ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಬಿಜೆಪಿ ಗಳಿಸಿದ್ದು ಎಲ್ಲಿ, ಕಳೆದುಕೊಂಡಿದ್ದು ಎಲ್ಲಿ?

Published 6 ಜೂನ್ 2024, 23:59 IST
Last Updated 6 ಜೂನ್ 2024, 23:59 IST
ಅಕ್ಷರ ಗಾತ್ರ

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ 303 ಕ್ಷೇತ್ರಗಳಲ್ಲಿ 208 ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ ಹಾಗೂ 92 ಕ್ಷೇತ್ರಗಳಲ್ಲಿ ಸೋತಿದೆ. ಕಳೆದ ಬಾರಿ ಗೆದ್ದ ಮೂರು ಕ್ಷೇತ್ರಗಳನ್ನು ಮಿತ್ರ ಪಕ್ಷಗಳಾದ ಜೆಡಿಎಸ್‌, ಜೆಡಿಯು ಹಾಗೂ ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಟ್ಟಿದೆ. ಹೊಸದಾಗಿ 32 ಕಡೆಗಳಲ್ಲಿ ಗೆದ್ದಿದೆ.

ಪಕ್ಷವು ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸಂವಿಧಾನದ ತಿದ್ದುಪಡಿ ಮಾಡಲಿದೆ ಎಂದು ಬಿಜೆಪಿಯ ಅನಂತಕುಮಾರ್ ಹೆಗಡೆ ಅವರು ಚುನಾವಣಾ ಪೂರ್ವದಲ್ಲಿ ಹೇಳಿಕೆ ನೀಡಿದ್ದರು. ಕಮಲ ಪಾಳಯದ ಹಲವು ನಾಯಕರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಹಾಗೂ ಮೀಸಲಾತಿ ಕಿತ್ತುಕೊಳ್ಳಲಿದೆ ಎಂದು ಕಾಂಗ್ರೆಸ್‌ ಪ್ರಚಾರ ನಡೆಸಿತ್ತು. ಪರಿಣಾಮವಾಗಿ, ಬಿಜೆಪಿಯು ಕಳೆದ ಬಾರಿ ಗೆದ್ದಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 29 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಸೋತ 92 ಕ್ಷೇತ್ರಗಳಲ್ಲಿ ಬಹುತೇಕ ಗ್ರಾಮೀಣ ಭಾರತದಲ್ಲಿವೆ. ಈ ಪೈಕಿ, 42 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿವೆ. ಇದರಲ್ಲಿ ಮಹಾರಾಷ್ಟ್ರದ ಒಂಬತ್ತು, ಕರ್ನಾಟಕ ಹಾಗೂ ರಾಜಸ್ಥಾನದ ಎಂಟು ಹಾಗೂ ಉತ್ತರ ಪ್ರದೇಶದ 4 ಕ್ಷೇತ್ರಗಳು ಸೇರಿವೆ. 

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಈ ಸಲ ಬಹುದೊಡ್ಡ ನಷ್ಟವಾಗಿದೆ. ಈ ರಾಜ್ಯದಲ್ಲಿ 29 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಬಿಜೆಪಿ ಕೈಯಲ್ಲಿದ್ದ 25 ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ ಕಿತ್ತುಕೊಂಡಿದೆ. ರಾಜ್ಯದ 16 ಲೋಕಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ವಿಜೇತ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಕಮಲ ‍ಪಾಳಯ ಗೆದ್ದಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಸಮಾಜವಾದಿ ಅಥವಾ ಕಾಂಗ್ರೆಸ್‌ ದ್ವಿತೀಯ ಸ್ಥಾನ ಗಳಿಸಿವೆ. ಬಿಎಸ್‌ಪಿಯ ‘ಪರೋಕ್ಷ ಸಹಕಾರ’ ಇಲ್ಲದಿದ್ದರೆ ಕೇಸರಿ ಪಡೆಯು ರಾಜ್ಯದಲ್ಲಿ ಇನ್ನಷ್ಟು ಹೀನಾಯ ಸೋಲು ಕಾಣುತ್ತಿತ್ತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಾರೆ. ಬಿಎಸ್‌ಪಿಯು ಕಳೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಸಲ ಸೊನ್ನೆ ಸುತ್ತಿದೆ. 34 ವರ್ಷಗಳ ಚುನಾವಣಾ ರಾಜಕಾರಣದ ಇತಿಹಾಸದಲ್ಲಿ ಪಕ್ಷವು ರಾಜ್ಯದಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿಲ್ಲ. 

ಇನ್ನೊಂದೆಡೆ, ಮಹಾರಾಷ್ಟ್ರದಲ್ಲಿ ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ವಂಚಿತ್‌ ಬಹುಜನ ಅಘಾಡಿ ಪಕ್ಷದ ಸ್ಪರ್ಧೆಯಿಂದ ಮತ ವಿಭಜನೆಯಾಗಿರುವುದು ಸ್ಪಷ್ಟವಾಗಿದೆ. ಈ ಪಕ್ಷವು ಯಾವುದೇ ಕ್ಷೇತ್ರವನ್ನು ಗೆದ್ದಿಲ್ಲ. ಆದರೆ, ನಾಲ್ಕು ಕ್ಷೇತ್ರಗಳಲ್ಲಿ ವಿಜೇತ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದೆ. ಮೂರರಲ್ಲಿ ಶಿವಸೇನಾ ಹಾಗೂ ಒಂದರಲ್ಲಿ ಬಿಜೆಪಿ ಗೆದ್ದಿವೆ. ‍ಪ್ರಕಾಶ್‌ ಅಂಬೇಡ್ಕರ್ ಅವರು ಅಕೋಲಾದಲ್ಲಿ ಸ್ಪರ್ಧಿಸಿ 2.76 ಲಕ್ಷ ಮತಗಳನ್ನು ಪಡೆದಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 49,626 ಮತಗಳು. ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಶಿವಸೇನಾದ ಅಭ್ಯರ್ಥಿ 48 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ವಿಬಿಎ ಅಭ್ಯರ್ಥಿಗೆ 10,052 ಮತಗಳು ಸಿಕ್ಕಿವೆ. 

2019ರಲ್ಲಿ ಗೆದ್ದ 303 ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ಷೇತ್ರಗಳು. ಈ ಸಲ ಬಿಜೆಪಿಯು 48 ಕ್ಷೇತ್ರಗಳನ್ನಷ್ಟೇ ಉಳಿಸಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT