ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ವಾರದೊಳಗೆ ಸೀಟು ಹಂಚಿಕೆ ಅಂತಿಮ: ಎಚ್‌.ಡಿ. ದೇವೇಗೌಡ

Published 4 ಮಾರ್ಚ್ 2024, 15:42 IST
Last Updated 4 ಮಾರ್ಚ್ 2024, 15:42 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ಮತ್ತು ಬಿಜೆಪಿ ಮಧ್ಯೆ ಲೋಕಸಭಾ ಕ್ಷೇತ್ರಗಳ ಹಂಚಿಕೆಯ ಚರ್ಚೆ ಅಂತಿಮ ಹಂತದಲ್ಲಿದೆ. ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ತಿಳಿಸಿದರು.

ಸೋಮವಾರ ನಡೆದ ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಅವರ ಅಧಿಕಾರ ಸ್ವೀಕಾರ ಸಮಾರಂಭದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸೀಟು ಹಂಚಿಕೆ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜತೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಇನ್ನೊಂದು ಸುತ್ತಿನ ಚರ್ಚೆಯಲ್ಲಿ ಎಲ್ಲವೂ ಅಂತಿಮವಾಗಲಿದೆ’ ಎಂದರು.

‘ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಜೆಡಿಎಸ್‌ ನಾಯಕರ ಅಭಿಪ್ರಾಯ ಕೇಳಬಹುದು. ಆಗ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇವೆ. ಮೈತ್ರಿ ಧರ್ಮವನ್ನು ನಾವು ಪಾಲಿಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಪೂರಕವಾಗಿ ಬಿಜೆಪಿ ಜತೆ ಸೇರಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಸಿಗುತ್ತವೆ ಎಂಬುದು ಸೀಟು ಹಂಚಿಕೆಯಲ್ಲಿ ನಿರ್ಧಾರವಾಗಲಿದೆ. ಕುಮಾರಸ್ವಾಮಿ ಸ್ಪರ್ಧಿಸಬೇಕೆ? ಬೇಡವೆ? ಎಂಬುದನ್ನು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡಲಾಗುವುದು’ ಎಂದರು.

‘ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತು ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದ್ದು, ಸಂಘಟನೆ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ ಪಕ್ಷದ ಸಮಾವೇಶ ಮಾಡುತ್ತೇವೆ’ ಎಂದು ಹೇಳಿದರು.

‘ಒಂದಷ್ಟು ಜನರು ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಹಾಗೆ ಹೇಳಿಕೆ ನೀಡಲು ಅವರು ಸ್ವತಂತ್ರರು. ನನಗೆ ವಯಸ್ಸಾಗಿರಬಹುದು. ನಾನೇನೂ ಸುಮ್ಮನೆ ಕೂರುವುದಿಲ್ಲ’ ಎಂದರು.

ಕೋಲಾರದಲ್ಲಿ ಮಹಿಳಾ ಸಮಾವೇಶ: ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರು ಕೋಲಾರ ಜಿಲ್ಲೆಯವರು. ಇದೇ 14 ಅಥವಾ 16ರಂದು ಕೋಲಾರದಲ್ಲಿ ಮಹಿಳಾ ಸಮಾವೇಶ ನಡೆಸಲಾಗುವುದು. ಅಲ್ಲಿಂದಲೇ ಜೆಡಿಎಸ್‌ನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ದೇವೇಗೌಡ ತಿಳಿಸಿದರು.

‘ಮಂಜುನಾಥ್ ರಾಜಕೀಯ ಪ್ರವೇಶ: ಜನ ಒಪ್ಪಲಾರರು’

‘ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅವರು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದು ಜನರು ಪ್ರೀತಿಯಿಂದ ಒತ್ತಾಯಿಸುತ್ತಿದ್ದಾರೆ. ಆದರೆ ರಾಜಕೀಯ ಪ್ರವೇಶದ ಆಹ್ವಾನವನ್ನು ಅವರು ಒಪ್ಪಲಾರರು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಈಗಿನ ರಾಜಕಾರಣ ಯಾವ ಸ್ಥಿತಿಗೆ ತಲುಪಿದೆ ಎಂಬುದು ಗೊತ್ತಿದೆ. ಜಯದೇವ ಸಂಸ್ಥೆಯ ನಿರ್ದೇಶಕರಾಗಿ ಅವರು ರಾಷ್ಟ್ರ ಮಟ್ಟದಲ್ಲಿ ಉನ್ನತ ಗೌರವ ಪಡೆದಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸವನ್ನು ನಾನು ಮಾಡುವುದಿಲ್ಲ. ಈಗಿನ ಸನ್ನಿವೇಶದಲ್ಲಿ ರಾಜಕಾರಣ ಪ್ರವೇಶಿಸುವಂತೆ ಮಂಜುನಾಥ್‌ ಅವರಿಗೆ ನಾನು ಸಲಹೆ ನೀಡುವುದಿಲ್ಲ’ ಎಂದರು.

ಸರ್ಕಾರಕ್ಕೆ ಶ್ಲಾಘನೆ: ‘ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ. ಈ ಪ್ರಕರಣದ ಕುರಿತು ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಸರ್ಕಾರ ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT