ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯಿತಿ ಚುನಾವಣೆಗೆ ‘ಜನಸಂಖ್ಯೆ’ ಮಿತಿ: ಕಾಯ್ದೆ ತಿದ್ದುಪಡಿಗೆ ಮಸೂದೆ

Last Updated 14 ಮಾರ್ಚ್ 2022, 4:21 IST
ಅಕ್ಷರ ಗಾತ್ರ

ಬೆಂಗಳೂರು: ತಾಲ್ಲೂಕು ಪಂಚಾಯಿತಿ ಚುನಾವಣೆಗೆ ‘ಜನಸಂಖ್ಯೆ’ ಮಿತಿಗೊಳಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ತಾಲ್ಲೂಕು ಪಂಚಾಯಿತಿಯಲ್ಲಿ ಕನಿಷ್ಠ 11 ಚುನಾಯಿತ ಸದಸ್ಯರು ಇರಬೇಕು ಎಂದು ನಿಯಮ ರೂಪಿಸಲು ಮುಂದಾಗಿದೆ.

ಚುನಾಯಿತ ಸದಸ್ಯರ ಆಯ್ಕೆಗೆ ಜನಸಂಖ್ಯೆ ಮಿತಿಗೊಳಿಸಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸಲು ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ– 1993’ ತಿದ್ದುಪಡಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಾಲಿ ಬಜೆಟ್‌ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಅವರ ಅಧ್ಯಕ್ಷತೆಯ ‘ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ’ದ ಶಿಫಾರಸಿನ ಅನ್ವಯ ಕಾಯ್ದೆ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. ಈ ಹಿಂದಿನ ಜನಗಣತಿ ಆಧರಿಸಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಯನ್ನು ನಿರ್ಧರಿಸುವ ಜೊತೆಗೆ, ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವ ಕುರಿತಂತೆ ಈ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಿದ್ದುಪಡಿ ಮಸೂದೆಯ ಕರಡಿನಲ್ಲಿರುವ ಅಂಶದ ಪ್ರಕಾರ, 1 ಲಕ್ಷಕ್ಕಿಂತ ಕಡಿಮೆ, 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ತಾಲ್ಲೂಕುಗಳು ಕನಿಷ್ಠ ಒಂಬತ್ತು ಹಾಗೂ 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲ್ಲೂಕುಗಳು ಕನಿಷ್ಠ ಏಳು ಚುನಾಯಿತ ಸದಸ್ಯರನ್ನು ಹೊಂದಿರಬೇಕು.

ಹಾಲಿ ನಿಯಮದ ಪ್ರಕಾರ, ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯು ರಾಜ್ಯ ಚುನಾವಣಾ ಆಯೋಗದಿಂದ ಕಾಲಕಾಲಕ್ಕೆ ಅಧಿಸೂಚಿಸಲಾಗುತ್ತದೆ. ಅದರಂತೆ, ಆ ತಾಲ್ಲೂಕಿನ ಪ್ರತಿ 12,500 ರಿಂದ 15 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಚುನಾಯಿತ ಸದಸ್ಯರಿರಬೇಕು. ಆದರೂ, ಒಂದು ಲಕ್ಷ ಜನಸಂಖ್ಯೆ ಮೀರದ ತಾಲ್ಲೂಕು ಪಂಚಾಯಿತಿ ಕನಿಷ್ಠ 11 ಚುನಾ
ಯಿತ ಸದಸ್ಯರು ಇರಬೇಕು. ಇದೀಗ, ಈ ನಿಯಮಕ್ಕೆ ತಿದ್ದುಪಡಿ ಆಗಲಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ 30 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರಿರಬೇಕು ಎಂಬ ಹಾಲಿ ನಿಯಮ ಬದಲಿಸಲೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ನಿಯಮದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ತರೀಕೆರೆ, ಕಡೂರು, ಅಜ್ಜಂಪುರ ತಾಲ್ಲೂಕುಗಳನ್ನು ಹೊರತುಪಡಿಸಿದ ಪ್ರದೇಶದಲ್ಲಿ ಪ್ರತಿ 30 ಸಾವಿರಕ್ಕೆ ಒಬ್ಬರು ಸದಸ್ಯರು ಇರಬೇಕು ಎಂಬ ನಿಯಮ ಅನ್ವಯ ಆಗಲಿದೆ.

ಉಸ್ತುವಾರಿ ಸಚಿವರು ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರು

ಪ್ರಸ್ತಾಪಿತ ಮಸೂದೆ ಪ್ರಕಾರ, ಇನ್ನು ಮುಂದೆ ಜಿಲ್ಲಾ ಯೋಜನಾ ಸಮಿತಿಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಅಧ್ಯಕ್ಷ ಆಗಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಮಿತಿ ಉಪಾಧ್ಯಕ್ಷ ಆಗಲಿದ್ದಾರೆ. ಮೇಯರ್‌ ಅಥವಾ ಸಂಬಂಧಿಸಿದ ಜಿಲ್ಲಾ ಕೇಂದ್ರದ ನಗರಸಭೆ ಅಥವಾ ಪುರಸಭೆಯ ಅಧ್ಯಕ್ಷರೂ ಉಪಾಧ್ಯಕ್ಷ ಆಗಿರುತ್ತಾರೆ. ಈವರೆಗೆ ಎಲ್ಲರೂ ಸಮಿತಿ ಸದಸ್ಯರು ಎಂದು ಪರಿಗಣಿಸಲಾಗುತ್ತಿತ್ತು. ತಿದ್ದುಪಡಿ ಮೂಲಕ, ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ವಿಶೇಷ ಆಹ್ವಾನಿತರಾಗಿ ಮಾಡಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT