ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಅಧ್ಯಯನ ಪೀಠ ಕಾಮಗಾರಿಗೆ ಅನುಮೋದನೆ

ಅಧಿಕಾರಯುಕ್ತ ಸಮಿತಿಯ ಹಿಂದಿನ ನಿರ್ಣಯ ವಾಪಸ್
Last Updated 5 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದ ಕಾಮಗಾರಿಗೆ ನಗರಾಭಿವೃದ್ಧಿ ಇಲಾಖೆ ಗುರುವಾರ ಷರತ್ತುಬದ್ಧ ಅನುಮೋದನೆ ನೀಡಿದೆ.

ಕಾಮಗಾರಿಯನ್ನು ಕಡ್ಡಾಯವಾಗಿ ಬಿಬಿಎಂಪಿ ಅನುದಾನದಲ್ಲೇ ಕೈಗೆತ್ತಿಕೊಳ್ಳಬೇಕು. ಈ ಯೋಜನೆಗೆ ತಗಲುವ ವೆಚ್ಚವನ್ನು ಬಿಬಿಎಂಪಿಯು ಮುಂದಿನ ಸಾಲಿನ ಬಜೆಟ್‌ನಲ್ಲಿ ಮೀಸಲಿಡಬೇಕು. ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆ/ನಿಯಮಗಳಿಗೆ ಅನುಸಾರವಾಗಿಯೇ ಅನುಷ್ಠಾನಗೊಳಿಸಬೇಕು ಎಂದು ಇಲಾಖೆ ಷರತ್ತು ವಿಧಿಸಿದೆ.

ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯನ್ನು ಮಾತ್ರ ನೀಡಲಾಗಿದೆ. ಟೆಂಡರ್‌ಗೆ ಪ್ರತ್ಯೇಕವಾಗಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಇಲಾಖೆಸ್ಪಷ್ಟಪಡಿಸಿದೆ.

ಬಿಬಿಎಂಪಿ 2017–18ನೇ ಸಾಲಿನ ಬಜೆಟ್‌ನಲ್ಲಿ ಈ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಕ್ಕೆ ₹ 50 ಕೋಟಿ ಅನುದಾನ ಮೀಸಲಿಟ್ಟಿತ್ತು. ಈ ಕಾಮಗಾರಿಗೆ ಅನುಮೋದನೆ ನಿರೀಕ್ಷಿಸಿ ಜಾಬ್‌ ಕೋಡ್‌ (129–18–000001) ನೀಡಲಾಗಿತ್ತು. ಕಾಮಗಾರಿಯ ವಿಸ್ತೃತ ಯೋಜನಾ ವರದಿ ಅಂದಾಜುಪಟ್ಟಿ ತಯಾರಿಗೆ ರಾಜರಾಜೇಶ್ವರಿನಗರ ಕಾರ್ಯಪಾಲಕ ಎಂಜಿನಿಯರ್‌ ಅವರು ಎಸಿಎಸ್‌ ಡಿಸೈನ್ ಕನ್ಸಲ್ಟಿಂಗ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 2017ರ ಅ.9ರಂದು ಕಾರ್ಯಾದೇಶ ನೀಡಿದ್ದರು.

ಅದರಂತೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮತ್ತು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರ ನಡುವೆ ಒಪ್ಪಂದ ನಡೆದಿತ್ತು. ಪಾಲಿಕೆಯು 2018–19ನೇ ಸಾಲಿನ ಬಜೆಟ್‌ನಲ್ಲಿ ಈ ಪೀಠಕ್ಕೆ ₹10 ಲಕ್ಷ ಅನುದಾನವನ್ನು ಮಾತ್ರ ಮೀಸಲಿಟ್ಟಿತ್ತು.

ಪೀಠದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಪಾಲಿಕೆ2019ರ ಮೇ 21ರಂದು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. 2019ರ ನ.04ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆಯ ಬಗ್ಗೆ ಹಾಗೂ ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಬಗ್ಗೆ ಚರ್ಚೆ ನಡೆದಿತ್ತು. ಅನುದಾನ ಕೊರತೆಯ ಕಾರಣಕ್ಕೆ ಟೆಂಡರ್‌ ರದ್ದುಪಡಿಸಲು ಹಾಗೂಕಾಮಗಾರಿಯನ್ನು ಕೈಬಿಡಲು ಸಮಿತಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿತ್ತು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಪಾಲಿಕೆ ಆಯುಕ್ತರಿಗೆ ‍ನ.18ರಂದು ಪತ್ರ ಬರೆದಿತ್ತು.

ಬಳಿಕ ಮಧ್ಯಪ್ರವೇಶಿಸಿದ್ದ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರು ‘ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠದ ಅಗತ್ಯವಿದೆ. ಹಾಗಾಗಿ, ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು’ ಎಂದು ಡಿ.4ರಂದು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದರು.

ಕೆಂಪೇಗೌಡ ಅಧ್ಯಯನ ಪೀಠಕ್ಕೆ 2017–18ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ₹ 50 ಕೋಟಿ

ಕಾಮಗಾರಿಯ ಡಿಪಿಆರ್‌ ಮತ್ತು ಅಂದಾಜುಪಟ್ಟಿ ತಯಾರಿಗೆ 2017ರ ಅಕ್ಟೋಬರ್‌ನಲ್ಲಿ ಕಾರ್ಯಾದೇಶ

ಪೀಠ ಸ್ಥಾಪನೆ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮತ್ತು ಬಿಬಿಎಂಪಿ ನಡುವೆ ಒಪ್ಪಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT