ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಧೀಶ ಪ್ರಾಧ್ಯಾಪಕ; ಲೋಕಾಯುಕ್ತ ದಾಳಿ ವೇಳೆ ₹8.41 ಕೋಟಿ ಮೌಲ್ಯದ ಆಸ್ತಿ ಪತ್ತೆ

Published 6 ಡಿಸೆಂಬರ್ 2023, 3:03 IST
Last Updated 6 ಡಿಸೆಂಬರ್ 2023, 3:03 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನಂಜನಗೂಡಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹದೇವಸ್ವಾಮಿ ಅವರು ಕುಟುಂಬದವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ನಗರ ಪ್ರದೇಶದ 12 ಕಡೆ ಉದ್ಯಮ ವಿಸ್ತರಿಸಿರುವುದು ಲೋಕಾಯುಕ್ತ ಪೊಲೀಸರನ್ನು ಹುಬ್ಬೇರಿಸುವಂತೆ ಮಾಡಿದೆ.

ಮಹದೇವಸ್ವಾಮಿ ಅವರು ಮೈಸೂರಿನ ಜೆ.ಪಿ. ನಗರದ ಮಹದೇವ ಪುರದಲ್ಲಿ ಇರುವ ಗುರುಕುಲ ಬಡಾ ವಣೆಯ ಮನೆಯಲ್ಲಿ ವಾಸವಿದ್ದಾರೆ. ಅವರ ಬಳಿ ₹6.08 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹2.33 ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಪತ್ನಿ, ಕುಟುಂಬದವರ ಹೆಸರಲ್ಲಿ ಐದು ಕಡೆ ಸ್ಟೀಲ್ ಉತ್ಪನ್ನಗಳ ಅಂಗಡಿ
ನಡೆಸುತ್ತಿದ್ದಾರೆ. ‘ಎಂ.ಎಸ್‌. ಇನ್ಫಾಸ್ಟ್ರಕ್ಚರ್‌’ ಹೆಸರಲ್ಲಿ ನಂಜನಗೂಡಿನ ಹುಲ್ಲಹಳ್ಳಿ ರಸ್ತೆ, ಮೈಸೂರಿನ ವಿಜಯನಗರ, ಜೆ.ಪಿ. ನಗರ, ಕೆ.ಆರ್‌. ನಗರದಲ್ಲಿ ಹಾರ್ಡ್‌ವೇರ್‌ ಅಂಗಡಿ ನಡೆಸುತ್ತಿದ್ದು, ಮನೆ ನಿರ್ಮಾಣಕ್ಕೆ ಬೇಕಾಗುವ ಸ್ಟೀಲ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೆ.ಪಿ. ನಗರದಲ್ಲಿ ಬಟ್ಟೆ ಅಂಗಡಿಯನ್ನೂ ತೆರೆದಿದ್ದಾರೆ.

‘ಗುರುಕುಲ’ ಹೆಸರಿನಲ್ಲಿ ಟ್ರಸ್ಟ್‌ ಮೂಲಕ ಜೆ.ಪಿ. ನಗರದಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣ ನೀಡುವ ಗುರುಕುಲ ಅಕಾಡೆಮಿಯನ್ನೂ ನಡೆಸುತ್ತಿ ದ್ದಾರೆ. ಟ್ರಸ್ಟ್‌ನಲ್ಲಿ ಅವರ ಪತ್ನಿ, ಅಣ್ಣ, ತಮ್ಮಂದಿರಷ್ಟೇ ಇದ್ದಾರೆ. ವ್ಯವಹಾರಗಳನ್ನು ಮಹದೇವಸ್ವಾಮಿ ಅವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

2014ರಲ್ಲಿ ಗುರುಕುಲ ಬಡಾವಣೆ ಯಲ್ಲಿ ಶ್ರೀಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್‌ ಆ್ಯಂಡ್‌ ಹೌಸಿಂಗ್ ಡೆವಲಪರ್ಸ್‌ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ವಾಸ್ತುಶಿಲ್ಪ ವಿನ್ಯಾಸದ ಸಂಸ್ಥೆ ನಡೆಸುತ್ತಿದ್ದಾರೆ. ಜತೆಗೆ ರಿಯಲ್ ಎಸ್ಟೇಟ್‌ ವ್ಯವಹಾರವನ್ನೂ ನಡೆಸುತ್ತಿದ್ದರು ಎನ್ನಲಾಗಿದೆ. ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಮನೆ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಫಾರ್ಚುನರ್‌, ಹುಂಡೈ ವೆರ್ನಾ, ಹುಂಡೈ ಐ 10 ಕಾರು, ಆರು ಶಾಲಾ ಬಸ್‌, ಬಜಾಜ್‌ ಬೈಕ್‌ ವಾಹನಗಳು ಪತ್ತೆಯಾಗಿವೆ. ‘ನಂಜನಗೂಡು ಕಾಲೇಜಿನಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಪ್ರಾಧ್ಯಾಪಕರ ವರ್ಗಾವಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೋಟ್ಯಂತರ ಮೊತ್ತದ ಆಸ್ತಿ ಹೊರತಾಗಿಯೂ ಅವರ ಕುಟುಂಬದ ಆಪ್ತರು ಬಿಪಿಎಲ್‌ ಕಾರ್ಡ್‌ ಹೊಂದಿರುವಂತೆ ನೋಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿರುವ ಶ್ರೀಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್‌ ಅಂಡ್‌ ಹೌಸಿಂಗ್ ಡೆವಲಪರ್ಸ್‌ ಸಂಸ್ಥೆಯ ಕಟ್ಟಡ

ಮೈಸೂರಿನಲ್ಲಿರುವ ಶ್ರೀಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್‌ ಅಂಡ್‌ ಹೌಸಿಂಗ್ ಡೆವಲಪರ್ಸ್‌ ಸಂಸ್ಥೆಯ ಕಟ್ಟಡ

ನಗದು, ಬಂಗಾರ, ಬೆಳ್ಳಿ ಪತ್ತೆ

ಕಂಪ್ಲಿ: ಗಂಗಾವತಿ ತಾಲ್ಲೂಕು ಆನೆಗುಂದಿ ಉಪ ವಲಯ ಅರಣ್ಯಾಧಿಕಾರಿ ಬಿ. ಮಾರುತಿ ಅವರ ಇಲ್ಲಿಯ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿ ವೇಳೆ ₹2.50ಲಕ್ಷ ನಗದು, 250 ಗ್ರಾಂ ಬಂಗಾರದ ಆಭರಣ, 1.50 ಕೆ.ಜಿ. ಬೆಳ್ಳಿ ಆಭರಣ ಪತ್ತೆಯಾಗಿದೆ.

ಬಳ್ಳಾರಿ ಲೋಕಾಯುಕ್ತ ಎಸ್.ಪಿ. ಶಶಿಧರ ಅವರು, ‘ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಈ ವೇಳೆ ಕಂಪ್ಲಿ, ಸಿರುಗುಪ್ಪ ಸೇರಿ ವಿವಿಧೆಡೆ 15 ಎಕರೆ ಜಮೀನು, ಆರು ನಿವೇಶನಗಳ ದಾಖಲೆಗಳು, ಇನ್ನೋವಾ ಕಾರು ಪತ್ತೆಯಾಗಿವೆ’ ಎಂದು ವಿವರಿಸಿದರು.

ಎಂಜಿನಿಯರ್ ಶರಣಪ್ಪ ಅಮಾನತು:

ಇಲ್ಲಿನ ಪುರಸಭೆಯ ಪರಿಸರ ಎಂಜಿನಿಯರ್ ಶರಣಪ್ಪ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕೊಪ್ಪಳದ ಲೋಕಾಯುಕ್ತ ಪಿ.ಐ. ರಾಜೇಶ್ ನೇತೃತ್ವದಲ್ಲಿ ಪೊಲೀಸರು ಪುರಸಭೆ ಕಚೇರಿಗೆ ಭೇಟಿ ನೀಡಿದ್ದು, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.

ಶರಣಪ್ಪ ಹಿಂದೆ ಯಾದಗಿರಿ ನಗರಸಭೆ ಪೌರಾಯುಕ್ತರಾಗಿದ್ದಾಗ, ನಗರಸಭೆ ವ್ಯಾಪ್ತಿಯ ಸರ್ವೆ ನಂ. 391/1,2 ಸರ್ಕಾರಿ ಆಸ್ತಿಗೆ ಸಂಬಂಧಿಸಿ ನಕಲಿ ಖಾತೆ ಹಾಗೂ ಮ್ಯೂಟೇಷನ್ ಸೃಷ್ಟಿಸಿ ಖಾಸಗಿಯವರಿಗೆ ಮಾರಿರುವುದು ತನಿಖೆಯಿಂದ ದೃಢಪಟ್ಟಿದ್ದು, ಪೌರಾಡಳಿತ ನಿರ್ದೇಶನಾಲಯವು ಅಮಾನತು ಮಾಡಿ ಆದೇಶಿಸಿದೆ. ‘ಶರಣಪ್ಪ ಅವರನ್ನು ಸದ್ಯ ಮಾನ್ವಿ ಪುರಸಭೆಗೆ ಲೀನ್ ವರ್ಗಾವಣೆ ಮಾಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ಅವರು ತಿಳಿಸಿದರು.

ಭೂವಿಜ್ಞಾನಿ ಬಳಿ ಆರು ನಿವೇಶನ!

ಬಳ್ಳಾರಿ: ಬಳ್ಳಾರಿಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಚಂದ್ರಶೇಖರ್‌ ಹಿರೇಮನಿ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಚಂದ್ರಶೇಖರ್ ಹಿರೇಮನಿ ಬಳ್ಳಾರಿಯ ಶ್ರೀರಾಮನಗರದಲ್ಲಿ ಎರಡು ನಿವೇಶನ, ಹಗರಿಬೊಮ್ಮನಹಳ್ಳಿಯಲ್ಲಿ ಎರಡು ನಿವೇಶನ, ಕೊಪ್ಪಳದಲ್ಲಿ ಒಂದು ನಿವೇಶನ ಸೇರಿದಂತೆ ಆರು ನಿವೇಶನ ಹೊಂದಿದ್ದಾರೆ ಎಂದು ಲೋಕಾಯುಕ್ತ ಎಸ್‌.ಪಿ. ಶಶಿಧರ್‌ ಹೇಳಿದರು.

‘₹1.47 ಲಕ್ಷ ನಗದು, 110 ಗ್ರಾಂ ಚಿನ್ನ, 347 ಗ್ರಾಂ ಬೆಳ್ಳಿ ಆಭರಣ, ಒಂದು ಕಾರು, ಒಂದು ಬೈಕ್ ಪತ್ತೆಯಾಗಿದೆ. ಇನ್ನೊಂದು ಕಾರು ಇರುವ ಮಾಹಿತಿ ಇದೆ. ಅಲ್ಲದೆ, ಜಮೀನು ಹೊಂದಿರುವ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ’ ಎಂದರು.

ದಾಳಿಯಲ್ಲಿ ಚಿತ್ರದುರ್ಗದ ಲೋಕಾಯುಕ್ತ ಡಿಎಸ್‌ಪಿ ಮೃತ್ಯುಂಜಯ, ಬಳ್ಳಾರಿ ಲೋಕಾಯುಕ್ತ ಪಿಐ ಸಂಗಮೇಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT