ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದ KS ಈಶ್ವರಪ್ಪ

ಬೆಂಬಲಿಗರ ಸಭೆ ನಂತರ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಘೋಷಣೆ
Published 15 ಮಾರ್ಚ್ 2024, 15:08 IST
Last Updated 15 ಮಾರ್ಚ್ 2024, 15:08 IST
ಅಕ್ಷರ ಗಾತ್ರ

ಶಿವಮೊಗ್ಗ: ಕರ್ನಾಟಕದಲ್ಲಿ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ತಪ್ಪಿಸಲು, ಹಿಂದುತ್ವದ ಸಿದ್ಧಾಂತ ಉಳಿಸಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪುತ್ರನಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಟಿಕೆಡ್ ಸಿಗದಿರುವ ಕಾರಣಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುಕ್ರವಾರ ಇಲ್ಲಿ ಬೆಂಬಲಿಗರು, ಅಭಿಮಾನಿಗಳಿಂದ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದ ಅವರು, ಕೊನೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು. ಈ ವೇಳೆ ಬೆಂಬಲಿಗರು ಜಯಘೋಷ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರಿಗಿಂತ ಗುಲಗಂಜಿಯಷ್ಟಾದರೂ ನಾನು ತೂಕ ಹೆಚ್ಚಿರುವೆ. ಹೀಗಾಗಿ ಪ್ರಧಾನಿ ನರೆಂದ್ರ ಮೋದಿ ಅವರ ಪರವಾಗಿ ಚುನಾವಣೆಗೆ ನಿಲ್ಲುತ್ತಿರುವೆ. ಇದು ಉದ್ವೇಗದಲ್ಲಿ ಕೈಗೊಳ್ಳುತ್ತಿರುವ ತೀರ್ಮಾನ ಅಲ್ಲ. ಸಿದ್ಧಾಂತ ಉಳಿಸಬೇಕು. ಮತ್ತೊಂದು ಕಾಂಗ್ರೆಸ್ ಪಕ್ಷ ಆಗದಂತೆ ಬಿಜೆಪಿಯನ್ನು ತಡೆಯಬೇಕು ಎಂದು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ನೋಟಿಸ್ ಕೊಡಬಹುದು ಇಲ್ಲವೇ ಉಚ್ಛಾಟನೆ ಮಾಡಬಹುದು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎರಡು ತಿಂಗಳಲ್ಲಿಯೇ ಮತ್ತೆ ಬಿಜೆಪಿಗೆ ಮರಳಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾಷಣದ ಉದ್ದಕ್ಕೂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದ ಅವರು, ನನ್ನ ಹೃದಯ ಬಗೆದರೆ ಅಲ್ಲಿ ಶ್ರೀರಾಮ ಹಾಗೂ ನರೇಂದ್ರ ಮೋದಿ ಕಾಣಸಿಗುತ್ತಾರೆ. ಯಡಿಯೂರಪ್ಪ ಅವರ ಎದೆ ಬಗೆದರೆ ಅಲ್ಲಿ ಅವರ ಮಕ್ಕಳು ಹಾಗೂ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಕಾರ್ಯಕರ್ತರು ಮಾತಾಡಿಕೊಳ್ಳುತ್ತಾರೆ ಎಂದು ಛೇಡಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತ ರೀತಿ ಆಗಲಿದೆ. ಹೀಗಾಗಿ ಕಾಂತೇಶ ಅವರಿಗೇ ಹಾವೇರಿ ಕ್ಷೇತ್ರದಿಂದ ಟಿಕೆಟ್ ಗೆ ಪ್ರಯತ್ನಿಸೋಣ ಎಂದು ಬೆಂಬಲಿಗರು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ ಭಾಗವತ್, ಈಶ್ವರಪ್ಪ ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳಲಿ. ಯಾವುದೇ ಆವೇಶದ ಮಾತುಗಳು ಕೆಲಸ ಮಾಡೊಲ್ಲ. ಇದು ನರೇಂದ್ರ ಮೋದಿ ಚುನಾವಣೆ. ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಮೋದಿ ವಿರುದ್ಧ ಸ್ಪರ್ಧಿಸಿದಂತಾಗುತ್ತದೆ. ಮಗ ಕಾಂತೇಶ ಹಾಗೂ ಅವರ ಭವಿಷ್ಯದ ದೃಷ್ಟಿಯಿಂದ ಯಾವುದೇ ದುಡುಕಿನ ತೀರ್ಮಾನ ಬೇಡ ಎಂದರು.

ಆರ್ಯ ಈಡಿಗ ಸಮುದಾಯದ ಮುಖಂಡ ಸುರೇಶ ಬಾಳೇಗುಂಡಿ ಮಾತನಾಡಿ, ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಕೊಡಿಸುವ ಶಕ್ತಿ ಈಶ್ವರಪ್ಪ ಅವರಿಗೆ ಈಗಲೂ ಇದೆ. ಟಿಕೆಟ್ ಗಾಗಿ ಬಸವರಾಜ ಬೊಮ್ಮಾಯಿ ಅರ್ಜಿ ಹಾಕಿ ಅಳುತ್ತಾ ಕೂತಿಲ್ಲ. ನರೇಂದ್ರ ಮೋದಿ ವಿರುದ್ಧ ಚುನಾವಣೆ ಬೇಡ ಎಂಬುದು ಈಗಲೂ ನಮ್ಮ ಒತ್ತಾಸೆ. ಹೇಗೂ ಮಾರ್ಚ್ 18ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಹಾವೇರಿಗೆ ಕಾಂತೇಶಗೆ ಟಿಕೆಟ್ ಅವರ ಬಳಿ ಕೇಳೋಣ ಎಂದರು

ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಗಜೇಂದ್ರನಾಥ ಮಾಳವದೆ ಮಾತನಾಡಿ,

ಈಶ್ವರಪ್ಪ ಅವರನ್ನು ಗೆಲ್ಲಿಸ್ತೀವೊ ಬಿಡ್ತಿವೊ ಗೊತ್ತಿಲ್ಲ ಆದರೆ ಅವರಿಗೆ ಅನ್ಯಾಯ ಮಾಡಿದವರನ್ನು ಸೋಲಿಸುತ್ತೇವೆ. ಈಶ್ವರಪ್ಪ ನಮ್ಮ ಸಮಾಜದ ಮಗ ಆಗಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಂಡರೂ ಬೆನ್ನ ಹಿಂದೆ ಇರುತ್ತೇವೆ.

ಒಬ್ಬ ಪುತ್ರನ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ, ಮತ್ತೊಬ್ಬರನ್ನು ಕೇಂದ್ರ ಸಚಿವನಾಗಿಸಲು ಹೊರಟಿರುವ ಯಡಿಯೂರಪ್ಪ, ಬೇರೆಯವರ ಮಕ್ಕಳನ್ನು ಬೆಳೆಸುವ ದೊಡ್ಡ ಮನಸ್ಸು ಮಾಡಬಹುದಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT