ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ದಂಧೆ | ನನ್ನ ಬಳಿ ದಾಖಲೆಗಳಿವೆ; ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ

Published 24 ನವೆಂಬರ್ 2023, 13:14 IST
Last Updated 24 ನವೆಂಬರ್ 2023, 13:14 IST
ಅಕ್ಷರ ಗಾತ್ರ

ಹಾವೇರಿ: ‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಎಷ್ಟೆಷ್ಟು ಲಂಚ ಪಡೆದು ಉನ್ನತ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿದರೆ ದಾಖಲೆಗಳನ್ನು ಕೊಡುತ್ತೇನೆ’ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಹಲೋ ಅಪ್ಪ.. ವಿಡಿಯೊದ ಸಂಭಾಷಣೆಯನ್ನು ಗಮನಿಸಿದರೆ ಅದು ವರ್ಗಾವಣೆ ದಂಧೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿದರೆ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರರ ಹಣೆಬರಹ ಏನೆಂಬುದು ಗೊತ್ತಾಗುತ್ತದೆ’ ಎಂದು ಕುಟುಕಿದರು. 

ಡಿಕೆಶಿ ರಾಜೀನಾಮೆ ನೀಡಲಿ: ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ ಬಿಜೆಪಿ ಸರ್ಕಾರದ ಆದೇಶವನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯುವ ಮೂಲಕ ‘ಸಚಿವ ಸಂಪುಟದ ಪಾವಿತ್ರ್ಯತೆ’ಯನ್ನು ಹಾಳು ಮಾಡಿದೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಡಿ.ಕೆ.ಶಿವಕುಮಾರ್‌ ತಿಹಾರ್‌ ಜೈಲಿನಲ್ಲಿರುತ್ತಾರೆ. ಆರೋಪ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

‘ಎಂಟು ವರ್ಷಗಳ ಹಿಂದೆ ಜಾತಿ ಜನಗಣತಿ ವರದಿ ಯಾವಾಗ ಬಿಡುಗಡೆ ಮಾಡ್ತೀರಿ’ ಅಂತ ಸಿದ್ದರಾಮಯ್ಯ ಅವರನ್ನು ಕೇಳಿದ್ದೆ. ‘ಎಲ್ಲಾ ಸಿದ್ಧವಿದೆ, ಬೈಂಡ್ ಮಾಡಿಸ್ತಿದೀವಿ’ ಎಂದಿದ್ದರು. ಈಗ ಮೂಲ ಪ್ರತಿ ಕಳೆದಿದೆ ಅಂತ ಕೆಲವರು ಹೇಳುತ್ತಾ ಇದ್ದಾರೆ. ‘ಹಿಂದುಳಿದ ವರ್ಗಗಳ ಚಾಂಪಿಯನ್‌’ ಎನಿಸಿಕೊಳ್ಳಲು ಸಿದ್ದರಾಮಯ್ಯನವರು ಜಾತಿ ಜನಗಣತಿ ಮಾಡಿಸಲು ₹163 ಕೋಟಿ ಹಾಳು ಮಾಡಿದರು. ಜಾತಿ–ಜಾತಿಗಳ ಮಧ್ಯೆ ಕಾಂಗ್ರೆಸ್‌ ಪಕ್ಷ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು. 

ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್‌ ಪಡೆದದ್ದು ಕಾಂಗ್ರೆಸ್‌ ಸರ್ಕಾರ ಬೀಳುವ ಮೊದಲ ಹೆಜ್ಜೆಯಾದರೆ, ಜಾತಿ ಜನಗಣತಿಯ ವಿವಾದ ಎರಡನೇ ಹೆಜ್ಜೆಯಾಗಲಿದೆ ಎಂದರು. 

ಯತ್ನಾಳ್‌ ಹೇಳಿಕೆಗೆ ಸಮರ್ಥನೆ: ವಿಜಯೇಂದ್ರ ವಿರುದ್ಧ ಯತ್ನಾಳ ಭಿನ್ನಾಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ ಒಂದು ಕುಟುಂಬವಿದ್ದಂತೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಮನಸ್ಸಿನ ಭಾವನೆ ಹೇಳಿಕೊಂಡಿದ್ದಾರೆ. ಅವರು ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿದವರಲ್ಲ. ನಮ್ಮದು ಶಿಸ್ತಿನ ಪಕ್ಷ. ಮಾಧ್ಯಮದ ಮುಂದೆ ಹೇಳಿಕೆ ನೀಡುವುದನ್ನು ಬಿಟ್ಟು, ಪಕ್ಷದ ಚೌಕಟ್ಟಿನೊಳಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಯತ್ನಾಳ್‌ಗೆ ಈ ಹಿಂದೆ ಹೇಳಿದ್ದೆ. ಮಾಧ್ಯಮದ ಮುಂದೆ ಮಾತನಾಡುವುದು ಯತ್ನಾಳ್‌ ಅಭ್ಯಾಸ’ ಎಂದು ಯತ್ನಾಳ್‌ ಹೇಳಿಕೆ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT