರುವ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ‘ನಾನು ಒತ್ತಡಗಳಿಗೆ ಮಣಿಯುವ ಅವಶ್ಯಕತೆಯೇ ಇಲ್ಲ’ ಎಂದಿದ್ದಾರೆ.

‘ಕೋವಿಡ್‌ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ನರ್ಸ್‌ಗಳೂ ಆಗ ಮೃತಪಟ್ಟಿದ್ದಾರೆ. ಅಂತಹ ಪ್ರಕರಣಗಳಲ್ಲಿ ನನ್ನನ್ನು ಹೊಣೆ ಮಾಡಲಾಗುತ್ತದೆಯೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT