ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಮನಮೋಹನ್ ಸಿಂಗ್ ಹೇಳಿದ್ದನ್ನು, ಇಂದು ಸಿದ್ದರಾಮಯ್ಯ ಮಾಡ್ತಿದ್ದಾರೆ: ಯತ್ನಾಳ

Published 30 ಡಿಸೆಂಬರ್ 2023, 11:44 IST
Last Updated 30 ಡಿಸೆಂಬರ್ 2023, 11:44 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲೊನಿಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ₹1 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಅಲ್ಪಸಂಖ್ಯಾತರ ಅನುದಾನ ವಿಚಾರ ಪ್ರಸ್ತಾಪಿಸಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅಂದು ಹೇಳಿದ್ದನ್ನು, ಇಂದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅನುಷ್ಠಾನಗೊಳ್ಳಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷವಾಕ್ಯಗಳು ನಿಮ್ಮ ಚುನಾವಣಾ ಪ್ರಚಾರಕ್ಕೆ, ಭಾಷಣಗಳಿಗೆ ಸೀಮಿತವಾಯಿತು ಅಷ್ಟೇ. ಅಲ್ಪಸಂಖ್ಯಾತರಷ್ಟೇ ಈ ರಾಜ್ಯದ ಪ್ರಜೆಗಳೇ? ಇದೇನಾ ನೀವು ನಂಬಿರುವ ಜಾತ್ಯಾತೀತ ಸಿದ್ದಾಂತ? ಇದೇನಾ ನಿಮ್ಮ ಸರ್ಕಾರದ ಸಮಾನತೆ? ಬೇರೆ ಜಾತಿಯ ಪ್ರತಿಭಾನ್ವಿತ ಮಕ್ಕಳು, ವಿದ್ಯಾರ್ಥಿಗಳು ಏನು ಮಾಡಬೇಕು’ ಎಂದು ಯತ್ನಾಳ ಪ್ರಶ್ನಿಸಿದ್ದಾರೆ.

‘ನಿಮ್ಮ ಮತ ಬ್ಯಾಂಕ್ ಅನ್ನು ಬಲಪಡಿಸಿಕೊಳ್ಳಲು ಈ ರೀತಿ ತುಷ್ಟೀಕರಣ ರಾಜಕೀಯ ಮಾಡುವುದು ಹೇಯ ಹಾಗೂ ಸಂವಿಧಾನಕ್ಕೆ ಬಗೆದ ಅಪಚಾರ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು, ತೆರಿಗೆದಾರರ ಹಣವನ್ನು ಯಾವುದೋ ಒಂದು ಸಮುದಾಯಕ್ಕೆ ಮೀಸಲಿಡುವುದು ನಿಮ್ಮ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆ, ರೈತರ ಕುತ್ತಿಗೆಗೆ ಕುಣಿಕೆ: ಅಶೋಕ ಟೀಕೆ

ಬರದಿಂದ ಹೈರಾಣಾಗಿರುವ ರೈತರಿಗೆ ₹2,000 ಪರಿಹಾರ ಕೊಡಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ₹1,000 ಕೋಟಿ ನೀಡಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.

‘ಸಿದ್ದರಾಮಯ್ಯ ಅವರೇ, ತಮ್ಮ ಕಲ್ಲು ಹೃದಯ ಕರಗಲು ಇನ್ನೆಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು’ ಎಂದು ಅಶೋಕ ಗುಡುಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತರ ಓಲೈಕೆ ಮಾತ್ರವೇ?, ನಾಡಿಗೆ ಬರ ಬಂದು ರೈತರು ಕುಣಿಕೆಗೆ ಕುತ್ತಿಗೆಯೊಡ್ಡುತ್ತಿದ್ದಾರೆ. ಪಿಎಂ ಕಿಸಾನ್ ಯೋಜನೆಯ ₹4,000 ಕಡಿತಗೊಳಿಸಿದ್ದಾಯಿತು. ಈಗ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ₹1,000 ಕೋಟಿ ನೀಡಲು ಹೊರಟಿದ್ದಾರೆ. ಬರ ಪರಿಹಾರಕ್ಕಿಲ್ಲದ ಹಣ ಓಲೈಕೆ ಕಾರ್ಯಗಳಿಗಿದೆ’ ಎಂದು ಬಿಜೆಪಿ ಮುಖಂಡ ನಳೀನ್‌ ಕುಮಾರ್‌ ಕಟೀಲ್ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT