ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎಂಬುದು ಬಿಜೆಪಿ ಧೋರಣೆ: ಕಾಂಗ್ರೆಸ್

Published 11 ಜುಲೈ 2023, 9:31 IST
Last Updated 11 ಜುಲೈ 2023, 9:31 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಕಿ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.

ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕರ್ನಾಟಕ ಸರ್ಕಾರದ ‘ಅನ್ನ ಭಾಗ್ಯ ಯೋಜನೆ’ಗಾಗಿ ಅಕ್ಕಿ ಮಾರಾಟ ಮಾಡಲು ನಿರಾಕರಿಸಿದ ಬೆನ್ನಲ್ಲೇ ನಡೆಸಿರುವ ಇ–ಹರಾಜು ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಗಮವು ಒಟ್ಟು 3.86 ಲಕ್ಷ ಟನ್‌ ಅಕ್ಕಿ ಮಾರಾಟಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಿದರೂ ಬಿಡ್ಡಿಂಗ್ ಸ್ವೀಕರಿಸಿರುವುದು 170 ಟನ್‌ ಅಕ್ಕಿಗೆ ಮಾತ್ರ.

ಇದೇ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕರ್ನಾಟಕಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರ ಆಹಾರ ನಿಗಮದ ಹರಾಜು ಪ್ರಕ್ರಿಯೆಯಲ್ಲಿ ಅಕ್ಕಿ ಖರೀದಿಗೆ ಖಾಸಗಿ ಕಂಪೆನಿಗಳು ಆಸಕ್ತಿಯೇ ತೋರುತ್ತಿಲ್ಲ. ನಮ್ಮ ಸರ್ಕಾರ ₹34 ಖರೀದಿ ದರಕ್ಕೆ ಕೇಳಿದರೂ ನಿರಾಕರಿಸಿದ ಕೇಂದ್ರ ಸರ್ಕಾರ ಖಾಸಗಿಯವರಿಗೆ ₹31 ಕ್ಕೆ ನೀಡಲು ಸಿದ್ಧವಾದರೂ ಖರೀದಿದಾರರು ಮುಂದೆ ಬರುತ್ತಿಲ್ಲ’ ಎಂದು ಕಿಡಿಕಾರಿದೆ.

‘ಹುಳು ಹಿಡಿದು ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ ಬಿಜೆಪಿಯದ್ದು. ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎಂಬುದು ಬಿಜೆಪಿ ಧೋರಣೆ: ಕಾಂಗ್ರೆಸ್

ಬಿಪಿಎಲ್‌ ಹಾಗೂ ಅಂತ್ಯೋದಯ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲು ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರವು ನಿಗಮಕ್ಕೆ ಮನವಿ ಮಾಡಿತ್ತು. ಆರಂಭದಲ್ಲಿ ಅಕ್ಕಿ ನೀಡಲು ಒಪ್ಪಿದ್ದ ನಿಗಮವು, ಬಳಿಕ ನಿರಾಕರಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಕ್ಕಿ ಒದಗಿಸುವಂತೆ ಮನವಿ ಮಾಡಿದ್ದರು. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಎರಡು ಸಲ ಭೇಟಿ ಮಾಡಿ ಯೋಜನೆಗೆ ಸಹಕಾರ ನೀಡುವಂತೆ ಕೋರಿದ್ದರು. ರಾಜ್ಯದ ಒತ್ತಡಕ್ಕೆ ಉಭಯ ಸಚಿವರು ಮಣಿದಿರಲಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವಂತೆ ಸಲಹೆ ನೀಡಿ ‘ಕೈ’ ತೊಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT