ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಲಿಂಗಾಯತರ ‘ಘರ್ ವಾಪಸಿ’ ‘ಕೈ’ಗೆ ಬಲ: ಎಂ.ಬಿ. ಪಾಟೀಲ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ವಿಶ್ವಾಸ
Published 3 ಮೇ 2023, 19:51 IST
Last Updated 3 ಮೇ 2023, 19:51 IST
ಅಕ್ಷರ ಗಾತ್ರ

ರಾಜೇಶ್‌ ರೈ ಚಟ್ಲ

ಬೆಂಗಳೂರು: ‘ಬಿಜೆಪಿ ರಹಸ್ಯ ಕಾರ್ಯಸೂಚಿ ಲಿಂಗಾಯತರಿಗೆ ಅರ್ಥವಾಗಿದೆ. ಹೀಗಾಗಿ, ಲಿಂಗಾಯತರ ‘ಘರ್‌ ವಾಪಸಿ’ (ಮರಳಿ ಮನೆಗೆ– ಕಾಂಗ್ರೆಸ್ಸಿಗೆ) ಆರಂಭವಾಗಿದೆ. ಈ ಬಾರಿ ಶೇ 50ರಷ್ಟು ಲಿಂಗಾಯತರು ಕಾಂಗ್ರೆಸ್‌ ಪರ ನಿಲ್ಲುತ್ತಾರೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಪ್ರತಿಪಾದಿಸಿದರು.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ

ಲಿಂಗಾಯತ ವಿಚಾರ ಈ ಬಾರಿಯೂ ಚುನಾವಣಾ ಅಖಾಡದಲ್ಲಿ ಮುನ್ನೆಲೆಯಲ್ಲಿದೆಯಲ್ಲವೇ?

ಕಳೆದ ಚುನಾವಣೆಯಲ್ಲಿ (2018) ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಮುಂದಿಟ್ಟು ನಮ್ಮ (ಕಾಂಗ್ರೆಸ್‌) ವಿರುದ್ಧ ಸುಳ್ಳುಗಳನ್ನು ಹರಡಲಾಗಿತ್ತು. ಆದರೂ ನಮಗೆ (ಲಿಂಗಾಯತರಿಗೆ) ಕಾಂಗ್ರೆಸ್‌ ಕೊಟ್ಟಿದ್ದ 43 ಸೀಟುಗಳಲ್ಲಿ 17 ಗೆದ್ದಿದ್ದೆವು. ಈ ಬಾರಿಯ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ.

ಪ್ರ

ನಿಮ್ಮ ಈ ವಿಶ್ವಾಸಕ್ಕೆ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದು, ಅವರು ಕಾಂಗ್ರೆಸ್‌ ಸೇರಿದ್ದೂ ಕಾರಣವೇ?

ಬಿಜೆಪಿಯೊಳಗೆ ಲಿಂಗಾಯತ ನಾಯಕರ ವಿರುದ್ಧದ ಕಾರ್ಯಸೂಚಿ ಕೆಲಸ ಮಾಡುತ್ತಿದೆ. ಶೆಟ್ಟರ್‌, ಸವದಿಗೆ ಟಿಕೆಟ್‌ ನಿರಾಕರಿಸಲು ಆ ಕಾರ್ಯಸೂಚಿಯೇ ಕಾರಣ. ಅವರಿಬ್ಬರನ್ನೂ ಸೋಲಿಸಲು ಯಡಿಯೂರಪ್ಪ ಅವರಿಗೆ ಸುಪಾರಿ ನೀಡಲಾಗಿದೆ. ಸವದಿ, ಶೆಟ್ಟರ್ ಅವರನ್ನು ಮುಗಿಸಲು ಸಂತೋಷ್, ಜೋಶಿ ಹೋಗಬಹುದಿತ್ತಲ್ಲವೇ? ಒಬ್ಬ ಲಿಂಗಾಯತ ಮುಖಂಡನನ್ನು ನಾಶ ಮಾಡಲು ಇನ್ನೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಬಳಸಿದೆ. ಚುನಾವಣೆಯಲ್ಲಿ ಈ ವಿಷಯ ಒಳಸುಳಿಯಾಗಿ ಪರಿಣಾಮ ಬೀರಲಿದೆ.

ಪ್ರ

ಹಾಗಾದರೆ ಶೆಟ್ಟರ್‌, ಸವದಿಯಿಂದ ಕಾಂಗ್ರೆಸ್‌ಗೆ ಲಾಭ ಎಂದಾಯಿತು...

ನಿಶ್ಚಿತವಾಗಿ.‌ ‘ಆಪರೇಷನ್‌ ಕಮಲ’ವೆಂಬ ಅನಿಷ್ಠ ಪದ್ಧತಿ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಬಿಜೆಪಿಯವರು. ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದರು. ಆ ಬಳಿಕ ಅವರನ್ನು ಕಿತ್ತು ಹಾಕಿದರು. ‌ಈ ವಿಷಯ ಪ್ರಸ್ತಾಪಿಸಿದರೆ, ವೀರೇಂದ್ರ ಪಾಟೀಲರ ಹೆಸರನ್ನು ಬಿಜೆಪಿಯವರು ಪ್ರಸ್ತಾಪಿಸುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸದೆ ಬೇರೆ ದಾರಿಯೇ ಇರಲಿಲ್ಲ. ಲಿಂಗಾಯತ ಮುಖ್ಯಮಂತ್ರಿಯೊಬ್ಬರು ಅಸ್ವಸ್ಥರಾಗಿದ್ದಾರೆಂಬುದನ್ನು ಮರೆಮಾಚುವ ಮೂಲಕ ಕಾಂಗ್ರೆಸ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದೆ ಎಂದು ಭಾರಿ ಅಪಪ್ರಚಾರ ಮಾಡಿದ್ದರಿಂದ ಈ ಹಿಂದೆ ಲಿಂಗಾಯತ ಮತಗಳು ಜನತಾ ಪಕ್ಷಕ್ಕೆ, ನಂತರ ಬಿಜೆಪಿಗೆ ಹೋಗಲು ಕಾರಣವಾಯಿತು. ಯಡಿಯೂರಪ್ಪ ಅವರನ್ನು ತೆಗೆಯುವಾಗ ಅನಾರೋಗ್ಯ ಇತ್ತೇ?

ಪ್ರ

ಯಡಿಯೂರಪ್ಪ ಅವರನ್ನು ತೆಗೆದರೂ ಇನ್ನೊಬ್ಬ ಲಿಂಗಾಯತ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಿದ್ದಾರಲ್ಲ?

ಒಬ್ಬ ಲಿಂಗಾಯತನನ್ನು ತೆಗೆದು ಇನ್ನೊಬ್ಬ ಲಿಂಗಾಯತನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಬಿಜೆಪಿಯವರದ್ದು ಆಗಿರಲಿಲ್ಲ. ಬೊಮ್ಮಾಯಿ ಅವರು ಆ್ಯಕ್ಸಿಡೆಂಟಲ್‌ ಚೀಫ್‌ ಮಿನಿಸ್ಟರ್‌. ಲಿಂಗಾಯತ ಸಮುದಾಯ ಮತ್ತು ವೀರಶೈವ ಮಹಾಸಭಾದ ಪ್ರತಿಭಟನೆಯ ನಂತರ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ಲ.ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲ್ಲ. ಈ ವಿಚಾರದಲ್ಲಿ ಹಿಂದೆ  ಕುಮಾರಸ್ವಾಮಿ ಹೇಳಿದ್ದು ಸತ್ಯ ಅನ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT