ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕರ್ನಾಟಕದಲ್ಲಿ ರಾಜಾಹುಲಿ, ಮೋದಿ ಮುಂದೆ ಇಲಿ: ಸಿಎಂ ಸಿದ್ದರಾಮಯ್ಯ ಲೇವಡಿ

Published 3 ನವೆಂಬರ್ 2023, 10:20 IST
Last Updated 3 ನವೆಂಬರ್ 2023, 10:20 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಕುರಿತು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಪ್ರತಿನಿತ್ಯ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಬೈಯುತ್ತಿದ್ದರೆ, ಮೋದಿ ಅವರು ಏಕೆ ಮುಖ್ಯಮಂತ್ರಿಗಳನ್ನು ಭೇಟಿ ಆಗುತ್ತಾರೆ ಎಂದು ಬಿ.ಎಸ್‌ ಯಡಿಯೂರಪ್ಪ ಅವರು ಹೇಳಿರುವುದು ರಾಜ್ಯದ ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಯಡಿಯೂರಪ್ಪನವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಗುಲಾಮಗಿರಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ. ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕವಾಗಿ ನನಗೆ ಯಾವುದೇ ದ್ವೇಷ ಇಲ್ಲ. ವೈಯಕ್ತಿಕವಾಗಿ ಅವರು ನನಗೆ ಏನು ಹಾನಿ ಮಾಡಿಲ್ಲ. ಆದರೆ, ರಾಜ್ಯದ ಜನರನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿಯಾಗಿ ನಮ್ಮ ಜನರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಕಂಡು ಕಣ್ಣುಮುಚ್ಚಿಕೊಂಡು ಇರಲಾಗುವುದಿಲ್ಲ, ಪ್ರಶ್ನಿಸುವ ಕೆಲಸವನ್ನು ಮಾಡದೆ ಇದ್ದರೆ ಅದು ಜನದ್ರೋಹವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಬಿ.ಎಸ್‌ ಯಡಿಯೂರಪ್ಪ ಅವರು ಮರೆತುಬಿಟ್ಟಂತಿದೆ. ಕೇಂದ್ರ ಸರ್ಕಾರ ಎಂದರೆ ಅರಸೊತ್ತಿಗೆಯೂ ಅಲ್ಲ, ಮೋದಿ ಅವರು ಅರಸರೂ ಅಲ್ಲ. ಅವರು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ. ಇಷ್ಟೊಂದು ದೀರ್ಘಕಾಲ ರಾಜಕೀಯದಲ್ಲಿರುವ ಯಡಿಯೂರಪ್ಪ ಅವರಿಗೆ ಪ್ರಜಾಪ್ರಭುತ್ವದ ಈ ಮೂಲ ಪಾಠ ತಿಳಿಯದೆ ಇರುವುದು ದುರಂತವೇ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಹಳ ಮುಖ್ಯವಾಗಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಈ ರೀತಿ ಹೇಳಿಕೆ ನೀಡುವ ಯಾವ ನೈತಿಕತೆಯು ಇಲ್ಲ. ಬಿಜೆಪಿ ಪಕ್ಷ ತೊರೆದು ಸ್ವಂತ ಪಕ್ಷ ಕಟ್ಟಿಕೊಂಡ ದಿನಗಳಲ್ಲಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಕೇವಲ ನರೇಂದ್ರ ಮೋದಿ ಅವರ ವಿರುದ್ಧ ಮಾತ್ರವಲ್ಲದೇ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರ ವಿರುದ್ಧ ಹೇಗೆಲ್ಲ ಬೈದಿದ್ದಾರೆ ಎನ್ನುವುದನ್ನು ರಾಜ್ಯದ ಜನ ಕಂಡಿದ್ದಾರೆ ಎಂದು ಸಿಎಂ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ಹಿಗ್ಗಾಮುಗ್ಗಾ ಬೈಯುತ್ತಿದ್ದ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಕರೆಸಿ ಮಾತನಾಡಿ ಬೆನ್ನು ತಟ್ಟಿ ಕಳುಹಿಸುತ್ತಾರೆ. ಆದರೆ, ಮೋದಿ ಅವರನ್ನು ಹೊಗಳುತ್ತಿರುವ ಯಡಿಯೂರಪ್ಪ ಅವರೊಂದಿಗೆ ಕೂತು ಮಾತನಾಡಲು ಮೋದಿ ಸಮಯ ನೀಡದೆ, ದೆಹಲಿಯಲ್ಲಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿದೆ. ಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಬಿಎಸ್‌ವೈ, ನರೇಂದ್ರ ಮೋದಿ ಅವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ಸಿಎಂ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರು ಹಾಗೂ ತಮ್ಮದೇ ಪಕ್ಷದವರಾದ ಎಲ್‌.ಕೆ ಅಡ್ವಾಣಿ, ಬಿ.ಎಸ್‌ ಯಡಿಯೂರಪ್ಪ ಅವರಂತಹ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಾಧಾನ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT