ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಬಿಜೆಪಿ–ಜೆಡಿಎಸ್‌ ನಾಯಕರ ಮೊದಲ ಸಭೆ

ಪರಿಷತ್‌ ಚುನಾವಣೆ ಮತ್ತು ಕಾರ್ಯಕರ್ತರ ಸಮನ್ವಯ ಕುರಿತು ಚರ್ಚೆ
Published 21 ಜನವರಿ 2024, 15:33 IST
Last Updated 21 ಜನವರಿ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಎನ್‌ಡಿಎ ಒಕ್ಕೂಟ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ಅಧಿಕೃತ ಸಭೆಯು ಡಾಲರ್ಸ್‌ ಕಾಲೋನಿಯಲ್ಲಿರುವ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಭಾನುವಾರ ನಡೆಯಿತು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಮತ್ತು ವಿಧಾನ ಪರಿಷತ್ತಿನ ಉಳಿದ ಆರು ಸ್ಥಾನಗಳ ಚುನಾವಣೆಯ ಸೀಟು ಹಂಚಿಕೆ ಕುರಿತು ಮುಕ್ತ ಮತ್ತು ಸೌಹಾರ್ದವಾಗಿ ಮಾತುಕತೆ ನಡೆಯಿತು. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ರಾಮ ಮಂದಿರ ಉದ್ಘಾಟನೆಯ ಬಳಿಕ ನಡೆಸಲು ತೀರ್ಮಾನಿಸಲಾಯಿತು.

ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲಲು ಶ್ರಮಿಸಬೇಕು. ಈ ಕುರಿತು ಎರಡೂ ಪಕ್ಷಗಳ ಕಾರ್ಯಕರ್ತರಿಗೂ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂಬ ಚರ್ಚೆಯೂ ನಡೆಯಿತು. ಎಚ್‌.ಡಿ.ಕುಮಾರಸ್ವಾಮಿ ಅವರು ಬಹಳ ವರ್ಷಗಳ ಬಳಿಕ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದು, ಪರಸ್ಪರ ಹಳೆಯ ದಿನಗಳನ್ನು ನೆನಪಿಸಿಕೊಂಡರು ಎಂದು ಮೂಲಗಳು ಹೇಳಿವೆ.

ಸಭೆ ನಡೆಸುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ ಬೆನ್ನಲ್ಲೇ ಈ ಸಭೆ ಆಯೋಜಿಸಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ವಿಧಾನ ಪರಿಷತ್ತಿನ ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರ ಚರ್ಚೆ ನಡೆದಿದೆ. ಚರ್ಚಿತ ವಿಷಯಗಳನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು, ಅತಿ ಶೀಘ್ರವೇ ಅಭ್ಯರ್ಥಿಗಳ ಘೋಷಣೆಗೆ ತೀರ್ಮಾನಿಸಿದ್ದೇವೆ. ಎರಡೂ ಪಕ್ಷಗಳ ನಾಯಕರ ಮಧ್ಯೆ ಅರ್ಥಪೂರ್ಣ ಚರ್ಚೆ ನಡೆದಿದೆ’ ಎಂದು ಹೇಳಿದರು.

‘ಅಭ್ಯರ್ಥಿಗಳ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಲೋಕಸಭಾ ಚುನಾವಣೆ ಸಂಬಂಧ ಮುಂದಿನ ದಿನಗಳಲ್ಲಿ ವರಿಷ್ಠರು ಚರ್ಚಿಸಲಿದ್ದಾರೆ. ತಳಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಿಕೊಂಡು ಹೋಗುವ ವಿಚಾರದಲ್ಲಿ ಸಮಸ್ಯೆ ಇಲ್ಲ’ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಇಂದು ಮೊದಲ ಹಂತದ ಸಭೆ ನಡೆಸಿದ್ದೇವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಮತ್ತು ಮುಂಬರುವ ವಿಧಾನ ಪರಿಷತ್ತಿನ ಇತರ ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ’ ಎಂದು ವಿವರಿಸಿದರು.

‘ವಿಧಾನ ಪರಿಷತ್ ಚುನಾವಣೆಯ ಗೆಲುವಿನ ಮೂಲಕ ಲೋಕಸಭಾ ಚುನಾವಣೆಗೆ ಸಂದೇಶ ಕಳಿಸಲಿದ್ದೇವೆ. ಕೇಂದ್ರದಲ್ಲಿ ಮೋದಿ ಅವರ ಕೈಬಲಪಡಿಸುವುದರ ಜತೆಗೆ ಮತ್ತೆ ಅವರನ್ನು ಪ್ರಧಾನಿ ಮಾಡಲು ಎರಡೂ ‍ಪಕ್ಷಗಳು ಒಟ್ಟಾಗಿ ಶ್ರಮಿಸುತ್ತೇವೆ. ರಾಜ್ಯದಲ್ಲಿರುವ ಕೆಟ್ಟ ಸರ್ಕಾರ ತೊಲಗಬೇಕು’ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮವಿಗ್ರಹದ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ರಾಜ್ಯದಲ್ಲೂ ರಜೆ ನೀಡಬೇಕು ಎಂದು ಕುಮಾರಸ್ವಾಮಿ ಮತ್ತು ವಿಜಯೇಂದ್ರ ಒತ್ತಾಯಿಸಿದರು.

ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಚಿವ ಗೋವಿಂದ ಕಾರಜೋಳ, ಜೆಡಿಎಸ್‌ನ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡರಾದ ನಿಖಿಲ್‌ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ ಇದ್ದರು.

ಶಿಕ್ಷಕರ ಕ್ಷೇತ್ರ: ರಂಗನಾಥ್ ಮೈತ್ರಿ ಅಭ್ಯರ್ಥಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನ ಎ.ಪಿ.ರಂಗನಾಥ್ ಅವರೇ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಭಾನುವಾರದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಕಟಣೆ ಹೊರಬೀಳಲಿದೆ  ಎಂದು ಬಿಜೆಪಿ ಮೂಲಗಳು ಹೇಳಿವೆ. ಜೆಡಿಎಸ್‌ಗೆ ಗೆಲ್ಲುವ ಅವಕಾಶ ಹೆಚ್ಚಾಗಿರುವುದರಿಂದ ಈ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ವಿಧಾನ ಪರಿಷತ್‌ನ ಇತರ ಆರು ಕ್ಷೇತ್ರಗಳ ಚುನಾವಣೆ ಸಂದರ್ಭ ಬಿಜೆಪಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT