ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ಟ್ಯಾಂಕ್‌ಗೆ ವಿಷ: 11 ಶಾಲಾ ಮಕ್ಕಳು ಅಸ್ವಸ್ಥ

Last Updated 15 ಜುಲೈ 2019, 19:14 IST
ಅಕ್ಷರ ಗಾತ್ರ

ಮಂಡ್ಯ: ಕ್ರಿಮಿನಾಶಕ ಬೆರೆಸಿದ ನೀರು ಸೇವಿಸಿದ ಪರಿಣಾಮ ತಾಲ್ಲೂಕಿನ ಎ.ಹುಲ್ಲುಕೆರೆ ಗ್ರಾಮದ ಪ್ರೌಢಶಾಲೆಯ 11 ಮಕ್ಕಳು ಸೋಮವಾರ ಅಸ್ವಸ್ಥಗೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ ಪ್ರಾರ್ಥನೆ ಮುಗಿದ ನಂತರ ಮಕ್ಕಳು ಶಾಲೆಯಲ್ಲಿ ಹಾಲು ಸೇವಿಸಿದ್ದಾರೆ. ಶಾಲಾ ಆವರಣದಲ್ಲಿದ್ದ ನೀರಿನ ಟ್ಯಾಂಕ್‌ನಲ್ಲಿ ಹಾಲು ಕುಡಿದ ಗ್ಲಾಸ್‌ ತೊಳೆದು ನೀರು ಸೇವಿಸಿದ್ದಾರೆ. ನೀರಿನಲ್ಲಿ ವಾಸನೆ ಬಂದ ಕಾರಣ ಕೆಲವು ಮಕ್ಕಳು ನೀರನ್ನು ಉಗಿದಿದ್ದಾರೆ. ನೀರು ಕುಡಿದ ಮಕ್ಕಳೆಲ್ಲರೂ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಶಾಲೆಯ ಶಿಕ್ಷಕರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಸ್ವಸ್ಥ ಮಕ್ಕಳಿಗೆ ಕೊತ್ತತ್ತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ನಗರದ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಕ್ಕಳೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಭತ್ತಕ್ಕೆ ಸಿಂಪಡಿಸುವ ಅತ್ಯಂತ ಅಪಾಯಕಾರಿ ‘ಪೋರಟ್‌’ ಕ್ರಿಮಿನಾಶಕದ ಕಾಳುಗಳನ್ನು ಶಾಲಾ ಆವರಣದಲ್ಲಿದ್ದ ನೀರಿನ ಟ್ಯಾಂಕ್‌ಗೆ ಬೆರೆಸಿರುವುದು ಪತ್ತೆಯಾಗಿದೆ. ವಾಸನೆ ಬಂದ ತಕ್ಷಣ ನೀರನ್ನು ಉಗಿದು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ವಿಷದ ಪರಿಣಾಮಕ್ಕೆ ಟ್ಯಾಂಕ್‌ನಲ್ಲಿದ್ದ ಹುಳುಗಳು ಕೂಡ ಮೃತಪಟ್ಟಿವೆ. ಮಕ್ಕಳು ಕುಡಿಯುವ ನೀರಿಗೆ ಯಾರು ವಿಷ ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT