ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ: ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕ ಸಾವು

Published : 21 ಸೆಪ್ಟೆಂಬರ್ 2024, 13:31 IST
Last Updated : 21 ಸೆಪ್ಟೆಂಬರ್ 2024, 13:31 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ): ಪಟ್ಟಣದ ಬದ್ರಿಕೊಪ್ಪಲಿನ ಗಣೇಶ ಮೆರವಣಿಗೆ ವೇಳೆಯಲ್ಲಿ ಉಂಟಾಗಿದ್ದ ಗಲಭೆಯ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್‌ (28) ಮಿದುಳಿಗೆ ಪಾರ್ಶ್ವವಾಯು ಹೊಡೆದು ಮೃತಪಟ್ಟಿದ್ದಾನೆ.

ಗಲಭೆಯ ನಂತರ ಕಳೆದ ವಾರ ಕಿರಣ್‌ ಊರು ತೊರೆದಿದ್ದ. ಈ ಯುವಕನ ತಂದೆ ಕುಮಾರ್‌ನನ್ನು (ಆರೋಪಿ ಎ–17) ಪೊಲೀಸರು ಬಂಧಿಸಿದ್ದು, ಕಾರಾಗೃಹದಲ್ಲಿದ್ದಾರೆ. ತಂದೆಯ ಬಂಧನದಿಂದ ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಿ ಕಿರಣ್‌ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಕಿರಣ್‌ನನ್ನು ಗುರುವಾರ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದ ಕಿರಣ್‌ ಮೂರು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ. ಕಿರಣ್‌ಗೆ ಎರಡು ವರ್ಷದ ಮಗು ಮತ್ತು ಪತ್ನಿ ಇದ್ದಾರೆ.

‘ತಂದೆ ಜೈಲಿಗೆ ಹೋಗಿದ್ದಾರೆ, ಮಗ ಮೃತಪಟ್ಟಿದ್ದಾನೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಕಿರಣ್‌ ಅವರ ಪತ್ನಿ ಮತ್ತು ಮಗು ಅನಾಥರಾಗಿದ್ದಾರೆ’ ಎಂದು ಕುಟುಂಬಸ್ಥರು ರೋದಿಸಿದರು.

ಸುಳ್ಳು ಸುದ್ದಿ: ಕ್ರಮದ ಎಚ್ಚರಿಕೆ

‘ನಾಗಮಂಗಲ ಗಲಭೆ ಪ್ರಕರಣದಲ್ಲಿ ಎ–1 ಆಗಿದ್ದ ಕಿರಣ್‌ ಮಿದುಳಿಗೆ ಸ್ಟ್ರೋಕ್‌ ಆಗಿ ಮೃತಪಟ್ಟಿದ್ದಾನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ‘ಬ್ರೈನ್‌ ಸ್ಟ್ರೋಕ್‌ನಿಂದ ಮೃತಪಟ್ಟಿರುವ ಕಿರಣ್‌ ಗಲಭೆ ಪ್ರಕರಣದ ಆರೋಪಿಯಾಗಿರುವುದಿಲ್ಲ’ ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದ್ದಾರೆ.

ಎ–1 ಆರೋಪಿ ಕಿರಣ್‌ಕುಮಾರ್‌ ಎಸ್‌. ಬಿನ್‌ ಶ್ರೀನಿವಾಸ ಎಂಬಾತ ಈಗಾಗಲೇ ದಸ್ತಗಿರಿಯಾಗಿ, ಮಂಡ್ಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಲ್ಲಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT