ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗಲಭೆ: ಮಾತಿನ ಕಿಡಿ ಹಚ್ಚಿದ ಎಚ್‌ಡಿಕೆ ಸಿ.ಡಿ

Last Updated 11 ಜನವರಿ 2020, 22:09 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ಗಲಭೆಯ ಕುರಿತಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದು ‘ಕಟ್‌ ಆ್ಯಂಡ್‌ ಪೇಸ್ಟ್‌’ ಸಿ.ಡಿ. ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು ಶನಿವಾರ ತೀವ್ರ ವಾಕ್ಸಮರಕ್ಕೆ ಎಡೆಮಾಡಿತು.

‘ಕಟ್‌ ಆ್ಯಂಡ್‌ ಪೇಸ್ಟ್‌ ಮಾಡಿರುವ ವಿಡಿಯೊ, ಇದಕ್ಕೆಲ್ಲಾ ಅರ್ಥ ಇದೆಯೇನ್ರೀ’ಎಂದು ಬೆಳಿಗ್ಗೆಯೇ ಯಡಿಯೂರಪ್ಪ ಹೇಳಿದ್ದರು. ಶುಕ್ರವಾರವೂ ಇನ್ನೂ ಕೆಲವು ನಾಯಕರು ವಿಡಿಯೊವನ್ನು ಟೀಕಿಸಿದ್ದರು. ಇದೆಲ್ಲದಕ್ಕೂ ಸರಣಿ ಟ್ವೀಟ್‌ ಮೂಲಕ ಪ್ರತ್ಯುತ್ತರ ನೀಡಿದ ಕುಮಾರಸ್ವಾಮಿ, ‘ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಬಿಜೆಪಿ ನಾಯಕರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಎಂದು ನಾನು ನಿನ್ನೆಯೇ ಹೇಳಿದ್ದು ನಿಜವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ.ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್‌ಗಳು ಯಾಕೆಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ? ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬೇಕಿಲ್ಲ. ಅಲ್ಲಿ ರಾಜಕಾರಣ ಮಾಡುತ್ತಿರುವುದು ನೀವು. ವಾಣಿಜ್ಯ ನಗರಿಯಾಗಬೇಕಿದ್ದ ಮಂಗಳೂರು ಕೋಮು ರಾಜಕಾರಣದ ಕಣವಾಗಿದ್ದು‌ ಬಿಜೆಪಿಯಿಂದ’ ಎಂದು ಕುಟುಕಿದ್ದಾರೆ.

ಉದ್ಯೋಗ–ಟೀಕೆ: ‘ರಾಜ್ಯದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ. ಪಕೋಡ ತಯಾರಿಸಲು ಈರುಳ್ಳಿ ಕೊಳ್ಳಲೂ ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ?’ ಎಂದು ಟೀಕಿಸಿದ್ದಾರೆ.

‘ಹಸಿ ಹಸಿ ಸುಳ್ಳುಗಳನ್ನು ಯಾರನ್ನು ಮೆಚ್ಚಿಸಲು ಹೇಳುತ್ತೀರಿ? ನಾಚಿಕೆ ಆಗಬೇಕು ನಿಮಗೆ’ ಎಂದು ಚುಚ್ಚಿದ್ದಾರೆ.

ಎಚ್‌ಡಿಕೆ ಅಲ್ಲ ಸಿಡಿಕೆ
‘ಕುಮಾರಸ್ವಾಮಿ ಅವರು ಸಿ.ಡಿ.ಗಳನ್ನು ಬಿಡುಗಡೆ ಮಾಡುವಲ್ಲಿ ಪರಿಣಿತರು. ಈ ಹಿಂದೆ ಹಲವಾರು ಸಿ.ಡಿ.ಗಳನ್ನು ಸೃಷ್ಟಿಸಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಎಚ್‌ಡಿಕೆ ಎನ್ನುವ ಬದಲು ಸಿಡಿಕೆ ಎಂದು ಕರೆದರೇ ಉತ್ತಮ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

‘ಮಂಗಳೂರು ಪೊಲೀಸರು ತಮ್ಮ ಜೀವ ರಕ್ಷಣೆ ಮಾಡಬಾರದೇ? ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ ನೀಡುವ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ಜನತೆ ಛೀಮಾರಿ ಹಾಕಲಿದ್ದಾರೆ’ ಎಂದು ಶನಿವಾರ ಇಲ್ಲಿ ತಿಳಿಸಿದರು.

‘ಕುಮಾರಸ್ವಾಮಿ ಅವರು ಕೇವಲ ಬಾಯಿ ಚಪಲಕ್ಕೆ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ. ಅವರು ಹೇಳುತ್ತಾರೆ ಎಂದು ಸಿಬಿಐ, ಅಂತರರಷ್ಟ್ರೀಯ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ’ ಎಂದರು.

‘ಡಾ.ರಾಜ್‌ಕುಮಾರ್‌ ಅಂತ್ಯಸಂಸ್ಕಾರದ ವೇಳೆ ನಡೆದ ಗಲಭೆ ನಿಯಂತ್ರಣಕ್ಕೆ ಗೋಲಿಬಾರ್‌ ಮಾಡಲು ಆದೇಶ ನೀಡಿದ್ದು ಇದೇ ಕುಮಾರಸ್ವಾಮಿ, ಆಗ 5 ಮಂದಿ ಮೃತಪಟ್ಟಿದ್ದರು. ಮಂಡ್ಯ ಜಿಲ್ಲೆಯ ತೂಪಲ್ಲಿಯಲ್ಲಿ ಎನ್‌ಕೌಂಟರ್ ಮಾಡುವುದಾಗಿ ಹೇಳಿದ್ದನ್ನೂ ಜನ ಮರೆತಿಲ್ಲ. ಮೋದಿ ಅವರನ್ನು ಹಿಟ್ಲರ್‌ ಎಂದು ಕರೆದ ಸಿದ್ದರಾಮಯ್ಯ ಅವರಿಗೂ ಜನ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿ, ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದಷ್ಟೂ ಎರಡೂ ಪಕ್ಷಗಳು ಇನ್ನಷ್ಟು ಅವನತಿಗೊಳ್ಳಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT