ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಜಲ ವಿವಾದಗಳು: ಇದುವರೆಗೆ ವಕೀಲರಿಗೆ ₹122.75 ಕೋಟಿ ಶುಲ್ಕ ಪಾವತಿ!

ಕಾವೇರಿ, ಕೃಷ್ಣಾ, ಮಹದಾಯಿ ನ್ಯಾಯಾಧೀಕರಣಗಳಲ್ಲಿ ವಾದ ಮಂಡಿಸಿದವರಿಂದ ಅಪಾರ ಹಣ ಪೋಲು: ಆರೋಪ
Published 26 ಸೆಪ್ಟೆಂಬರ್ 2023, 10:12 IST
Last Updated 26 ಸೆಪ್ಟೆಂಬರ್ 2023, 10:12 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿಗಳ ವಿವಾದ ಬಗೆಹರಿಸಲು ರಚಿಸಲಾದ ಕಾವೇರಿ ಜಲವಿವಾದ ನ್ಯಾಯಮಂಡಳಿ, ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಹಾಗೂ ಮಹದಾಯಿ ಜಲವಿವಾದ ನ್ಯಾಯಮಂಡಳಿ ವಿಚಾರಣೆ ಸಮಯದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ವಕೀಲರ ಶುಲ್ಕಕ್ಕಾಗಿ ರಾಜ್ಯ ಸರ್ಕಾರವು ₹122.76 ಕೋಟಿ ಪಾವತಿಸಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ, ತಮಿಳನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವಣ ಜಲವಿವಾದದ ಇತ್ಯರ್ಥಕ್ಕೆ 1990ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚಿಸಲಾಗಿದೆ. ಪ್ರಾರಂಭದಿಂದ 2017ರ ಜುಲೈ 10ರವರೆಗೆ ಒಟ್ಟು 580 ಸಿಟ್ಟಿಂಗ್‌ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ ₹54.13 ಕೋಟಿಗೂ ಅಧಿಕ ಶುಲ್ಕ ಪಾವತಿಸಲಾಗಿದೆ’ ಎಂದರು.

‘ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ನಡುವಣ ಜಲವಿವಾದದ ಇತ್ಯರ್ಥಕ್ಕೆ 2004ರಲ್ಲಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿ ರಚಿಸಲಾಗಿದೆ. 2013ರ ನವೆಂಬರ್ 23ರವರೆಗೆ 295 ಸಿಟ್ಟಿಂಗ್ ನಡೆದಿವೆ. ಇದರಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರ ಶುಲ್ಕ ಮೊತ್ತ ₹43.24 ಕೋಟಿ ದಾಟಿದೆ’ ಎಂದು ಅವರು ವಿವರಿಸಿದರು.

‘ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಲವಿವಾದದ ಇತ್ಯರ್ಥಕ್ಕೆ 2010ರಲ್ಲಿ ಮಹದಾಯಿ ನ್ಯಾಯಮಂಡಳಿ ರಚಿಸಲಾಗಿದೆ. 2017ರವರೆಗೆ 97 ಸಿಟ್ಟಿಂಗ್‌ಗಳು ನಡೆದಿವೆ. ₹25.38 ಕೋಟಿಗೂ ಅಧಿಕ ಹಣವನ್ನು ವಕೀಲರ ಶುಲ್ಕ ಪಾವತಿಸಲಾಗಿದೆ’ ಎಂದರು.

ಹೊರ ರಾಜ್ಯದ ವಕೀಲರು: ‘ರಾಜ್ಯದ ಪರ ವಾದ ಮಂಡಿಸಲು ನೇಮಕ ಮಾಡಿಕೊಂಡ ವಕೀಲರಲ್ಲಿ ಹೆಚ್ಚಿನವರು ಕೇರಳ, ತಮಿಳನಾಡು ಮತ್ತು ಪುದುಚೇರಿ ಮೂಲದವರು. ರಾಜ್ಯದ ಸದ್ಯದ ನೀರಿನ ವಾಸ್ತವವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅವರು ವಿಫಲವಾಗಿದ್ದಾರೆ. ರಾಜ್ಯದ ಹಿತಕಾಯುವ ಬದಲು ಸ್ವ-ಹಿತಾಸಕ್ತಿಗೆ ಆದ್ಯತೆ ನೀಡಿದ್ದು ಇದರಿಂದ ಗೊತ್ತಾಗುತ್ತದೆ’ ಎಂದೂ ಭೀಮಪ್ಪ ಗಡಾದ ದೂರಿದರು.

ಯಾರಿಗೆ ಹೆಚ್ಚು ಶುಲ್ಕ?

ಈ ಮೂರೂ ನ್ಯಾಯಮಂಡಳಿಗಳಲ್ಲಿ ಒಟ್ಟು 41 ಹಿರಿಯ ವಕೀಲರಿಗೆ ಶುಲ್ಕ ‍ಪಾವತಿಸಲಾಗಿದೆ. ಪ್ರಮುಖವಾಗಿ ಅನಿಲ ಬಿ. ದಿವಾನ್‌ ಅವರಿಗೆ ₹29.78 ಕೋಟಿ ಎಫ್.ಎಸ್.ನಾರಿಮನ್ ಅವರಿಗೆ ₹27.45 ಕೋಟಿ ಎಸ್.ಎಸ್. ಜವಳಿ ಅವರಿಗೆ ₹12.61 ಕೋಟಿ ಮೋಹನ ಕಾತರಕಿ ಅವರಿಗೆ ₹13.39 ಕೋಟಿ ಶುಲ್ಕ ಸಂದಾಯ ಮಾಡಲಾಗಿದೆ ಎಂದು ಅವರು ದಾಖಲೆ ನೀಡಿದರು. ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಬಳಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿ ₹10.50 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಜಲಾಶಯ ನಿರ್ಮಿಸಿದರು. ಆದರೆ ಅದರ ನೀರನ್ನು ಬಳಸಿಕೊಳ್ಳಲು ಸರ್ಕಾರ ಕೋಟ್ಯಂತರ ಹಣವನ್ನು ವಕೀಲರಿಗೆ ನೀಡಿದೆ’ ಎಂದರು.

ಭೀಮಪ್ಪ ಗಡಾದ

ಭೀಮಪ್ಪ ಗಡಾದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT