ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದು: ಇಂಧನ ಸಚಿವ ಜಾರ್ಜ್‌

Published 5 ಸೆಪ್ಟೆಂಬರ್ 2023, 15:34 IST
Last Updated 5 ಸೆಪ್ಟೆಂಬರ್ 2023, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ನಗರದ ಮಲ್ಲೇಶ್ವರದಲ್ಲಿ ಮಂಗಳವಾರ ನೆಲದಡಿಯಲ್ಲಿನ ವಿದ್ಯುತ್‌ ಪರಿವರ್ತಕ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಲೋಡ್‌ಶೆಡ್ಡಿಂಗ್‌ ಪರಿಸ್ಥಿತಿ ಇಲ್ಲ. ಆದರೆ, ಬೇಸಿಗೆ ಸಂದರ್ಭದಲ್ಲಿ ಇರುವಷ್ಟು ವಿದ್ಯುತ್ ಬೇಡಿಕೆ ಈಗಾಗಲೇ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು’ ಎಂದು ಹೇಳಿದರು.

‘ಮಳೆಯಾಗದೆ, ವಿದ್ಯುತ್ ಕೊರತೆ ಮುಂದುವರಿದರೆ ಅಧಿಕೃತವಾಗಿ ಲೋಡ್‌ಶೆಡ್ಡಿಂಗ್ ಮಾಡಬೇಕಾಗುತ್ತದೆ. ಅಂತಹ ಸ್ಥಿತಿ ಸೃಷ್ಟಿಯಾಗದಂತೆ ಪ್ರಾರ್ಥಿಸುತ್ತೇನೆ. ವಿದ್ಯುತ್‌ ಉತ್ಪಾದನೆಯಲ್ಲಿ 17 ದಶಲಕ್ಷ ಯೂನಿಟ್‌ ಕಡಿಮೆಯಾಗಿತ್ತು. ಇಂತಹ ಸಂದರ್ಭದಲ್ಲಿ ಇದನ್ನು ನಮ್ಮ ಎಂಜಿನಿಯರ್‌ಗಳು ಸಮತೋಲನ ಮಾಡಬೇಕಾಗುತ್ತದೆ. ಆಗ ತಾತ್ಕಾಲಿಕವಾಗಿ ಕಡಿತಗೊಂಡಿರುತ್ತದೆ. ಕೆಲವು ಸಲ ನಿರ್ವಹಣೆ ಅಥವಾ ವಿದ್ಯುತ್‌ ಪರಿವರ್ತಕಗಳ ದುರಸ್ತಿಗೆ ವಿದ್ಯುತ್ ಕಡಿತವಾಗಿರುತ್ತದೆ. ಜನ ಅದನ್ನು ಲೋಡ್‌ಶೆಡ್ಡಿಂಗ್‌ ಎಂದು ಭಾವಿಸಿಕೊಂಡಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

‘ಹವಾಮಾನ ತಜ್ಞರ ಪ್ರಕಾರ ಮುಂದಿನ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ನಿತ್ಯ ₹40 ಕೋಟಿ ಮೊತ್ತದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇನ್ನಷ್ಟು ಖರೀದಿ ಕೂಡ ಕಷ್ಟವಾಗಲಿದೆ. ಯಾಕೆಂದರೆ, ದೇಶದಾದ್ಯಂತ ವಿದ್ಯುತ್‌ಗೆ ಬೇಡಿಕೆ ಇದೆ. ಈ ಮಧ್ಯೆ ಶಾಖೋತ್ಪನ್ನ ಘಟಕಗಳನ್ನು ಮತ್ತೆ ಆರಂಭಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT