ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ಕೆಲವು ಮಂದಿಯ ಹಿಡಿತದಲ್ಲಿ ಬಿಜೆಪಿ:‌ ಜಗದೀಶ್‌ ಶೆಟ್ಟರ್ ಮಾರ್ಮಿಕ ನುಡಿ

Published 10 ಜೂನ್ 2023, 8:33 IST
Last Updated 10 ಜೂನ್ 2023, 8:33 IST
ಅಕ್ಷರ ಗಾತ್ರ

ಮೈಸೂರು: ‘ಕೆಲವು ವ್ಯಕ್ತಿಗಳ ಹಿಡಿತದಲ್ಲಿರುವ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಪಾಠ ಕಲಿತಿದೆ. ಈ ಸೋಲಿನಿಂದಲೂ ಬಿಜೆಪಿ ಬುದ್ಧಿ ಕಲಿಯದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಾಠ ಕಲಿಯಲಿದೆ’ ಎಂದು ಕಾಂಗ್ರೆಸ್ ಮುಖಂಡ ಜಗದೀಶ್‌ ಶೆಟ್ಟರ್ ಮಾರ್ಮಿಕವಾಗಿ ನುಡಿದರು.

ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್‌. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ಪೀಠ ಇಲ್ಲಿನ ವಿಶ್ವಜ್ಞಾನಿ ಸಭಾಂಗಣದಲ್ಲಿ ಏರ್ಪಡಿಸಿದ್ದ 16ನೇ ‘ವಿಧಾನಸಭೆ ಚುನಾವಣೆ: ಪ್ರಭಾವ, ಪರಿಣಾಮ ಮತ್ತು ಭವಿಷ್ಯದ ರಾಜಕೀಯ ಆಯಾಮಗಳು’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ‘ರಾಜ್ಯ ಬಿಜೆಪಿ ಈಗಲೂ ಅದೇ ಕೆಲವು ಮಂದಿಯ ಹಿಡಿತದಲ್ಲೇ ಇದೆ. ಯಾವುದೇ ರಾಜಕೀಯ ಪಕ್ಷವಿರಲಿ ಅದು ವ್ಯಕ್ತಿಗಳ ಹಿಡಿತದಲ್ಲಿ ಇರಬಾರದು’ ಎಂದರು.

‘ಯಾವುದೇ ರಾಜಕೀಯ ಪಕ್ಷ ಬೆಳೆಯಲು ನಾಲ್ಕೈದು ಮಂದಿಯ ಸ್ಥಳೀಯ ನಾಯಕತ್ವ ಅಗತ್ಯಗತ್ಯ. ರಾಮಮಂದಿರ ಚಳವಳಿಯ ಆರಂಭವಾದ ನಂತರ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಕಂಡಿತು. ಆದರೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಚಳವಳಿ ಬಿಜೆಪಿ ಬೆಳವಣಿಗೆಗೆ ಕಾರಣವಾಗಲಿಲ್ಲ. ಕರ್ನಾಟಕದಲ್ಲಿ ಪಕ್ಷಕ್ಕೆ ಮುಖಂಡರ ನಾಯಕತ್ವ ಇತ್ತು, ಆದರೆ ದಕ್ಷಿಣದ ಉಳಿದ ರಾಜ್ಯಗಳಲ್ಲಿ ಈ ನಾಯಕತ್ವದ ಕೊರತೆ ಇತ್ತು. ನರೇಂದ್ರ ಮೋದಿ ಅವರ ಪ್ರಭಾವ ಇದ್ದರೂ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸದೆ ಇರಲು ಸಹ ನಾಯಕತ್ವದ ಇಲ್ಲದೇ ಇರುವುದೇ ಕಾರಣ’ ಎಂದು ಅವರು ವಿಶ್ಲೇಷಿಸಿದರು.

‘ಬೆಲೆ ಏರಿಕೆ, ನಿರುದ್ಯೋಗ, ವಸತಿ ಸಮಸ್ಯೆ ಹೀಗೆ ಹಲವು ವಿಷಯಗಳು ವಿಧಾನಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಲು ಕಾರಣ. ಅದರೊಂದಿಗೆ ಕಾಂಗ್ರೆಸ್ ನೀಡಿದ ‘ಗ್ಯಾರಂಟಿ’ ಸಹ ಕೆಲಸ ಮಾಡಿತು. ಈಗಿನ ಸರ್ಕಾರ ಯಾವುದೇ ಗೊಂದಲ ಇಲ್ಲದೆ ಪ್ರಾಮಾಣಿಕವಾಗಿ ಜನಪರ ಆಡಳಿತ ನೀಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿಯೂ ಅಧಿಕಾರ ಹಿಡಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಹಿಂದೆ ಕಾಂಗ್ರೆಸ್ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಎಂಬ ಸ್ಥಿತಿ ಇತ್ತು, ಈಗ ಇದು ಉಲ್ಟಾ ಆಗಿದ್ದು, ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಎಂಬ ವಾತಾವರಣ ಇದೆ. ದೇಶದಲ್ಲಿ 142 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ವಿರೋಧ ಪಕ್ಷಗಳು ಒಂದಾಗದಿದ್ದರೆ 2018ರ ಲೋಕಸಭಾ ಚುನಾವಣೆಯ ಫಲಿತಾಂಶ ಮರುಕಳಿಸಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

‘ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ಇದ್ದು, ಒಗ್ಗಟ್ಟು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ... ಬಿಜೆಪಿ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಸಂಚು: ತೇಜಸ್ವಿ ಸೂರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT