ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಬೇರ ಅಧಿಕಾರಿಗಳಿಗೆ’ ಲೋಕಾ ಬಿಸಿ; ₹66 ಕೋಟಿ ಮೌಲ್ಯದ ಚರ, ಸ್ಥಿರಾಸ್ಥಿ ಪತ್ತೆ

ಅಂದಾಜು ₹66 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ಥಿ
Published 5 ಡಿಸೆಂಬರ್ 2023, 16:16 IST
Last Updated 5 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ರಾಜ್ಯದ 13 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 63 ಸ್ಥಳಗಳ ಮೇಲೆ ಏಕಕಾಲದಲ್ಲಿ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

‘ಕುಬೇರ ಅಧಿಕಾರಿಗಳ’ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು, ಬೀದರ್‌, ಕಲಬುರಗಿ, ಕೊಪ್ಪಳ, ಬಳ್ಳಾರಿ, ಧಾರವಾಡ, ಕೋಲಾರ, ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆಯೇ ಅಧಿಕಾರಿಗಳ ಮನೆ ಬಾಗಿಲು ಬಡಿದ ಪೊಲೀಸರು, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಇಡೀ ದಿನ ಶೋಧ ಕಾರ್ಯ ನಡೆಸಿದರು. ದಾಳಿ ವೇಳೆ ಅಂದಾಜು ₹66 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ಥಿ ಪತ್ತೆಯಾಗಿದೆ.

ಬೆಸ್ಕಾಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ, ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು.. ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕಂತೆ ಕಂತೆ ನಗದು, ಚಿನ್ನಾಭರಣ, ಬೆಲೆ ಬಾಳುವ ಪುರಾತನ ವಸ್ತುಗಳು, ವಜ್ರಾಭರಣ, ಬೆಳ್ಳಿ ಸಾಮಗ್ರಿ, ಆಸ್ತಿ ಖರೀದಿ ಪತ್ರಗಳು ಪತ್ತೆಯಾಗಿವೆ. ಬೇರೆ ಬೇರೆ ಸ್ಥಳಗಳಲ್ಲಿರುವ ನಿವೇಶನಗಳು, ನಿರ್ಮಾಣ ಹಂತದ ಕಟ್ಟಡ, ತಮ್ಮ ಹಾಗೂ ಸಂಬಂಧಿಕರ ಹೆಸರಿನಲ್ಲಿರುವ ಬಹುಮಹಡಿ ಕಟ್ಟಡಗಳು ಪರಿಶೀಲನೆ ವೇಳೆ ಲೋಕಾಯುಕ್ತ ಪೊಲೀಸರಿಗೆ ಪತ್ತೆಯಾಗಿವೆ.

ವಜ್ರಾಭರಣ, ಅಪಾರ ನಗದು ಪತ್ತೆ:

ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚನ್ನಕೇಶ ಅವರಿಗೆ ಸಂಬಂಧಿಸಿದ ಜಕ್ಕೂರಿನ ಮನೆ ಸೇರಿದಂತೆ ಏಳು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು. ದಾಳಿ ವೇಳೆ ₹11.46 ಕೋಟಿ ಮೌಲ್ಯದ ಸ್ಥಿರಾಸ್ತಿ, ₹1.44 ಕೋಟಿ ನಗದು, 3 ಕೆಜಿ ಚಿನ್ನ, 28 ಕೆಜಿ ಬೆಳ್ಳಿ, ₹25 ಲಕ್ಷ ಮೌಲ್ಯದ ವಜ್ರಾಭರಣ, ₹5 ಲಕ್ಷ ಮೌಲ್ಯದ ಪುರಾತನ ವಸ್ತುಗಳು ದೊರೆತಿವೆ.

ಮೈಸೂರು ಜಿಲ್ಲೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಹದೇವಸ್ವಾಮಿ ಅವರಿಗೆ ಸೇರಿದ 12 ಸ್ಥಳಗಳಿಂದ ₹6.08 ಕೋಟಿ ಮೊತ್ತದ ಸ್ಥಿರಾಸ್ತಿ ದಾಖಲೆ ಪತ್ರಗಳು ದೊರೆತಿವೆ. ₹2.33 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳು ದೊರೆತಿವೆ.

ಪ್ರತ್ಯೇಕ ತಂಡಗಳಾಗಿ ಏಕಕಾಲದಲ್ಲಿ ದಾಳಿ ನಡೆದಿದೆ. ಕೆಲವು ತಂಡಗಳು ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದರೆ, ಅದೇ ಸಮಯಕ್ಕೆ ಸರಿಯಾಗಿ ಅವರ ಸಂಬಂಧಿಕರ ಮನೆಯಲ್ಲೂ ಇನ್ನೊಂದು ತಂಡ ಪರಿಶೀಲನೆ ನಡೆಸಿತು. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ದಾಳಿಯ ವೇಳೆ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚನ್ನಕೇಶ ಅವರ ಮನೆಯಲ್ಲಿ ಪತ್ತೆಯಾದ ಆಭರಣಗಳು
ದಾಳಿಯ ವೇಳೆ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚನ್ನಕೇಶ ಅವರ ಮನೆಯಲ್ಲಿ ಪತ್ತೆಯಾದ ಆಭರಣಗಳು

ಚನ್ನಕೇಶವ ಬಾಮೈದ ಮನೆಯಲ್ಲಿ ₹92 ಲಕ್ಷ ನಗದು:

ಬೆಸ್ಕಾಂ ಜಯನಗರ ಉಪ ವಿಭಾಗದ (ಬನಶಂಕರಿ ಪ್ರಥಮ ಹಂತ) ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಡಿ.ಚನ್ನಕೇಶ ಅವರ ಬಾಮೈದ ಸಹಕಾರ ನಗರದಲ್ಲಿರುವ ತರುಣ್‌ ಮನೆಯಲ್ಲಿ ₹92.95 ಲಕ್ಷ ನಗದು 55 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಕುಸಿದು ಬಿದ್ದ ಇಇ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಜಕ್ಕೂರಿನ ಅಮೃತಹಳ್ಳಿಯ ಮನೆಯಲ್ಲಿದ್ದ ಚನ್ನಕೇಶವ ಅವರು ಕುಸಿದು ಬಿದ್ದರು. ಲೋಕಾಯುಕ್ತ ಪೊಲೀಸರೇ ಅವರಿಗೆ ಬಿಪಿ ಮಾತ್ರೆ ತಂದುಕೊಟ್ಟರು. ನಂತರ ಪರಿಶೀಲನಾ ಕಾರ್ಯ ಮುಂದುವರಿಸಿದರು.

ದಾಳಿಯ ವೇಳೆ ಕಂತೆ ಕಂತೆ ನಗದು, ಚಿನ್ನಾಭರಣ, ಬೆಲೆ ಬಾಳುವ ಪುರಾತನ ವಸ್ತುಗಳು, ವಜ್ರಾಭರಣ, ಬೆಳ್ಳಿ ಸಾಮಗ್ರಿ, ಆಸ್ತಿ ಖರೀದಿ ಪತ್ರಗಳು ಪತ್ತೆಯಾಗಿವೆ. ಬೇರೆ ಬೇರೆ ಸ್ಥಳ ಗಳಲ್ಲಿರುವ ನಿವೇಶನಗಳು, ನಿರ್ಮಾಣ ಹಂತದ ಕಟ್ಟಡ, ತಮ್ಮ ಹಾಗೂ ಸಂಬಂಧಿಕರ ಹೆಸರಿನಲ್ಲಿರುವ ಬಹುಮಹಡಿ ಕಟ್ಟಡಗಳ ದಾಖಲೆಗಳು ಪರಿಶೀಲನೆ ವೇಳೆ ಲೋಕಾಯುಕ್ತ ಪೊಲೀಸರಿಗೆ ಪತ್ತೆಯಾಗಿವೆ.

ವಜ್ರಾಭರಣ, ಅಪಾರ ನಗದು ಪತ್ತೆ: ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಚ್‌.ಡಿ. ಚನ್ನಕೇಶವ ಅವರಿಗೆ ಸಂಬಂಧಿಸಿದ ಜಕ್ಕೂರಿನ ಮನೆ ಸೇರಿದಂತೆ ಏಳು ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದರು. ಶೋಧದ ವೇಳೆ ₹11.46 ಕೋಟಿ ಮೌಲ್ಯದ ಸ್ಥಿರಾಸ್ತಿ, ₹1.44 ಕೋಟಿ ನಗದು, 3 ಕೆಜಿ ಚಿನ್ನ, 28 ಕೆಜಿ ಬೆಳ್ಳಿ, ₹25 ಲಕ್ಷ ಮೌಲ್ಯದ ವಜ್ರಾಭರಣ, ₹5 ಲಕ್ಷ ಮೌಲ್ಯದ ಪುರಾತನ ವಸ್ತುಗಳು ದೊರೆತಿವೆ.

ಮೈಸೂರು ಜಿಲ್ಲೆ ನಂಜನಗೂಡಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಮಹದೇವಸ್ವಾಮಿ ಅವರಿಗೆ ಸೇರಿದ 12 ಸ್ಥಳಗಳಿಂದ ₹6.08 ಕೋಟಿ ಮೊತ್ತದ ಸ್ಥಿರಾಸ್ತಿ ದಾಖಲೆ ಪತ್ರಗಳು ದೊರೆತಿವೆ. ₹2.33 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳು ದೊರೆತಿವೆ.

ಪ್ರತ್ಯೇಕ ತಂಡಗಳಾಗಿ ಏಕಕಾಲದಲ್ಲಿ ದಾಳಿ ನಡೆದಿದೆ. ಕೆಲವು ತಂಡಗಳು ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದರೆ, ಅದೇ ಸಮಯಕ್ಕೆ ಸರಿಯಾಗಿ ಅವರ ಸಂಬಂಧಿಕರ ಮನೆಯಲ್ಲೂ ಇನ್ನೊಂದು ತಂಡ ಪರಿಶೀಲನೆ ನಡೆಸಿತು. ಆರೋಪಿಗಳ ವಿರುದ್ಧ ಭ್ರಷ್ಟಾಚಾರ  ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಎಲ್ಲೆಲ್ಲಿ ದಾಳಿ ಎಷ್ಟು ವಶ ?:

ಎಚ್‌.ಎಸ್.ಕೃಷ್ಣಮೂರ್ತಿ ಕೆಎಂಎಫ್‌ ಮುಖ್ಯ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಕಣಿಮಿಣಿ ಶೋಧ ನಡೆಸಿದ್ದ ಸ್ಥಳಗಳು: 5 ಸ್ಥಿರಾಸ್ತಿ: ₹ 49 ಲಕ್ಷ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 3.60 ಕೋಟಿ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 4.09 ಕೋಟಿ

ಟಿ.ಎನ್. ಸುಧಾಕರ್ ರೆಡ್ಡಿ ಬೆಸ್ಕಾಂ ವಿಚಕ್ಷಣಾ ದಳದ ಉಪ ವ್ಯವಸ್ಥಾಪಕ ನಿರ್ದೇಶಕ ಶೋಧ ನಡೆಸಿದ್ದ ಸ್ಥಳಗಳು: 5 ಸ್ಥಿರಾಸ್ತಿ: ₹5.42 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 31.10 ಲಕ್ಷ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 5.73 ಕೋಟಿ

ಬಸವರಾಜ್ ಹೆಸ್ಕಾಂ ನಿವೃತ್ತ ಕಿರಿಯ ಎಂಜಿನಿಯರ್ ಶೋಧ ನಡೆಸಿದ್ದ ಸ್ಥಳಗಳು: 3 ಸ್ಥಿರಾಸ್ತಿ: ₹ 2.31 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 1.02 ಕೋಟಿ (₹80 ಲಕ್ಷ ನಗದು ₹ 24.84 ಲಕ್ಷ ಮೌಲ್ಯದ ವಾಹನಗಳು 331 ಗ್ರಾಂ ಚಿನ್ನಾಭರಣ 26 ಕೆ.ಜಿ ಬೆಳ್ಳಿ ಬ್ಯಾಂಕ್ ಉಳಿತಾಯ ₹ 23 ಲಕ್ಷ ₹ 10 ಲಕ್ಷ ಮೌಲ್ಯದ ಪೀಠೋಪಕರಣ) ಒಟ್ಟು ಆಸ್ತಿ ಮೌಲ್ಯ: ₹ 4.05 ಕೋಟಿ

ಮಹದೇವಸ್ವಾಮಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಶೋಧ ನಡೆಸಿದ್ದ ಸ್ಥಳಗಳು: 12 ಸ್ಥಿರಾಸ್ತಿ: ₹ 6.08 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 2.33 ಕೋಟಿ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 8.41 ಕೋಟಿ

ತಿಮ್ಮರಾಜಪ್ಪ ವಿಜಯಪುರ ಜಿಲ್ಲೆಯ ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಶೋಧ ನಡೆಸಿದ್ದ ಸ್ಥಳಗಳು: 9 ಸ್ಥಿರಾಸ್ತಿ: ₹ 8 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 1 ಕೋಟಿ (₹ 90 ಲಕ್ಷ ನಗದು 250 ಗ್ರಾಂ ಚಿನ್ನಾಭರಣ 300 ಗ್ರಾಂ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 9 ಕೋಟಿ

ಎನ್. ಮುನೇಗೌಡ ರಾಮನಗರ ಜಿಲ್ಲೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶೋಧ ನಡೆಸಿದ್ದ ಸ್ಥಳಗಳು: 6 ಸ್ಥಿರಾಸ್ತಿ: ₹ 3.58 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 1.42 ಕೋಟಿ (₹ 23.50 ಲಕ್ಷ ನಗದು 1150 ಗ್ರಾಂ ಚಿನ್ನಾಭರಣ 6 ಕೆ.ಜಿ 500 ಗ್ರಾಂ ಬೆಳ್ಳಿ ₹ 20 ಲಕ್ಷ ಮೌಲ್ಯದ ಪೀಠೋಪಕರಣ ₹ 10 ಲಕ್ಷ ಬ್ಯಾಂಕ್ ಠೇವಣಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 5 ಕೋಟಿ

ಎಚ್.ಡಿ.ನಾರಾಯಣಸ್ವಾಮಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಶೋಧ ನಡೆಸಿದ್ದ ಸ್ಥಳಗಳು: 2 ಸ್ಥಿರಾಸ್ತಿ: ₹ 5.06 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 3.84ಕೋಟಿ (₹ 1.84 ಲಕ್ಷ ನಗದು 448 ಗ್ರಾಂ ಚಿನ್ನಾಭರಣ) ಒಟ್ಟು ಆಸ್ತಿ ಮೌಲ್ಯ: ₹ 8.90 ಕೋಟಿ

ಎಸ್‌. ಸುನೀಲ್‌ಕುಮಾರ್ ಕರ್ನಾಟಕ ಪಶು ವೈದ್ಯಕೀಯ ‍ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಲೆಕ್ಕಾಧಿಕಾರಿ (ಗುತ್ತಿಗೆ) ಶೋಧ ನಡೆಸಿದ್ದ ಸ್ಥಳಗಳು: 4 ಸ್ಥಿರಾಸ್ತಿ: ₹ 50 ಲಕ್ಷ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 75 ಲಕ್ಷ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 1.25 ಕೋಟಿ

ಬಿ. ಮಾರುತಿ ಗಂಗಾವತಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶೋಧ ನಡೆಸಿದ್ದ ಸ್ಥಳಗಳು: 2 ಚರಾಸ್ತಿ: ₹ 71.39 ಲಕ್ಷ (₹ 2.50 ಲಕ್ಷ ನಗದು 249 ಗ್ರಾಂ ಚಿನ್ನಾಭರಣ 1 ಕೆ.ಜಿ 428 ಗ್ರಾಂ ಬೆಳ್ಳಿ ₹ 20 ಸಾವಿರ ಮೌಲ್ಯದ ಮದ್ಯ ಬಾಟಲಿಗಳು ಇತರೆ) ಒಟ್ಟು ಆಸ್ತಿ ಮೌಲ್ಯ: ₹ 21.39 ಲಕ್ಷ

ಚಂದ್ರಶೇಖರ್ ಹಿರೇಮನಿ ಬಳ್ಳಾರಿ ಹಿರಿಯ ಭೂ ವಿಜ್ಞಾನಿ ಶೋಧ ನಡೆಸಿದ್ದ ಸ್ಥಳಗಳು: 5 ಸ್ಥಿರಾಸ್ತಿ: ₹ 47 ಸಾವಿರ ಚರಾಸ್ತಿ: ₹ 10.24 ಲಕ್ಷ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 10.72 ಲಕ್ಷ

ಎಸ್. ಶರಣಪ್ಪ ಯಾದಗಿರಿ ನಗರಸಭೆ ಆಯುಕ್ತ ಶೋಧ ನಡೆಸಿದ್ದ ಸ್ಥಳಗಳು: 4 ಸ್ಥಿರಾಸ್ತಿ: ₹ 1.45 ಲಕ್ಷ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 60.35 ಲಕ್ಷ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 2.05 ಕೋಟಿ

ಡಾ. ಕೆ. ಪ್ರಭುಲಿಂಗ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಶೋಧ ನಡೆಸಿದ್ದ ಸ್ಥಳಗಳು: 4 ಸ್ಥಿರಾಸ್ತಿ: ₹ 1 ಕೋಟಿ (ನಿವೇಶನ ಮನೆ ಜಮೀನು ಹಾಗೂ ವಿವಿಧ ಆಸ್ತಿ ದಾಖಲೆ) ಚರಾಸ್ತಿ: ₹ 49 ಕ್ಷ (ನಗದು ಚಿನ್ನಾಭರಣ ಬೆಳ್ಳಿ ಇತರೆ) ಒಟ್ಟು ಆಸ್ತಿ ಮೌಲ್ಯ: ₹ 1.49 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT