ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸುತ್ತೇನೆ: ಸಿಎಂ ಸಿದ್ದರಾಮಯ್ಯ

Published 6 ಜನವರಿ 2024, 5:40 IST
Last Updated 6 ಜನವರಿ 2024, 5:40 IST
ಅಕ್ಷರ ಗಾತ್ರ

ಬೆಂಗಳೂರು: ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. ‘ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ’ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ಎಚ್.ಡಿ. ದೇವೇಗೌಡ ಅವರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ‘ಸಂಘ’ ದೋಷದ ಫಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ ಎಚ್.ಡಿ. ದೇವೇಗೌಡ ಅವರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ. ಆದರೆ ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಜಾತ್ಯತೀತ ಜನತಾ ಪಕ್ಷ ಎನ್ನುವುದು ‘ಬಿಜೆಪಿಯ ಬಿ ಟೀಮ್’ ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿತಪ್ಪುವುದನ್ನು ಜೆಡಿಎಸ್ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ. ಜಾತ್ಯತೀತತೆ ಮತ್ತು ಸೌಹಾರ್ದತೆಯ ಪರಂಪರೆಯ ಕರ್ನಾಟಕದ ಮತದಾರರು ಮುಂದಿನ ಚುನಾವಣೆಗಳಲ್ಲಿ ಸರಿಯಾದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ’ ಎಂದು ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT