ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಸೌಹಾರ್ದದಿಂದ ಹಬ್ಬ ಆಚರಿಸಿದ ಹಿಂದೂ ಹಾಗೂ ಮುಸ್ಲಿಮರು

Published : 16 ಸೆಪ್ಟೆಂಬರ್ 2024, 21:06 IST
Last Updated : 16 ಸೆಪ್ಟೆಂಬರ್ 2024, 21:06 IST
ಫಾಲೋ ಮಾಡಿ
Comments

ಕೊಪ್ಪಳ: ಹಿಂದೂ ಹಾಗೂ ಮುಸ್ಲಿಮರು ಇಲ್ಲಿ ಸೌಹಾರ್ದದಿಂದ ಹಬ್ಬ ಆಚರಿಸುವ ಮೂಲಕ ಮಾದರಿ ಎನಿಸಿದ್ದಾರೆ.

ಈದ್‌ ಮಿಲಾದ್ ಅಂಗವಾಗಿ ನಗರದಲ್ಲಿ ಸೋಮವಾರ ಸಾವಿರಾರು ಮುಸ್ಲಿಮರು ಮೆರವಣಿಗೆ ಮೂಲಕ ಇಲ್ಲಿನ ಅಪ್ಪು ಸರ್ಕಲ್‌ಗೆ ತೆರಳಿದ್ದರು. ಅಲ್ಲಿ ಬಾಲ ವಿನಾಯಕ ಗೆಳೆಯರ ಬಳಗದವರು (ಕೊಪ್ಪಳ ಕಾ ಸರ್ಕಾರ್‌) ಗಣೇಶ ಮೂರ್ತಿಪ್ರತಿಷ್ಠಾಪಿಸಿದ್ದು, ಬಳಗದ ಸದಸ್ಯರು ಮುಸಲ್ಮಾನರನ್ನು ಪ್ರೀತಿ

ಯಿಂದ ಸ್ವಾಗತಿಸಿ ಹಬ್ಬದ ಶುಭಾಶಯ ಕೋರಿದರು. ಹಲವರು ಪರಸ್ಪರ ಆಲಂಗಿಸಿಕೊಂಡರು.

ಮೆರವಣಿಗೆಯಲ್ಲಿ ಬಂದ ದೊಡ್ಡವರಿಗೆ ಶರಬತ್‌ ಮತ್ತು ಮಕ್ಕಳಿಗೆ ಬಿಸ್ಕತ್‌ ಹಂಚಿದರು.

ಕೆಲ ಮುಸ್ಲಿಮರು ಕೇಸರಿ ಶಾಲು ಧರಿಸಿ ಶರಬತ್‌ ನೀಡಲು ಗೆಳೆಯರ ಬಳಗದ ಸ್ನೇಹಿತರಿಗೆ ನೆರವಾದರು. ಇದರಿಂದ ಖುಷಿಯಾಗಿ ಮುಸ್ಲಿಂ ಸಮಾಜದವರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸಂಘಟಕರಿಗೆ ಹೂವಿನ ಹಾರ ಹಾಕಲು ಮುಂದಾದರು. ಆಗ ಸಂಘಟಕರು ‘ನಮಗೆ ಹಾರ ಹಾಕುವ ಬದಲು ಮೂರ್ತಿಗೆ ಹಾಕಿ’ ಎಂದು ವಿನಂತಿಸಿಕೊಂಡಿದ್ದರಿಂದ ಮುಸ್ಲಿಂಮುಖಂಡರು ವೇದಿಕೆ ಮೇಲೆ ತೆರಳಿ ಹಾರಹಾಕಿ ಭಕ್ತಿಯಿಂದ ನಮಸ್ಕರಿಸಿದರು. ಬಳಿಕ ಮತ್ತೊಮ್ಮೆ ಶುಭಾಶಯ ವಿನಿಮಯ ಮಾಡಿಕೊಂಡು ನಗುಮೊಗದಿಂದ ತೆರಳಿದರು.

ಈ ವೇಳೆ ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಸೇರಿ ಅನೇಕ ಪೊಲೀಸರು ಭದ್ರತೆ ಒದಗಿಸಿದ್ದರು. ಹಿಂದೂ ಹಾಗೂ ಮುಸ್ಲಿಮರು ಭಾವೈಕ್ಯದಿಂದ ಹಬ್ಬ ಆಚರಿಸಿದ್ದು ಪೊಲೀಸರ ಖುಷಿಗೂ ಕಾರಣವಾಯಿತು.

‘ಪ್ರತಿವರ್ಷ ಐದು ದಿನ ಮಾತ್ರ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೆವು. ಮೊದಲ ಬಾರಿಗೆ 11 ದಿನ ಪ್ರತಿಷ್ಠಾಪಿಸಿದ್ದೇವೆ. ಮುಸ್ಲಿಂ ಸ್ನೇಹಿತರು ಬಂದು ನಮ್ಮ ಅತಿಥ್ಯ ಸ್ವೀಕರಿಸಿದ್ದಕ್ಕೆ ಖುಷಿಯಾಗಿದೆ. ಅವರೂ ಮೂರ್ತಿಗೆ ಹಾರ ಹಾಕಿ ಭಕ್ತಿ ತೋರಿಸಿದರು’ ಎಂದು ಬಾಲ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಸುನಿಲ್‌ ಹದ್ದಿನ ಹರ್ಷ ವ್ಯಕ್ತಪಡಿಸಿದರು.

ಅಪ್ಪು ಸರ್ಕಲ್‌ ಬಡಾವಣೆಯ ಯುವಕ ಮೊಹಮ್ಮದ್‌ ಅಲಿ, ‘ಹಿಂದೂ–ಮುಸ್ಲಿಮರ ನಡುವೆ ರಾಜ್ಯದ ಕೆಲ ಕಡೆ ಸಂಘರ್ಷಗಳು ನಡೆಯುತ್ತಿವೆ. ಆದರೆ, ಕೊಪ್ಪಳದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಈದ್‌ ಮಿಲಾದ್ ಮೆರವಣಿಗೆಯಲ್ಲಿದ್ದ ಜನರಿಗೆ ಹಿಂದೂ ಸ್ನೇಹಿತರು ನೀಡಿದ ಆತಿಥ್ಯದಿಂದ ಸಂತೋಷವಾಗಿದೆ ಇದು ಭಾವೈಕ್ಯದ ಸಂದೇಶ ಸಾರಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT