ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಬಳ ಕಡಿತಗೊಳಿಸಿ, ಕೆಲಸದಿಂದ ತೆಗೆಯಬೇಡಿ: ಐಟಿ ಕಂಪನಿಗಳಿಗೆ ಸರ್ಕಾರದ ಸೂಚನೆ

ಫಾಲೋ ಮಾಡಿ
Comments

ಬೆಂಗಳೂರು: ಇದೇ ತಿಂಗಳ 20ನೇ ತಾರೀಕಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಐಟಿ, ಬಿಟಿ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಐಟಿ- ಬಿಟಿ ಸಿಬ್ಬಂದಿಗೆ ಪಾಸ್‌, ಸಂಪರ್ಕ ಸಾರಿಗೆ ವ್ಯವಸ್ಥೆ, ಸ್ಕ್ರೀನಿಂಗ್‌, ಇಂಟರ್ನೆಟ್‌ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೆಲಸದಿಂದ ತೆಗೆಯಬೇಡಿ

‘ಯಾವುದೇ ಹೊಸ ಕೆಲಸದ ಆರ್ಡರ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಂಪನಿ ಬಾಗಿಲು ಹಾಕುವುದು, ಅಥವಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರಿ ಅಲ್ಲ. ಏಕೆಂದರೆ ಈಗ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿ ಮುಚ್ಚುವ ಬದಲು ಸಂಬಳ ಕಡಿತ ಮುಂತಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಎಲ್ಲ ಕಂಪನಿಗಳು ಇದೇ ನಿಯಮ ಪಾಲಿಸಬೇಕು’ ಎಂದು ಹೇಳಿದರು.

ಸೋಂಕು ನಿರ್ವಹಣೆ:ಕಚೇರಿಗಳು ಆರಂಭವಾದ ನಂತರ ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು, ಈ ಸಂಬಂಧ ಸೂಕ್ತ ಮಾರ್ಗದರ್ಶನ ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೋರಿದ್ದಾರೆ. ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಭರವಸೆ ನೀಡಲಾಗಿದೆ. ಕಂಪನಿಗಳು ಸಹ ಸ್ವಚ್ಛತೆ, ಸಾಮಾಜಿಕ ಅಂತರ, ಸೋಂಕಿನ ತಪಾಸಣೆಯಂಥ ಕ್ರಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ ಎಂದು ಹೇಳಿದರು.

ನಿರ್ಬಂಧ ಸಡಿಲಿಕೆ ಆದ ಕೂಡಲೇ ಸೋಂಕು ಹರಡುವ ಸಾಧ್ಯತೆ ಹೆಚ್ಚಬಹುದು. ಇಷ್ಟು ದಿನ ಮುಂಜಾಗ್ರತೆ ವಹಿಸಿ ಸೋಂಕು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಕರೊನಾ ಜತೆ ಬದುಕುವುದನ್ನು ಕಲಿಯಬೇಕಾಗುತ್ತದೆ. ಜನರಲ್ಲಿ ಸಹ ಈ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಜತೆಗೆ ತಪಾಸಣೆ ಹೆಚ್ಚಿಸಿ ಸೋಂಕು ಪತ್ತೆ ಆದರೆ, ಅಂಥವರನ್ನು ಚಿಕಿತ್ಸೆ ನೀಡುವ ಮೂಲಕ ಇನ್ನೂ ಪರಿಸ್ಥಿತಿ ನಿರ್ವಹಣೆ ಮಾಡಲಾಗುವುದು ಎಂದರು.

ಪಾಸ್‌ ವ್ಯವಸ್ಥೆ:‘ಐಟಿ ಬಿಟಿ ಉದ್ಯೋಗಿಗಳಿಗೆ ಪಾಸ್‌ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. 20ನೇ ತಾರೀಕಿನ ನಂತರ ಕೆಲ ಅಗತ್ಯ ಸೇವೆಗಳ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದು, ಸರ್ಕಾರವೇ ಅದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು. ಉಳಿದಂತೆ ಬಂದ್‌ ಮುಂದುವರಿಯಲಿದೆ. ಟಾಕ್ಸಿ ಇರುವುದಿಲ್ಲ, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರದು. ಸಾರ್ವಜನಿಕ ಸ್ಥಳಗಳು ಬಂದ್‌ ಆಗಿರುವುದರಿಂದ ಪಾಸ್‌ ವ್ಯವಸ್ಥೆ ಇರುವುದೇ ಅನುಮಾನ. ಬೈಕ್‌ನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು ಓಡಾಡಲು ಕೇಂದ್ರ ಗೃಹ ಇಲಾಖೆ ಅವಕಾಶ ಕಲ್ಪಿಸಿದೆ. ಅಂತರ್‌ ರಾಜ್ಯ ಹಾಗೂ ಬೇರೆ ಜಿಲ್ಲೆಗೆ ಪ್ರಯಾಣದ ನಿರ್ಬಂಧ ಮುಂದುವರಿಯುವುದು. ಯಾವುದೇ ಮಾಲ್‌, ರೆಸ್ಟೋರೆಂಟ್‌, ಶಾಲೆ, ಕಾಲೇಜು ಇರುವುದಿಲ್ಲ. ಹಾಗಾಗಿ ಓಡಾಟ ಕಡಿಮೆಯೇ ಇರುತ್ತದೆ ಎಂದು ತಿಳಿಸಿದರು.

ಸಾರಿಗೆ ವ್ಯವಸ್ಥೆ:ಟ್ಯಾಕ್ಸಿ ವ್ಯವಸ್ಥೆ ಇರದ ಕಾರಣ ಬಿಎಂಟಿಸಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಬಹುದು. ಸೋಂಕು ರಹಿತವಾಗಿಸಿದ ಬಸ್‌ಗಳನ್ನು ಸಿಬ್ಬಂದಿ ಪ್ರಯಾಣಕ್ಕೆ ಬಳಸಿಕೊಳ್ಳಬಹುದು. ಅಲ್ಲೂ ಸಹ ಶುಚಿತ್ವ, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಲು ಮಾರ್ಗದರ್ಶನ ನೀಡಲಾಗುವುದು ಎಂದರು.

ಬೆಂಗಳೂರಿನ ಸಾಧನೆ ಬಗ್ಗೆ ಹೆಮ್ಮೆ
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಹಕಾರದ ಬಗ್ಗೆ ಐಟಿ-ಬಿಟಿ ಕಂಪನಿಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅದೇ ರೀತಿ ಕಂಪನಿಗಳು ಸಹ ತಮ್ಮ ಕೆಲಸ ಮುಂದುವರಿಸಿ, ಉತ್ತಮ ಸೇವೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ. ಬೇರೆ ಎಲ್ಲ ದೇಶಗಳ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಈ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂಬ ಹೆಗ್ಗಳಿಕೆ ಇದೆ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌, ವಿಜಿಐಟಿಯ ಕ್ರಿಸ್‌ ಗೋಪಾಲಕೃಷ್ಣನ್‌, ಆಕ್ಸಲ್‌ ಪಾರ್ಟರ್‌ನ ಪ್ರಶಾಂತ್‌ ಪ್ರಕಾಶ್‌, ಏಬಲ್‌ ಇಂಡಿಯಾದ ಶ್ರೀಕುಮಾರ್‌ ಸೂರ್ಯನಾರಾಯಣ್‌, ಬಿಎಸ್‌ಎನ್‌ಎಲ್‌ನ ಪ್ರಕಾಶ್‌ ಗೋಪಾಲನಿ ಸೇರಿದಂತೆ ಐಟಿ-ಬಿಟಿ ಕ್ಷೇತ್ರದ ಪ್ರಮುಖರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT