ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Dengue Fever | ಮಳೆ: ರಾಜ್ಯದಲ್ಲಿ ಡೆಂಗಿ ಪ್ರಕರಣ ಹೆಚ್ಚಳ

Published : 27 ಜುಲೈ 2023, 14:06 IST
Last Updated : 27 ಜುಲೈ 2023, 14:06 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಈ ತಿಂಗಳು 1,915 ಮಂದಿಯಲ್ಲಿ ಡೆಂಗಿ ಜ್ವರ ದೃಢಪಟ್ಟಿದೆ. 

ಬಿಸಿಲು ಮಳೆಯಿಂದಾಗಿ ಡೆಂಗಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಕೆಲವೆಡೆ ಮಳೆ ನೀರು ಹಾಗೇ ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಳವಾಗಲಿದ್ದು, ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಈ ಜ್ವರ ಬರಲಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. 

ಈ ವರ್ಷ ಈಗಾಗಲೇ 50 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 35 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 4,175ಕ್ಕೆ ತಲುಪಿದೆ. ಸುಮಾರು ಅರ್ಧದಷ್ಟು ಪ್ರಕರಣ ಇದೇ ತಿಂಗಳಲ್ಲಿ ದೃಢಪಟ್ಟಿವೆ. 

ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿರುವುದು ದೃಢಪಟ್ಟಿತ್ತು. ಈ ವರ್ಷ ಮರಣ ವರದಿಯಾಗಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 3,457 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 2,062 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಮೈಸೂರಿನಲ್ಲಿ 310, ವಿಜಯಪುರದಲ್ಲಿ 134, ಶಿವಮೊಗ್ಗದಲ್ಲಿ 121, ಬೆಳಗಾವಿಯಲ್ಲಿ 112, ಚಿತ್ರದುರ್ಗದಲ್ಲಿ 104, ಧಾರವಾಡದಲ್ಲಿ 99, ಕೊಡಗಿನಲ್ಲಿ 88, ಹಾಸನದಲ್ಲಿ 78, ಬಳ್ಳಾರಿಯಲ್ಲಿ 74, ದಕ್ಷಿಣ ಕನ್ನಡ ಹಾಗೂ ಕಲಬುರಗಿಯಲ್ಲಿ ತಲಾ 72, ದಾವಣಗೆರೆಯಲ್ಲಿ 71, ಬಾಗಲಕೋಟೆಯಲ್ಲಿ 68, ತುಮಕೂರು, ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 66 ಹಾಗೂ ಗದಗದಲ್ಲಿ 63 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 60ಕ್ಕಿಂತ ಕಡಿಮೆಯಿದೆ. 

ಚಿಕೂನ್‌ಗುನ್ಯಾ ಪ್ರಕರಣವೂ ಏರಿಕೆ:

28 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 21 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 14 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 661 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ವಿಜಯಪುರ (87), ಮೈಸೂರಿನಲ್ಲಿ (81) ಹಾಗೂ ಶಿವಮೊಗ್ಗದಲ್ಲಿ (54) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ.

‘ಸೊಳ್ಳೆ ಕಡಿತದಿಂದ ಕಾಣಿಸಿಕೊಳ್ಳುವ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮನೆಯ ಸುತ್ತ ಮುತ್ತಲಿನ ಹೊರಾಂಗಣ ಪ್ರದೇಶಗಳು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಖಾಲಿ ನಿವೇಶನ ಸೇರಿ ವಿವಿಧೆಡೆ ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸ್ವಚ್ಛತೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT