ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದರ ವಿರುದ್ದವೇ ಅಸಮಾಧಾನ: ಬಿಜೆಪಿಯೊಳಗೆ ‘ಬಣ’ ರಾಜಕಾರಣ ಉಲ್ಭಣ

Published 10 ಮಾರ್ಚ್ 2024, 23:49 IST
Last Updated 10 ಮಾರ್ಚ್ 2024, 23:49 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಹಾಲಿ ಸಂಸದರು ಕ್ಷೇತ್ರ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಶಾಸಕರಿಂದ ಹಾಲಿ ಸಂಸದರು ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ.

ಚಿಕ್ಕಮಗಳೂರು– ಉಡುಪಿ ಕ್ಷೇತ್ರದ ಬಳಿಕ ತುಮಕೂರು ಕ್ಷೇತ್ರದಲ್ಲೂ ‘ಗೋ ಬ್ಯಾಕ್‌’ ಕೂಗು ಕೇಳಿಬಂದಿದೆ. ಚಿಕ್ಕಮಗಳೂರು, ತುಮಕೂರು, ಬೀದರ್, ಉತ್ತರ ಕನ್ನಡ, ಮೈಸೂರು, ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಹಾಲಿ ಸಂಸದರು ಮತ್ತು ಹೊಸ ಆಕಾಂಕ್ಷಿಗಳಿಂದಲೂ ಒತ್ತಡ ಹೆಚ್ಚಾಗಿದೆ.

ಚಿಕ್ಕಮಗಳೂರು–ಉಡುಪಿ ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆರಂಭದಿಂದಲೇ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮತದಾರರು ಮಾತ್ರವಲ್ಲದೆ ಕಾರ್ಯಕರ್ತರೂ ಶೋಭಾ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಒಮ್ಮೆ ಗೆದ್ದು ಹೋದ ಮೇಲೆ ಕ್ಷೇತ್ರದ ಕಡೆ ತಲೆ ಹಾಕುವುದಿಲ್ಲ ಮತ್ತು ಕಾರ್ಯಕರ್ತರ ಜತೆ ಸಂಪರ್ಕವನ್ನೂ ಇಟ್ಟುಕೊಳ್ಳುವುದಿಲ್ಲ, ಭೇಟಿಗೆ ಅವಕಾಶವೇ ಸಿಗುವುದಿಲ್ಲ. ಇವೆಲ್ಲ ಕಾರಣಗಳಿಂದಾಗಿ ಆಕ್ರೋಶ ಎದುರಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಈ ಕ್ಷೇತ್ರದ ಮೇಲೆ ಸಿ.ಟಿ.ರವಿ ಅವರೂ ಕಣ್ಣು ಹಾಕಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಗೂ ಮೊದಲೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ಪ್ರಮೋದ್‌ ಮಧ್ವರಾಜ್‌ ಅವರೂ ಆಕಾಂಕ್ಷಿ. ಶೋಭಾ ಹೊರ ಜಿಲ್ಲೆಯವರು. ಜಿಲ್ಲೆಯವರಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ಕ್ಷೇತ್ರದ ಕಾರ್ಯಕರ್ತರು. ಶೋಭಾ ಅವರಿಗೆ ಈಗ ಉಳಿದಿರುವ ಆಸರೆ ಕೇವಲ ಯಡಿಯೂರಪ್ಪ. ಅವರು ಮಾತ್ರ ದಡ ದಾಟಿಸಬಲ್ಲರು. ಆದರೆ, ಕಾರ್ಯಕರ್ತರು ಕೈ ಹಿಡಿಯಬಲ್ಲರೇ ಎಂಬ ಪ್ರಶ್ನೆ ಪಕ್ಷವನ್ನು ಕಾಡುತ್ತಿದೆ.

ತುಮಕೂರು ಕ್ಷೇತ್ರದ ಟಿಕೆಟ್‌ ಸಿಗಬಹುದು ಎಂಬ ಕಾರಣಕ್ಕೆ ವಿ.ಸೋಮಣ್ಣ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಹೊರಗಿನವರು ಬರಬಾರದು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಮಾಧುಸ್ವಾಮಿಗೆ ಟಿಕೆಟ್‌ ನೀಡಬಾರದು ಎಂದು ಹಾಲಿ ಸಂಸದ ಜಿ.ಎಸ್‌.ಬಸವರಾಜು ಪಟ್ಟು ಹಿಡಿದಿದ್ದಾರೆ. ಭಾನುವಾರ ಮಾಧುಸ್ವಾಮಿ ಅವರ ಬೆಂಬಲಿಗರು ತಿಪಟೂರಿನಲ್ಲಿ ಪ್ರತಿಭಟನೆ ನಡೆಸಿ, ತಮ್ಮ ನಾಯಕನಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸುವುದರ ಜತೆಗೆ ‘ಗೋ ಬ್ಯಾಕ್‌ ಸೋಮಣ್ಣ’ ಎಂಬ ಘೋಷಣೆ ಮೊಳಗಿಸಿದ್ದಾರೆ.

ಬೀದರ್‌ನಲ್ಲಿ ಹಾಲಿ ಸಂಸದ ಭಗವಂತ ಖೂಬಾ ಅವರನ್ನು ಮತ್ತೆ ಕಣಕ್ಕಿಳಿಸುವುದನ್ನು ಜಿಲ್ಲೆಯ ಬಹುಪಾಲು ಶಾಸಕರು ಮತ್ತು ಮಾಜಿ ಶಾಸಕರು ವಿರೋಧಿಸುತ್ತಿದ್ದಾರೆ. ಪರ್ಯಾಯ ಅಭ್ಯರ್ಥಿ ಆಯ್ಕೆ ಮಾಡಬೇಕೆಂಬ ಹೋರಾಟದ ನೇತೃತ್ವವನ್ನು ಶಾಸಕ ಪ್ರಭು ಚವ್ಹಾಣ್ ವಹಿಸಿದ್ದಾರೆ.

ಮೈಸೂರಿನಲ್ಲಿ ತಮಗೆ ಟಿಕೆಟ್‌ ತಪ್ಪಬಹುದು ಎಂದು ಆತಂಕಕ್ಕೆ ಒಳಗಾಗಿರುವ ಸಂಸದ ಪ್ರತಾಪ್‌ ಸಿಂಹ ಅವರು ಸುದ್ದಿಗೋಷ್ಠಿ ಮಾಡಿ ತಮ್ಮ ಸಾಧನೆಯ ಪಟ್ಟಿ ಮುಂದಿಟ್ಟಿದ್ದಾರೆ. ಈ ಕ್ಷೇತ್ರದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೇ ಟಿಕೆಟ್‌ ಸಿಗಬಹುದು ಎಂಬ ಮಾತುಗಳು ದೆಹಲಿಯಲ್ಲಿ ದಟ್ಟವಾಗಿ ಹಬ್ಬಿರುವ ಕಾರಣ ಪ್ರತಾಪ್ ಆತಂಕಕ್ಕೆ ಒಳಗಾಗಿದ್ದಾರೆ.

ಮೈಸೂರು ಮತ್ತು ಕೊಡಗು ಜಿಲ್ಲೆಯ ಪಕ್ಷದ ಮಾಜಿ ಶಾಸಕರು ಪ್ರತಾಪ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡಲಿಲ್ಲ ಎಂಬ ಮುನಿಸು ಎಲ್ಲ ಮಾಜಿ ಶಾಸಕರದು ಎಂದು ಬಿಜೆಪಿ ಮೂಲಗಳು ಹೇಳಿವೆ.

ಹಾವೇರಿಯಲ್ಲಿ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪಟ್ಟು ಹಿಡಿದಿದ್ದಾರೆ. ‘ಬಸವರಾಜ ಬೊಮ್ಮಾಯಿ ಈಗಾಗಲೇ ಶಾಸಕರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷ ಹೇಳಿದಂತೆ ಕೇಳಿದ್ದೇನೆ. ನನ್ನ ಪುತ್ರನಿಗೆ ಅವಕಾಶ ನೀಡಬೇಕು’ ಎಂಬ ವಾದವನ್ನು ಈಶ್ವರಪ್ಪ ಮಂಡಿಸಿದ್ದಾರೆ.

ಮಂಗಳೂರು ಕ್ಷೇತ್ರದಲ್ಲಿ ನಳಿನ್‌ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಇದ್ದರೂ, ಅದು ಸ್ಫೋಟಗೊಂಡಿಲ್ಲ. ಆದರೆ, ನಳಿನ್ ಕುಮಾರ್ ಕಟೀಲ್ ಅವರು ಇತರ ಸಂಸದರಂತೆ ಜಿದ್ದಿಗೆ ಬಿದ್ದಿಲ್ಲ. ಪಕ್ಷವು ಅವಕಾಶ ನೀಡಿದರೆ ಸ್ಪರ್ಧಿಸುವುದು; ಟಿಕೆಟ್‌ ನಿರಾಕರಿಸಿದರೆ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಳ್ಳುವುದು ಎಂಬ ಯೋಚನೆಯಲ್ಲಿ ಅವರು ಇದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT