ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗಿಲ್ಲ ಅವಕಾಶ; ಹಣಕ್ಕೆ ಮಣೆ

Published 7 ಏಪ್ರಿಲ್ 2024, 0:28 IST
Last Updated 7 ಏಪ್ರಿಲ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ, ಶುಲ್ಕ ಕಡಿಮೆ ಮಾಡುತ್ತೇವೆ, ಸುಸಜ್ಜಿತ ವಸತಿ ಶಾಲೆ ತರುತ್ತೇವೆ, ಬಡ ವರ್ಗದ ವಿದ್ಯಾರ್ಥಿಗೂ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಂತಹ ನೀತಿ ರೂಪಿಸುತ್ತೇವೆ.. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಉಚಿತ ಶಿಕ್ಷಣ ಕೊಡಿಸುತ್ತೇವೆ...

ಪ್ರತಿ ಚುನಾವಣೆ ಬಂದಾಗಲೂ ಶಿಕ್ಷಣ ಕ್ಷೇತ್ರವನ್ನು ನೆನಪಿಸಿಕೊಳ್ಳುವ ರಾಜಕೀಯ ಪಕ್ಷಗಳ ನಾಯಕರು, ಪ್ರಚಾರದ ವೇಳೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂಥ ಭರವಸೆ, ವಾಗ್ದಾನಗಳ ಹೊಳೆಯನ್ನೇ ಹರಿಸುತ್ತಾರೆ. ಚುನಾವಣೆ ಮುಗಿದ ಮೇಲೆ ಎಲ್ಲ ನಾಯಕರು ತಮ್ಮ ಆಶ್ವಾಸನೆಗಳನ್ನು ಮರೆತು ಬಿಡುತ್ತಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಭರವಸೆ ನೀಡುವ ಮಾತುಗಳ ನಡುವೆಯೇ, ಒಂದೊಂದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಕಳೆದ ವರ್ಷ ನಗರದ ಚಿಕ್ಕಪೇಟೆ ಸರ್ಕಾರಿ ಶಾಲೆಯ ₹100 ಕೋಟಿ ಮೌಲ್ಯದ ಆಸ್ತಿಯನ್ನೇ ಮಾರಾಟ ಮಾಡಲು ಸಂಚು ನಡೆದಿತ್ತು. ಕೊನೆಗೆ ಶಿಕ್ಷಕಿಯೊಬ್ಬರ ಹೋರಾಟದಿಂದ ಆಸ್ತಿ ಉಳಿದಿದೆ. ಹೀಗೆ ಮಹಾನಗರದಲ್ಲಿ ಸರ್ಕಾರಿ ಶಾಲೆಗಳ ಆಸ್ತಿ ಮೇಲೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳ, ರಾಜಕಾರಣಿಗಳ ಕಣ್ಣು ಆಗಾಗ್ಗೆ ಬೀಳುತ್ತಲೇ ಇದೆ.

ಶುಲ್ಕ ನಿಯಂತ್ರಣವಿಲ್ಲ..

ನಗರದ ಪ್ರಮುಖ ನರ್ಸರಿ ಶಾಲೆಗಳ ಪ್ರವೇಶಕ್ಕೇ ಲಕ್ಷದಷ್ಟು ಶುಲ್ಕ ಪಾವತಿಸಬೇಕಿದೆ. ಅದರಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕಿದ್ದರೆ ಒಂದು ವರ್ಷದ ಮೊದಲೇ ಮಗುವಿಗೆ ಸೀಟು ಕಾಯ್ದಿರಿಸಬೇಕು! ಇನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆಯುವುದು ದೊಡ್ಡ ತ್ರಾಸ ಎನಿಸುತ್ತಿದೆ. ಶಿಕ್ಷಣ ಕ್ಷೇತ್ರ‌ದ ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ‘ದುಬಾರಿ‘ ಶುಲ್ಕದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗಿಲ್ಲ.

ನಗರದಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಣೆ ಆಗದಿರುವ ಕಾರಣಕ್ಕೆ, ಬಡವರ ಮಕ್ಕಳು ಅನಿವಾರ್ಯವಾಗಿ ಇಂಥ ದುಬಾರಿ ಶುಲ್ಕಗಳ ಖಾಸಗಿ ಶಾಲೆಗಳತ್ತ ಹೆಜ್ಜೆ ಹಾಕುವಂತಾಗಿದೆ. ನಗರದಲ್ಲಿರುವ ಹೆಚ್ಚಿನ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಮಾಲೀಕತ್ವದ್ದೇ ಆಗಿರುವುದರಿಂದ, ಶುಲ್ಕ ಇಳಿಕೆ ಅಥವಾ ನಿಯಂತ್ರಣ, ಸರ್ಕಾರಿ ಶಾಲಾ– ಕಾಲೇಜುಗಳ ಅಭಿವೃದ್ಧಿ ಇವೆಲ್ಲ ಹೇಗೆ ಸಾಧ್ಯ ಎಂದು ಜನರೇ ಪ್ರಶ್ನಿಸುತ್ತಾರೆ. ಹೀಗೆ ಬಡ, ಮಧ್ಯಮವರ್ಗದ ಕುಟುಂಬದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಿಕ್ಷಣಗಳಿಗೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಬಸವಳಿದ ವಿ.ವಿಗಳು:

ಶಾಲಾ, ಕಾಲೇಜುಗಳದ್ದು ಒಂದು ಕಥೆಯಾದರೆ, ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳದ್ದು ಇನ್ನೊಂದು ಕಥೆ. ಈ ವಿ.ವಿಗಳಲ್ಲಿ ನಿವೃತ್ತರಿಗೆ ವೇತನ ಕೊಡಲು ಆರ್ಥಿಕ ಸಮಸ್ಯೆ ಎದುರಾಗುತ್ತಿದೆ. ವಿ.ವಿಗಳ ನಿರ್ವಹಣೆ ಕಷ್ಟವಾಗಿದ್ದು, ಶಿಕ್ಷಣ ಇಲಾಖೆಗೆ ಬರುತ್ತಿರುವ ಅನುದಾನ ಸಹ ಕಡಿಮೆಯಾಗಿದೆ ಎಂದು ಸಚಿವರೊಬ್ಬರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದರು.

ಬೆಂಗಳೂರಿನಲ್ಲಿ ಹಲವು ವಿ.ವಿಗಳಿದ್ದು ಅವುಗಳು ಮೂಲಸೌಕರ್ಯದಿಂದ ಬಳಲುತ್ತಿವೆ. ಇದಕ್ಕೆ ಸಚಿವರ ಮಾತೇ ಸಾಕ್ಷಿಯಂತಿದೆ. ಇನ್ನು ಖಾಸಗಿ ವಿ.ವಿಗಳ ಸಂಖ್ಯೆ ಹೆಚ್ಚಿದ್ದರೂ ಬಡ ಮಕ್ಕಳ ಪಾಲಿಗೆ ಕೈಗೆಟುಕದ ನಕ್ಷತ್ರವಾಗಿವೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಕಿರಿದಾದ ಸ್ಥಳಗಳಲ್ಲಿ ಶಾಲೆ, ಕಾಲೇಜುಗಳನ್ನು ತೆರೆಯುತ್ತಿವೆ. ಇಂಥವುಗಳಿಗೆ ಆಟದ ಮೈದಾನವಿರುವುದಿಲ್ಲ, ನುರಿತ ಶಿಕ್ಷಕರ ಕೊರತೆಯಿರುತ್ತದೆ. ಇಂಥ ಸಂಸ್ಥೆಗಳ ಬಗ್ಗೆ ಜನಪ್ರತಿನಿಧಿಗಳು ಎಲ್ಲೂ ಧ್ವನಿ ಎತ್ತುವುದೂ ಇಲ್ಲ. ಅನಿವಾರ್ಯವಾಗಿ ಕೆಲ ಪೋಷಕರು ಸಾವಿರಾರು ರೂಪಾಯಿ ಪಾವತಿಸಿ ಮಕ್ಕಳನ್ನು ಅಂತಹ ಸಂಸ್ಥೆಗಳಿಗೆ ಸೇರಿಸುತ್ತಿದ್ದಾರೆ.

‌ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ನೇಮಕಗೊಂಡಿದ್ದ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರು ಎರಡು ವರ್ಷಗಳ ಹಿಂದೆ ದಿಟ್ಟಹೆಜ್ಜೆ ಇಟ್ಟಿದ್ದರು. ಇದಕ್ಕೆ ಶಾಸಕರಿಂದ ಸ್ಪಂದನೆ ಸಿಗಲಿಲ್ಲ.

ಸರ್ಕಾರಿ ಶಾಲೆಗಳನ್ನು ಶಾಸಕರು ದತ್ತು ಪಡೆದು, ಅಭಿವೃದ್ಧಿ ಪಡಿಸುವ ಯೋಜನೆಯನ್ನು ದೊರೆಸ್ವಾಮಿ ಅವರು ಜಾರಿಗೊಳಿಸಿದ್ದರು. ತಲಾ ಮೂರು ಶಾಲೆಗಳನ್ನು ಅಭಿವೃದ್ಧಿಪಡಿಸುವಂತೆ ನಗರದ ಎಲ್ಲ ಶಾಸಕರಿಗೆ ದತ್ತು ಸ್ವೀಕಾರ ಪತ್ರಗಳನ್ನು ಹಸ್ತಾಂತರಿಸಿದ್ದರು. ಆದರೆ, ಕೆಲ ಶಾಸಕರು ತಾವು ದತ್ತು ಪಡೆದ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಹಸ್ತಾಂತರಿಸಲೇ ಇಲ್ಲ. ಶಾಲೆಯತ್ತ ತಿರುಗಿಯೂ ನೋಡಲಿಲ್ಲ.

ವಾರ್ಡ್‌ ಹಂತದಲ್ಲಿ ನವೋದಯ ಶಾಲೆಗೆ ಬೇಡಿಕೆ

5 ರಿಂದ 12ನೇ ತರಗತಿವರೆಗೆ ಗ್ರಾಮ ಪಂಚಾಯಿತಿ ಮತ್ತು ನಗರದ ವಾರ್ಡ್ ಹಂತದಲ್ಲಿ ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸುಸಜ್ಜಿತ ರಾಜೀವ್ ಗಾಂಧಿ ಸಾರ್ವಜನಿಕ ನವೋದಯ ಶಾಲೆಗಳನ್ನು ಪ್ರಾರಂಭಿಸಲು ಮುಂದಿನ ನಾಲ್ಕು ವರ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರ ಮಾತ್ರ ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಕೈ ಹಾಕಿಲ್ಲ. ಸಾವಿರ ಶಾಲೆಗಳಲ್ಲಿ ಉಭಯ ಮಾಧ್ಯಮ (ಆಂಗ್ಲ ಮತ್ತು ಕನ್ನಡ) ಪ್ರಾರಂಭಿಸುವ ತೀರ್ಮಾನವನ್ನೂ ಕೈ ಬಿಡಬೇಕು. ಪೂರ್ವ ಪ್ರಾಥಮಿಕದಿಂದಲೇ ಪಂಚಾಯಿತಿಗೊಂದು ಸಾರ್ವಜನಿಕ ಶಾಲೆ ಪ್ರಾರಂಭಿಸುವ ಬದಲು 2017ರ ‘ಸರ್ಕಾರಿ ಶಾಲೆಗಳ ಸಬಲೀಕರಣ ವರದಿ’ಯ ತೀರ್ಮಾನದಂತೆ ಪೂರ್ವ ಪ್ರಾಥಮಿಕದಿಂದ 4ನೇ ತರಗತಿವರೆಗೆ ಬುನಾದಿ ಪ್ರಾಥಮಿಕ ಶಿಕ್ಷಣವನ್ನು ಆಯಾ ಹಳ್ಳಿ ಹಟ್ಟಿ ಹಾಡಿಗಳಲ್ಲಿ ಉಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು. 

ಸರ್ಕಾರ ಶಿಕ್ಷಣದ ನೀತಿಯೇ ಸರಿಯಿಲ್ಲ

ವಿಧಾನಸೌಧದ ಅಕ್ಕಪಕ್ಕದಲ್ಲೇ ಸಾಕಷ್ಟು ಸರ್ಕಾರಿ ಶಿಕ್ಷಣ ಸಂಸ್ಥೆಗಳಿವೆ. ಅವುಗಳು ಮೂಲಸೌಕರ್ಯದಿಂದ ಬಳಲುತ್ತಿವೆ. ವಿ.ವಿಗಳಲ್ಲಿ ಪ್ರಾಧ್ಯಾಪಕರ ಕೊರತೆಯಿದೆ. ನಗರದಲ್ಲಿ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಲ್ಲ. ಸಿಟಿ ಮಾರುಕಟ್ಟೆಯ ಕೋಟೆ ಪ್ರೌಢಶಾಲೆಯಲ್ಲಿ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸರ್ಕಾರದ ಶಿಕ್ಷಣದ ನೀತಿಯೇ ಸರಿಯಿಲ್ಲ. ಇಂತಹ ಕೆಟ್ಟ ನೀತಿ ಸರ್ಕಾರಿ ಸಂಸ್ಥೆಗಳನ್ನು ಸಾಯಿಸುತ್ತಿದೆ. ಮತ್ತೊಂದೆಡೆ ಸರ್ಕಾರಿ ಸಂಸ್ಥೆಗಳು ಅನುದಾನ ಲಭಿಸದೆ ದಯನೀಯ ಸ್ಥಿತಿ ಎದುರಿಸುತ್ತಿವೆ. -ವಿ.ಎನ್‌.ರಾಜಶೇಖರ್ ಉಪಾಧ್ಯಕ್ಷ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT