ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದಿಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

Last Updated 7 ಜನವರಿ 2022, 8:14 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಇನ್ನು ಯಾವತ್ತೂ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ʼಲಾಕ್‌ಡೌನ್‌ ಕಳೆದುಹೋಗಿರುವ ನೀತಿ. ಆರಂಭದ ಹಂತದಲ್ಲಿ ಕೋವಿಡ್‌ ಸೋಂಕು, ವೈರಾಣುವಿನ ಗುಣ ಮತ್ತು ಸ್ವಭಾವ, ಚಿಕಿತ್ಸಾ ವಿಧಾನ ಯಾವುದೂ ಗೊತ್ತಿರಲಿಲ್ಲ. ಆಗ ಅನುಭವದ ಕೊರತೆಯಿಂದ ಲಾಕ್‌ಡೌನ್‌ ಜಾರಿಗೊಳಿಸಿದ್ದೆವು. ಇನ್ನು ಹಾಗಾಗುವುದಿಲ್ಲʼ ಎಂದರು.

ಎರಡು ವರ್ಷಗಳ ಅನುಭವದಿಂದ ಕೋವಿಡ್‌ ನಿಯಂತ್ರಣ ಮತ್ತು ಚಿಕಿತ್ಸೆಯ ಕುರಿತು ಅರಿವು ಇದೆ. ಈಗ ಕೋವಿಡ್‌ ಹರಡುವುದನ್ನು ಲಾಕ್‌ಡೌನ್‌ ಜಾರಿಗೊಳಿಸುವುದರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆಯಿಂದ ಮಾತ್ರವೇ ಕೋವಿಡ್‌ ನಿಯಂತ್ರಣ ಸಾಧ್ಯ ಎಂದು ಹೇಳಿದರು.

ʼಓಮೈಕ್ರಾನ್‌ ತಳಿಯ ಕೊರೊನಾ ವೈರಾಣುವಿನ ಸೋಂಕು ಹರಡದಂತೆ ತಡೆಯುವುದು ಅಸಾಧ್ಯ. ಸಹಜವಾಗಿಯೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ, ಯಾವುದೇ ತೊಂದರೆ ಆಗುವುದಿಲ್ಲ. ಜನರು ಹೆಚ್ಚು ಮುನ್ನೆಚ್ಚರಿಕೆಯಿಂದ ಇರಬೇಕುʼ ಎಂದು ಸುಧಾಕರ್‌ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇ 3.95 ತಲುಪಿದೆ. ಈ ಪ್ರಮಾಣ ಇನ್ನಷ್ಟು ಏರಿಕೆಯಾಗಲಿದೆ. ಕೋವಿಡ್‌ ನಿಯಂತ್ರಣ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಲಸಿಕೆ ಪಡೆಯುವುದರಿಂದ ಮಾತ್ರ ಕೋವಿಡ್‌ನಿಂದ ರಕ್ಷಣೆ ಸಾಧ್ಯ. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಮತ್ತು ಸಾವಿನಿಂದಲೂ ಪಾರಾಗಬಹುದು. ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.

ಇಂದು ಸಭೆ: ಕೋವಿಡ್‌ ನಿಯಂತ್ರಣ ಮತ್ತು ಚಿಕಿತ್ಸಾ ವ್ಯವಸ್ಥೆ ಕುರಿತು ಚರ್ಚಿಸಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ಉನ್ನತ ಮಟ್ಟದ ಸಭೆ ನಡೆಯಲಿದೆ. ರಾಜ್ಯಮಟ್ಟದ ಕೋವಿಡ್‌ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT