ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳೇ, ವಿಧಾನಸೌಧಕ್ಕೆ ಕಾಲಿಡಬೇಡಿ : ಜಿ.ಟಿ. ದೇವೇಗೌಡ

ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಗೂ ಹಾಜರಾತಿ ಕಡ್ಡಾಯ
Last Updated 20 ಸೆಪ್ಟೆಂಬರ್ 2018, 2:59 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ವಿಧಾನಸೌಧದಲ್ಲಿ ಓಡಾಡುವುದು, ರಾಜಕಾರಣಿಗಳ ಹಿಂದೆ ಸುತ್ತುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ಬೇರೆ ಬೇರೆ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳ ಕುಲಸಚಿವರು ಸರ್ಕಾರಿ ವಾಹನಗಳಲ್ಲಿ ಬೆಂಗಳೂರಿಗೆ ಬರುವುದು, ರಾಜಕಾರಣಿಗಳ ಹಿಂದೆ ಸುತ್ತುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ‘ಅಧಿಕೃತ ಕಾರ್ಯಕ್ರಮ ಅಥವಾ ಅಧಿಕೃತ ಆಹ್ವಾನವಿಲ್ಲದೆ ಯಾವುದೇ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರು ವಿಧಾನಸೌಧಕ್ಕೆ ಬರದಂತೆ ತಡೆಯಲು ಆದೇಶ ಹೊರಡಿಸಲಾಗುವುದು’ ಎಂದರು.

‘ತುರ್ತಾಗಿ ವಿಧಾನಸೌಧಕ್ಕೆ ಬರಬೇಕಾದರೆ ಹಾಗೂ ಜಿಲ್ಲೆಗಳಿಗೆ ಹೋಗಬೇಕಾದರೂ ಅವರು ಇಲಾಖೆಯ ಅನುಮತಿ ಪಡೆಯಬೇಕು’ ಎಂದು ಅವರು ಹೇಳಿದರು.

‘ಕುಲಪತಿ ಹಾಗೂ ಕುಲಸಚಿವರ ಹಾಜರಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸರ್ಕಾರಿ ವಾಹನ ಬಳಸುವ ಕುರಿತು ಚಲನವಲನ (ಮೂವ್‌ಮೆಂಟ್‌) ಪುಸ್ತಕದಲ್ಲಿ ನಮೂದಿಸುವಂತೆ ಆದೇಶದಲ್ಲಿ ನಿರ್ಬಂಧಿಸಲಾಗುವುದು. ದುರ್ಬಳಕೆ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

‘ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದ ಅಧಿಕಾರ ರಾಜ್ಯಪಾಲರಿಗಿದೆ. ಆದರೆ ನೇಮಕಾತಿಯ ಕಡತಗಳನ್ನು ಇಲಾಖೆ ಗಮನಕ್ಕೆ ತಾರದೇ ರಾಜಭವನಕ್ಕೆ ರವಾನಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ಅ.15ರೊಳಗೆ ಸಿಂಡಿಕೇಟ್‌ ಸದಸ್ಯರ ನೇಮಕ

‘ವಿಶ್ವವಿದ್ಯಾಲಯಗಳಲ್ಲಿ ಸಮರ್ಪಕವಾಗಿ ಕೆಲಸ ನಡೆಯಬೇಕಾದರೆ ಅದಕ್ಕೆ ಭದ್ರ ಬುನಾದಿ ಬೇಕು. ಇದಕ್ಕೆ ಪೂರಕವಾಗಿ, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆ ಹಾಗೂ ಸಿಂಡಿಕೇಟ್‌ ಸದಸ್ಯರನ್ನು ಅಕ್ಟೋಬರ್ 15ರೊಳಗೆ ನೇಮಕ ಮಾಡಲಾಗುವುದು’ ಎಂದು ದೇವೇಗೌಡ ಹೇಳಿದರು.

‘ಈ ಬಾರಿ ಅರ್ಹರನ್ನು ಮಾತ್ರ ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ನನ್ನ ಅಧಿಕಾರ ಅವಧಿಯಲ್ಲಿ ವಿಶ್ವವಿದ್ಯಾಲಯಗಳ ರಾಜಕೀಯಕ್ಕೆ ಕಡಿವಾಣ ಹಾಕಲಾಗುವುದು’ ಎಂದರು. ‘ಈ ಬಾರಿಯ ಮೈಸೂರು ದಸರಾದಲ್ಲಿ ‘ಯುವ ಸಂಭ್ರಮಾಚರಣೆ’ ಎಂಬ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ನಾನಾ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT