ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ರಾಷ್ಟ್ರಮಟ್ಟದ ದಾಳಿಂಬೆ ಕ್ಲಸ್ಟರ್‌ಗೆ ಸೇರ್ಪಡೆ

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಯ ಬೀಜಾಂಕುರ, ಹೆಚ್ಚುವರಿ 3 ಸಾವಿರ ಎಕರೆಯಲ್ಲಿ ಬೆಳೆ ತೆಗೆಯುವ ಗುರಿ
Published 27 ಆಗಸ್ಟ್ 2024, 11:35 IST
Last Updated 27 ಆಗಸ್ಟ್ 2024, 11:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದ್ದು, ಜಿಲ್ಲೆಯ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿಗಳೂ ಅದರಲ್ಲಿ ಸೇರಿವೆ. ಕೃಷಿಕರಿಗೆ ಬೀಜದಿಂದ ಮಾರುಕಟ್ಟೆವರೆಗೆ ಎಲ್ಲಾ ಸೌಲಭ್ಯ ಒದಗಿಸಿ ಬೆಳೆ ಉತ್ತೇಜನ ಕೆಲಸ ನಾಲ್ಕು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದರು.

‘ದೇಶದಲ್ಲಿ 53 ಕ್ಲಸ್ಟರ್‌ ಪೈಕಿ ಸದ್ಯ 12 ಕ್ಲಸ್ಟರ್‌ಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳು, ತುಮಕೂರು ಜಿಲ್ಲೆಯ ಶಿರಾ ಹಾಗೂ ವಿಜಯನಗರ ಜಿಲ್ಲೆಯ ಎರಡು ತಾಲ್ಲೂಕುಗಳು ಸೇರಿ ಒಟ್ಟು ಒಂಭತ್ತು ತಾಲ್ಲೂಕುಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಅಸೋಸಿಯೇಟೆಡ್‌ ಇಂಡಸ್ಟ್ರಿಯಲ್‌ ಕಾರ್ಪೊರೇಷನ್‌ (ಎಐಸಿ) ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಅವರು ತಿಳಿಸಿದರು.

‘ಐದು ವರ್ಷಗಳ ಯೋಜನೆ ಇದು. ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕ್ಯಾಪ್ಟೆಕ್‌) ಮತ್ತು ಎಐಸಿಗಳ ತ್ರಿಪಕ್ಷೀಯ ಸಹಯೋಗದಲ್ಲಿ ಯೋಜನೆ ಜಾರಿಗೆ ಬರಲಿದೆ. ವಿಜಯನಗರ ಜಿಲ್ಲೆಯಲ್ಲಿ 3 ಸಾವಿರ ಎಕರೆ ಸಹಿತ ಒಟ್ಟು 15 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಹೆಚ್ಚುವರಿಯಾಗಿ ರಾಸಾಯನಿಕ ಮುಕ್ತ ದಾಳಿಂಬೆ ಬೆಳೆದು ರಫ್ತಿಗೆ ಉತ್ತೇಜಿಸುವುದು ಯೋಜನೆಯಲ್ಲಿ ಸೇರಿದೆ’ ಎಂದು ಮಾಹಿತಿ ನೀಡಿದರು.

ಎಐಸಿ ಸಂಸ್ಥೆಯ ಸಮಾಲೋಚಕ ಮನೋಜ್‌ ಕುಶಾಲಪ್ಪ ಮಾತನಾಡಿ, ದಾಳಿಂಬೆ ಕೃಷಿಕರಿಗೆ ಸರ್ವ ರೀತಿಯಲ್ಲಿ ಸೌಲಭ್ಯ ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಚಿತ್ರದುರ್ಗದಲ್ಲಿ ಪ್ರಧಾನ ಕಚೇರಿ ಇರಲಿದ್ದು, ಯೋಜನಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಸಹ ಸಲಹಾ ಕಚೇರಿ ಇರಲಿದೆ. ಕೃಷಿಕರಿಗೆ ಯಾವುದೇ ಅಲೆದಾಟದ ಕಷ್ಟ ಇಲ್ಲದೆ, ಎಲ್ಲಾ ವ್ಯವಸ್ಥೆಗಳನ್ನು ಸಂಸ್ಥೆ ಮಾಡಿಕೊಡಲಿದೆ ಎಂದರು.

ದಾಳಿಂಬೆ ಬೆಳೆಯ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ಒದಗಿಸಲು ‘ಸುರಕ್ಷಾ ಆ್ಯಪ್‌’ ಸಿದ್ಧಪಡಿಸಲಾಗಿದ್ದು, ಈಗಾಗಲೇ ಕಾರ್ಯಾಚರಿಸುತ್ತಿದೆ. ಈಗಾಗಲೇ ದಾಳಿಂಬೆ ಬೆಳೆಯುವವರು ಹಾಗೂ ಹೊಸದಾಗಿ ಬೆಳೆಯುವವರು ನೋಂದಣಿ ಮಾಡಿಕೊಂಡರೆ ಸಂಸ್ಥೆಯೇ ಎಲ್ಲ ನೆರವು ಒದಗಿಸುತ್ತದೆ ಎಂದರು.

ಎಐಸಿ ಸಂಸ್ಥೆಯ ತಂಡ ನಾಯಕ ಎಂ.ಚಂದ್ರಶೇಖರ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಎಚ್‌.ರಾಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT