ಬೆಂಗಳೂರು: ಸರ್ಕಾರ, ಸರ್ಕಾರಿ ಸಂಸ್ಥೆಗಳು, ಸರ್ಕಾರದ ಕಾರ್ಯಕ್ರಮಗಳ ವಿರುದ್ಧ ಮತ್ತು ಕೋಮು ಸೌಹಾರ್ದ ಕದಡುವ ಉದ್ದೇಶದ ಸುಳ್ಳು ಸುದ್ದಿಗಳು, ಅಪಪ್ರಚಾರ ಮಾಡುವ ಸುದ್ದಿಗಳು ಹಾಗೂ ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕುವ ಹಾಗೂ ಈಗಿರುವ ಕಾನೂನು ಬಳಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಕುರಿತು ‘ಫ್ಯಾಕ್ಟ್‌ಚೆಕ್’ ಮಾಡಲು ಮತ್ತು ಸುಳ್ಳು ಸುದ್ದಿ ಹಾಗೂ ಮಾಹಿತಿ ಹರಡುವವರ ಮೇಲೆ ನಿಗಾ ಇಟ್ಟು, ಅಂತಹ ಮಾಹಿತಿಗಳು ಸುಳ್ಳು ಎಂದು ಸಾರ್ವಜನಿಕರಿಗೆ ತಿಳಿಸಲು ಸರ್ಕಾರದಿಂದಲೇ ವ್ಯವಸ್ಥೆಯನ್ನು ರೂಪಿಸಲಾಗುವುದು. ಇದರ ಚೌಕಟ್ಟಿಗೆ (ಫ್ರೇಮ್‌ವರ್ಕ್) ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದು, ಆದಷ್ಟು ಶೀಘ್ರವೇ ಜಾರಿ ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಕೆಲವು ಪಕ್ಷಗಳು ಮತ್ತು ಸಂಘಟನೆಗಳಿಗೆ ಸೇರಿದವರು ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳನ್ನು ಸಮಾಜದಲ್ಲಿ ಇತ್ತೀಚೆಗೆ ಹರಡುತ್ತಿದ್ದಾರೆ. ಇದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಸತ್ಯವನ್ನು ತಿರುಚಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಶಕ್ತಿ ಯೋಜನೆಯೂ ಸೇರಿ ಸರ್ಕಾರದ ಹಲವು ಕಾರ್ಯಕ್ರಮಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚಲಾಯಿತು. ಸುಳ್ಳುಸುದ್ದಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಿದೆ. ಸರಿಯಾದ ಮಾಹಿತಿ ಯಾವುದು, ತಪ್ಪು ಮಾಹಿತಿ ಯಾವುದು ಎಂಬುದನ್ನು ಜನರಿಗೆ ತಿಳಿಸುವ ಜವಾಬ್ದಾರಿಯೂ ಸರ್ಕಾರಕ್ಕಿದೆ ಎಂದು ತಿಳಿಸಿದರು.
ಇದಕ್ಕಾಗಿ ಹೊಸ ಕಾನೂನು ಜಾರಿ ಮಾಡುವುದಿಲ್ಲ, ಕಾಯ್ದೆಗೆ ತಿದ್ದುಪಡಿ ಮಾಡುವುದೂ ಇಲ್ಲ. ಈಗಿರುವ ಕಾನೂನಿನ ಚೌಕಟ್ಟಿನಡಿಯೇ ಪರಿಣಾಮಕಾರಿಯಾಗಿ ನಿಭಾಯಿಸಲು ತೀರ್ಮಾನಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000, 2008, ಭಾರತೀಯ ದಂಡ ಸಂಹಿತೆ, ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಮಾಧ್ಯಮಗಳಿಗೆ ಆತಂಕ ಬೇಡ: ‘ನಾವು ಸುಳ್ಳುಸುದ್ದಿಗಳನ್ನು ನಿಯಂತ್ರಿಸುತ್ತೇವೆ. ಆದರೆ, ವಾಕ್‌ಸ್ವಾತಂತ್ರ್ಯವನ್ನು ಹತ್ತಿಕ್ಕುವುದಿಲ್ಲ. ವಾಕ್‌ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ ಎಂಬ ಆತಂಕ ಬೇಡ. ಭಾರತ ಪ್ರಜಾಪ್ರಭುತ್ವ ಹೊಂದಿರುವ ದೇಶ, ಸರ್ಕಾರಗಳ ಆಯ್ಕೆ ಚುನಾವಣೆಗಳ ಮೂಲಕ ಆಗುತ್ತವೆ. ಇದಕ್ಕೆ ಸಾರ್ವಜನಿಕರ ಆಶೀರ್ವಾದ ಬೇಕು. ನಮ್ಮ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇದ್ದರೆ ಜನರ ಆಶೀರ್ವಾದವೂ ಸಿಗುತ್ತದೆ. ಉತ್ತಮ, ಜನಸ್ನೇಹಿ ಕೆಲಸಗಳ ಬಗ್ಗೆ ಅರಿವು ಮೂಡಿಸಿದರೆ ಜನ ಮತ ಹಾಕುತ್ತಾರೆ. ಕಾರ್ಯಕ್ರಮಗಳು ಒಳ್ಳೆಯದೋ, ಕೆಟ್ಟದೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ’ ಎಂದು ಪ್ರಿಯಾಂಕ್ ಹೇಳಿದರು.
ಸುಪ್ರೀಂಕೋರ್ಟ್, ಚುನಾವಣಾ ಆಯೋಗ ಕೂಡ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿವೆ. ಪ್ರಧಾನಿಯವರೂ ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲೇ ಚೌಕಟ್ಟು ರೂಪಿಸಲಾಗಿದೆ. ರಾಜಕೀಯ ದ್ವೇಷವೂ ಇಲ್ಲ, ಮಾಧ್ಯಮಗಳ ಧ್ವನಿ ಅಡಗಿಸುವುದೂ ಇಲ್ಲ ಮತ್ತು ಪೂರ್ವಗ್ರಹಗಳಿಲ್ಲದೇ ಕಾರ್ಯ ನಿರ್ವಹಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಂದ ತಪ್ಪು ಮಾಹಿತಿಗಳು ಬಂದರೆ, ಅವರ ಗಮನಕ್ಕೂ ತರಲಾಗುವುದು ಎಂದೂ ಹೇಳಿದರು.
‘ಫ್ಯಾಕ್ಟ್ ಚೆಕ್’ ವ್ಯವಸ್ಥೆ ಹೇಗಿರುತ್ತದೆ?
ಫ್ಯಾಕ್ಟ್ ಚೆಕ್‌ಗೆ ಮೇಲ್ವಿಚಾರಣೆ ಸಮಿತಿಯನ್ನು ರಚಿಸಲಾಗುತ್ತದೆ. ಅದರಡಿ ಫ್ಯಾಕ್ಟ್ ಚೆಕ್ ತಂಡ ವಿಶ್ಲೇಷಣಾ (ಅನಾಲಿಟಿಕ್ಸ್) ತಂಡ ಮತ್ತು ಸಾಮರ್ಥ್ಯ ವೃದ್ಧಿ (ಕೆಪಾಸಿಟಿ ಬಿಲ್ಡಿಂಗ್) ತಂಡಗಳು ಇರುತ್ತವೆ.
* ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿ ಸುದ್ದಿಗಳ ಸತ್ಯಾಸತ್ಯತೆಯನ್ನು ತಂಡ ಪರಿಶೀಲನೆ ನಡೆಸಲಿದೆ. ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡುತ್ತದೆ.
*ವಿಶ್ಲೇಷಣಾ ತಂಡವು ಸುಳ್ಳು ಸುದ್ದಿ ಸೃಷ್ಟಿಸಿ ಪ್ರಸಾರ ಮಾಡುವ ವ್ಯವಸ್ಥೆಯ ಮೇಲೆ ನಿರಂತರ ನಿಗಾ ಇಡುತ್ತದೆ. ಸುಳ್ಳು ಸುದ್ದಿ ಪ್ರಸಾರ ಮಾಡುವುದಕ್ಕೂ ಮೊದಲೇ ಗೋಪ್ಯ ಮಾಹಿತಿಯನ್ನು ರವಾನೆ ಮಾಡುತ್ತದೆ.
* ಸಾಮರ್ಥ್ಯ ವೃದ್ಧಿ ತಂಡವು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಸುಳ್ಳು ಮಾಹಿತಿಗಳ ಹರಿವನ್ನು ತಡೆಯಲು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.
ಮೇಲ್ವಿಚಾರಣಾ ಸಮಿತಿ ಯಾರಿರುತ್ತಾರೆ?
* ಐಟಿ ಬಿಟಿ ಇಲಾಖೆ ಮುಖ್ಯಸ್ಥರು
*ಗುಪ್ತಚರ ಮತ್ತು ಸಿಐಡಿ ವಿಭಾಗಗಳ ಎಡಿಜಿಪಿಗಳು
*ವಾರ್ತಾ ಇಲಾಖೆ ಅಧಿಕಾರಿಗಳು *ಐಐಎಸ್‌ಸಿ ಇಇಸಿಎಸ್ ವಿಭಾಗದ ಡೀನ್
*ಕರ್ನಾಟಕ ಇನ್ನೊವೇಷನ್ ಟೆಕ್ನಾಲಜಿ ಸೊಸೈಟಿಯ ಎಂಡಿ
* ಹೆಚ್ಚುವರಿ ಅಡ್ವೊಕೇಟ್ ಜನರಲ್
*ಸಾರ್ವಜನಿಕ ಪ್ರತಿನಿಧಿಗಳು
*ಗುಪ್ತಚರ ವಿಭಾಗದ ಎಸ್‌ಪಿ
ಹಗರಣಗಳ ಬಗ್ಗೆ ಬರೆಯಿರಿ ಆದರೆ...!
ಸರ್ಕಾರದ ಹಗರಣಗಳ ಬಗ್ಗೆ ಮಾಧ್ಯಮಗಳು ಬರೆಯುವುದಕ್ಕೆ ಅಡ್ಡಿ ಇಲ್ಲ. ಆದರೆ ವರದಿಗಳಲ್ಲಿ ಬರುವ ಮಾಹಿತಿ ಸತ್ಯವೋ ಸುಳ್ಳೊ ಎಂಬುದನ್ನು ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರ ಮಾಹಿತಿ ನೀಡುತ್ತದೆ. ಮಂತ್ರಿಗಳು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರೆ ಅವರು ವೈಯಕ್ತಿಕ ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸ್ವತಂತ್ರರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮಾಧ್ಯಮಗಳಿಗೆ ಆತಂಕ ಇದ್ದರೆ ಮಾಧ್ಯಮಗಳ ಒಬ್ಬ ಪ್ರತಿನಿಧಿಯನ್ನು ಮೇಲ್ವಿಚಾರಣಾ ಸಮಿತಿಗೆ ಸೇರಿಸಲೂ ಅವಕಾಶವಿದೆ ಎಂದರು.
ಅವರ (ಬಿಜೆಪಿ) ಕೇಂದ್ರ ಕಚೇರಿಗಳಲ್ಲಿರುವ ಸುಳ್ಳು ಸುದ್ದಿಗಳ ಫ್ಯಾಕ್ಟರಿಗಳನ್ನು ಮುಚ್ಚಿದರೆ ಸಮಸ್ಯೆಗಳು ಮುಗಿಯುತ್ತವೆ. ಇದು ಪರಿಣಾಮಕಾರಿಯಾಗಿ ಜಾರಿಯಾದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ-ಪ್ರಿಯಾಂಕ್ ಖರ್ಗೆ, ಐಟಿ–ಬಿಟಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.